ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಹಡಪದ ಆಗ್ರಹ

KannadaprabhaNewsNetwork |  
Published : Oct 29, 2026, 02:30 AM IST
ಗಜೇಂದ್ರಗಡ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ಧರಣಿ ಸತ್ಯಾಗ್ರಹ. | Kannada Prabha

ಸಾರಾಂಶ

ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದು ನಮ್ಮ ಮೊದಲ ಹಾಗೂ ಅಂತಿಮ ಬೇಡಿಕೆಯಾಗಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದು ನಮ್ಮ ಮೊದಲ ಹಾಗೂ ಅಂತಿಮ ಬೇಡಿಕೆಯಾಗಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಪುರಸಭೆ ಮಾಜಿ ಸದಸ್ಯ ಎಂ.ಎಸ್. ಹಡಪದ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ಕರ್ನಾಟಕ ಪ್ರಾಂತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದಿಂದ ತಾಲೂಕಿನ ಕೃಷ್ಣಾ ಬಿ ಸ್ಕೀಂ ೩ನೇ ಹಂತ ಕೊಪ್ಪಳ ಏತ ನೀರಾವರಿ ಯೋಜನೆ ಅಡಿ ಬೆಣಚಮಟ್ಟಿ ಸೇರಿ ಇತರ ಕೆರೆಗಳನ್ನು ತುಂಬಿಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.

ನೆರೆಯ ತಾಲೂಕು ಕೇಂದ್ರಗಳ ಭಾಗದ ಕೆರೆಗಳನ್ನು ತುಂಬಿಸಿ ಎಂದು ಅಲ್ಲಿನ ಜನರು ಹೋರಾಡುವ ಮೊದಲೇ ಅಲ್ಲಿನ ಜನಪ್ರತಿನಿಧಿಗಳು ಕೆರೆಗಳನ್ನು ತುಂಬಿಸಿದ್ದಾರೆ. ಆದರೆ ಸತತ ಬರಗಾಲಕ್ಕೆ ತುತ್ತಾಗುತ್ತಿರುವ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಯ ಸಮರ್ಪಕ ಮಾಹಿತಿ ಇಲ್ಲಿನ ಅಧಿಕಾರಿಗಳಾಗಲಿ ಅಥವಾ ಆಡಳಿತವಾಗಲಿ ನೀಡುವಲ್ಲಿ ವಿಫಲವಾಗಿದ್ದಾರೆ. ಪರಿಣಾಮ ಕಳೆದ ೩ ವರ್ಷಗಳಿಂದ ಇಲ್ಲಿನ ಶಾಸಕರು ಕೆರೆ ತುಂಬಿಸುವ ಯೋಜನೆಗೆ ಡಿಪಿಆರ್ ಆಗಿದೆ, ವಾರದಲ್ಲಿ ಕೆರೆಗಳಿಗೆ ನೀರು ಬರುತ್ತದೆ, ಮುಂದಿನ ತಿಂಗಳು ಬರುತ್ತದೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಹೊರತು ಹನಿ ನೀರು ಕೆರೆಗಳಿಗೆ ಬಂದಿಲ್ಲ ಎಂದು ದೂರಿದ ಅವರು, ತಾಲೂಕಿನ ಬೆಣಚಮಟ್ಟಿ, ಮ್ಯಾಕಲಝರಿ, ಕುಂಟೋಜಿ, ನಾಗರಸಕೊಪ್ಪ, ಉಣಚಗೇರಿ, ಮಾಟರಂಗಿ ಮತ್ತು ಗಜೇಂದ್ರಗಡ ಕೆರೆಗಳನ್ನು ತುಂಬಿಸುವ ಯೋಜನೆ ಡಿಪಿಆರ್ ಆಗಿದ್ದು ಯಾವಾಗ, ಸರ್ಕಾರ ಮಟ್ಟದಲ್ಲಿ ನಡೆದ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿದ ಮಾಹಿತಿ ಮತ್ತು ಅಗತ್ಯ ಕಡತಗಳನ್ನು ಬಿಡುಗಡೆ ಮಾಡಬೇಕು, ಕಾಮಗಾರಿ ಯಾವಾಗ ಅಧಿಕೃತವಾಗಿ ಇಲ್ಲಿ ಆರಂಭವಾಗುತ್ತದೆ ಎಂಬ ಮಾಹಿತಿ ನೀಡುವವರೆಗೆ ಪ್ರತಿಭಟನೆ ಹಿಂಪಡೆಯಲ್ಲ ಎಂದ ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಕೃಷ್ಣಾ ಬಿ ಸ್ಕೀಂ ೩ನೇ ಹಂತ ಕೊಪ್ಪಳ ಏತ ನೀರಾವರಿ ಯೋಜನೆ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರತಿಭಟನಕಾರರ ಬೇಡಿಕೆಯನ್ನು ಮನವರಿಕೆ ಮಾಡಿದಾಗ ಸಿಎಂ ನೇತೃತ್ವದಲ್ಲಿ ಇಂದು ಸಭೆ ನಡೆದಿದೆ. ಮುಂದಿನ ನಡುವಳಿಗಳಾದ ಬಳಿಕ ಸಂಪೂರ್ಣ ಮಾಹಿತಿ ನೀಡುವುದಾಗಿ ಅಧಿಕಾರಿ ತಿಳಿಸಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಕಾರರು, ಕಳೆದ ೩ ವರ್ಷಗಳಿಂದ ಡಿಪಿಆರ್ ಆಗಿದೆ ಎಂದು ಇಲ್ಲಿನ ಜನಪ್ರಿತಿನಿಧಿಗಳು ಜನರಿಗೆ ಹೇಳುತ್ತಿದ್ದಾರೆ, ನೀವು ಇಂದು ಸಭೆ ನಡೆಯುತ್ತಿದೆ ಎನ್ನುತ್ತಿದ್ದೀರಿ. ಹೀಗಾಗಿ ಸಂಪೂರ್ಣ ಮಾಹಿತಿ ನೀಡಬೇಕು ಎಂದಾಗ ಕೆರೆಗಳನ್ನು ತುಂಬಿಸುವ ಯೋಜನೆಗೆ ಕುರಿತಂತೆ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. ಇದಕ್ಕೆ ಪ್ರತಿಭಟನಕಾರರು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀವು ಭಾಗವಹಿಸಿದ ಪೋಟೊಗಳು ಹಾಗೂ ಕೈಗೊಂಡ ಮಾಹಿತಿಯನ್ನು ತಹಸೀಲ್ದಾರ್‌ಗೆ ರವಾನಿಸಿ ಇಲ್ಲವೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಾಗ ನ.೨ಕ್ಕೆ ಬರುವುದಾಗಿ ಅವರು ತಿಳಿಸಿದ ಹಿನ್ನಲೆ ಪ್ರತಿಭಟನೆ ಮೊಟಕುಗೊಳಿಸಲಾಯಿತು.

ಈ ವೇಳೆ ಬಾಲು ರಾಠೋಡ, ಪೀರು ರಾಠೋಡ, ಮೈಬು ಹವಾಲ್ದಾರ, ಚಂದ್ರು ರಾಠೋಡ, ಅಂದಪ್ಪ ಅಂಗಡಿ, ಫಯಾಜ್ ತೋಟದ, ಚೆನ್ನಪ್ಪ ಗುಗಲೋತ್ತರ, ದಾವಲ ತಾಳಿಕೋಟಿ, ಕರಿಯಪ್ಪ ಜಾನಾಯಿ, ನೀಲ್ಲಪ್ಪ ಗಡಾದ, ಈರಪ್ಪ ಕೆರಿ, ಶರಣಪ್ಪ ಆವಾರಿ ಸೇರಿ ರೋಣ ವಿಜಯಕುಮಾರ, ಗಜೇಂದ್ರಗಡ ಪಿಎಸ್‌ಐ ಪ್ರವೀಣ ಗರೇಬಾಳ, ನರೇಗಲ್ ಪಿಎಸ್‌ಐ ಐಶ್ವರ್ಯ ನಾಗಾರಳ, ರೋಣ ಪಿಎಸ್‌ಐ ಪಿ.ಎಸ್.ಚವಡಿ, ಸೇರಿ ಅಶೋಕ ಮಾದರ, ಸಂದಿಪ ದೊಡ್ಡಮನಿ ಮತ್ತು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್