ಹಡೆದವ್ವ ಮನೆಗೆ ಬರಲೇ ಇಲ್ಲ

KannadaprabhaNewsNetwork |  
Published : Oct 11, 2024, 11:51 PM IST
10ಕೆಕೆಆರ್2:ಕುಕನೂರು ತಾಲೂಕಿನ ಬನ್ನಿಕೊಪ್ಪದಲ್ಲಿ ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಗೌರಮ್ಮಳ ಹಸುಗೂಸು ತೇಜಸ್ ತೊಟ್ಟಿಲಲ್ಲಿ ಹಸಿವಿನಿಂದ ಅಳುತ್ತಿರುವುದು. | Kannada Prabha

ಸಾರಾಂಶ

ದೇವಿಗೆ ಪೂಜೆ ಸಲ್ಲಿಸಿ ಮನೆಗೆ ತೆರಳಿ ಹೆತ್ತ ಕಂದನ ಹಣೆಗೆ ದೇವರ ಅಂಗಾರ ಹಚ್ಚಿ ಕೈ ಕಾಲು ಸವರಬೇಕಿದ್ದ ಹಡೆದವ್ವ ಮನೆಗೆ ಬರಲೇ ಇಲ್ಲ.

ಎರಡು ತಿಂಗಳ ಹಸುಗೂಸು ಅಗಲಿದ ತಾಯಿ । ತೊಟ್ಟಿಲು ತೂಗುವ ಕೈ ಶವವಾದ ದುರ್ಘಟನೆ । ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಸಾವು

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕನ್ನಡಪ್ರಭ ವಾರ್ತೆ ಕುಕನೂರು

ದೇವಿಗೆ ಪೂಜೆ ಸಲ್ಲಿಸಿ ಮನೆಗೆ ತೆರಳಿ ಹೆತ್ತ ಕಂದನ ಹಣೆಗೆ ದೇವರ ಅಂಗಾರ ಹಚ್ಚಿ ಕೈ ಕಾಲು ಸವರಬೇಕಿದ್ದ ಹಡೆದವ್ವ ಮನೆಗೆ ಬರಲೇ ಇಲ್ಲ!

ಕೂಸು ಎದ್ದು ತೊಟ್ಟಿಲಲ್ಲಿ ಚಿಟ್ಟನೆ ಚಿರುತ್ತ ಅಳುತ್ತಿತ್ತು. ಅವ್ವ ಅವ್ವ ಎಂದು ಬಿಕ್ಕಳಿಸಲು ಆರಂಭಿಸಿತು. ಹೊಟ್ಟೆ ಹಸಿವು, ಅವ್ವಾ ಬಂದು ಹಾಲು ಕೂಡಿಸ್ಯಾಳು ಎಂಬ ಧ್ವನಿಯಲ್ಲಿ ಅಳುತ್ತಿತ್ತು. ಕೂಸ್ಯಾಕೋ ಹಸಿದು ಇಷ್ಟು ಅಳುತ್ತೈತಿ ಈಕೇಲ್ಲಿಗೇ ಹೋಗ್ಯಾಳು, ಇನ್ನು ಯಾಕ್ ಬಂದಿಲ್ಲ ಎಂದು ಬಡಬಿಡಿಸುತ್ತಾ ಮಗಳ ಹುಡುಕಿಕೊಂಡು ಕೆರೆಯತ್ತ ತಾಯಿ ಅನಸೂಯಮ್ಮ ಹೊರಟಳು. ಪೂಜೆ ಸಲ್ಲಿಸಿ ಎದುರಿಗೆ ಬಂದವರಿಗೆ ನನ್ನ ಮಗಳ್ನ ನೋಡಿದ್ರಾ, ಮೊಮ್ಮಗ ಅಳಾಕುಂತಾನ ಎಂದು ಅವಸರದಲ್ಲಿ ಹೆಜ್ಜೆ ಹಾಕುತ್ತಾ ಹೊರಟ ತಾಯಿಗೆ ಕೆರೆ ದಡದ ಮೆಟ್ಟಿಲುಗಳಲ್ಲಿ ಕಂಡಿದ್ದು ಮಗಳು ಪೂಜೆಗೆ ತಂದಿದ್ದ ಪೂಜೆ ಸಾಮಗ್ರಿ. ಅದನ್ನು ಕಂಡ ಅನಸೂಯಮ್ಮ ಮಗಳು ಕೆರೆಯಲ್ಲಿ ಕಾಲು ಜಾರಿ ಬಿದ್ದಿದ್ದು ಕೇಳಿ ಆಕಾಶವೇ ತಲೆಯಮೇಲೆ ಕಳಚಿದಂತೆ ಗೋಗರೆದಳು.

ಕಾಲು ಜಾರಿ ಕೆರೆಗೆ ಬಿದ್ದಿದ್ದ ಗೌರಮ್ಮಳನ್ನು ಸ್ಥಳೀಯರು ಹುಡುಕಾಡಿ ತಂದಾಗ ಜೀವ ಇನ್ನೂ ಇತ್ತು. ಆಸ್ಪತ್ರೆಗೆ ದಾಖಲಿಸಲು ತೆರಳುವ ದಾರಿ ಮಧ್ಯೆ ಜೀವ ಹೋಯಿತು ಎನ್ನುತ್ತಾರೆ ಗ್ರಾಮಸ್ಥರು.

ಎರಡು ತಿಂಗಳ ಹಿಂದೆ ಹೆರಿಗೆ ಮುಗಿಸಿಕೊಂಡು ತವರ ಮನೆಯಲ್ಲಿದ್ದ ಗೌರಮ್ಮ ಕಲ್ಲೇಶ ಗುರುಮಠ (23) ಶರವನ್ನವರಾತ್ರಿ ಪ್ರಯುಕ್ತ ಬೆಳ್ಳಂಬೆಳಗ್ಗೆ ಎದ್ದು ಬನ್ನಿಗಿಡಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ಕೆರೆಯಲ್ಲಿರುವ ಗಂಗಾ ಮಾತೆಗೆ ಪೂಜೆ ಸಲ್ಲಿಸುತ್ತಿದ್ದಳು. ಆದರೆ ಎಂದಿನಂತೆ ಗುರುವಾರ ಸಹ ಬನ್ನಿಗಿಡಕ್ಕೆ ಪೂಜೆ ಸಲ್ಲಿಸಿ ಗಂಗೆಗೆ ಪೂಜೆ ಸಲ್ಲಿಸಲು ಕೆರೆ ದಡದಲ್ಲಿರುವ ಮೆಟ್ಟಿಲುಗಳನ್ನು ಇಳಿದು ಪೂಜೆ ಸಲ್ಲಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾಳೆ.

ಗೌರಮ್ಮ 2 ತಿಂಗಳ ಕಂದ ತೇಜಸ್‌ನನ್ನು ಅಗಲಿದ್ದು, ಹಸಿವಿನಿಂದ ಅಳುವ ಮಗುವಿಗೆ ತಾಯಿಯ ಹಾಲು ಇಲ್ಲ. ಅವನ ಹಸಿದ ಒಡಲು ಸಹ ತುಂಬದು. ಕಂದನ ಒಡಲಿಗೆ ತಾಯಿಯ ಮಮಕಾರ ಕಣ್ಮರೆಯಾಯಿತು.

ಗೋಗರೆದ ಕುಟುಂಬ:

ಗೌರಮ್ಮಳ ಅಗಲಿಕೆಗೆ ಇಡೀ ಕುಟುಂಬ ಕಣ್ಣೀರಿಟ್ಟಿತು. ಬನ್ನಿಕೊಪ್ಪ ಗ್ರಾಮಸ್ಥರು ಹಾಗೂ ಕಲ್ಲೂರಿನ ಪತಿ ಮನೆಯವರು ದೇವರಿಗೆ ಕರುಣೆ ಎಂಬುದು ಇಲ್ಲವೇ ಎಂದು ಹಿಡಿಶಾಪ ಹಾಕಿದರು. ದೇವರ ಪೂಜೆಗೆ ಹೋದಾಕಿಗೆ ದೇವರು ಹೀಗೆ ಮಾಡಬಹುದಿತ್ತೇ ಎಂದು ಗೌರಮ್ಮಳ ತಾಯಿ ಅನಸೂಯಮ್ಮ ಮಮ್ಮಲ ಮರಗಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ