ಕನ್ನಡಪ್ರಭ ವಾರ್ತೆ ಕೊಲ್ಹಾರ
ಕಳೆದ ವಾರದಿಂದ ಬಾರಿ ಬಿಸಿಲು ಧಗೆಗೆ ಬಸವಳಿದ ಜನ ಜಾನುವಾರುಗಳಿಗೆ ಭಾನುವಾರ ಸಂಜೆ ಸುರಿದ ಆಲಿಕಲ್ಲು ಮಿಶ್ರಿತ ಮಳೆ ಇಳೆಗೆ ತಂಪು ತಂದಿತು. ಆದರೆ, ಜೋರಾಗಿ ಬೀಸಿದ ಗಾಳಿ ಮಳೆಗೆ ಗಿಡಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದು ರಾತ್ರಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕೊರತೆಯಾಗಿದೆ. ಕಳೆದ ದಿನಗಳಿಂದ ಉತ್ತರ ಕರ್ನಾಟಕದ ಬಹುತೇಕ ಕಡೆ ಜಿಲ್ಲೆಗಳಲ್ಲಿ 40 ಡಿಗ್ರಿ ಉಷ್ಣಾಂಶವುಳ್ಳ ಬಾರೀ ಸುಡು ಬಿಸಿಲು ಜನರನ್ನು ಹೈರಾಣ ಮಾಡಿತ್ತು. ಬೆಳಗ್ಗೆ 9ರಿಂದ ಸುಡುವ ಬಿಸಿಲು ಸಂಜೆ 5 ಗಂಟೆ ವರೆಗೆ ಇತ್ತು. ಈ ವೇಳೆ ಜನರು ಮನೆಯಿಂದ ಹೊರಗೆ ಬಾರದೆ ಪರಿಸ್ಥಿತಿ ಇತ್ತು. ಹವಾಮಾನ ಮುನ್ಸೂಚನೆಯಂತೆ ಏ.21, 2026ರ ವರೆಗೆ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿರುಗಾಳಿ (40-50 ಕಿ.ಮೀ ವೇಗ) ಸಹಿತ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಭಾರತೀಯ ಹವಾಮಾನ ಇಲಾಖೆ ನೀಡಿತ್ತು. ಬಾಗಲಕೋಟೆ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬಿಳಲಿದ್ದು, ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು. ಅದರಂತೆ ಭಾನುವಾರ ಕೊಲ್ಹಾರ ಸುತ್ತ ಮುತ್ತ ಗುಡುಗು ಸಹಿತ ಮಳೆಯಾಗಿದೆ.ಆಲಿಕಲ್ಲು ಮಳೆ: ತೀವ್ರವಾದ ಬೇಸಿಗೆಯ ಶಾಖ, ವಾತಾವರಣದ ಅಸ್ಥಿರತೆ ಮತ್ತು ಅತಿಯಾದ ತಾಪಮಾನದಿಂದಾಗಿ ಬಲವಾದ ಮೇಲ್ಮುಖ ಗಾಳಿಯು ನೀರಾವಿ ಕಣಗಳನ್ನು ಮೇಲಕ್ಕೆ ಕೊಂಡೊಯ್ದು ಘನೀಕರಣಗೊಂಡು ಮಂಜುಗಡ್ಡೆಯಾಗಿ (ಆಲಿಕಲ್ಲು) ಬೀಳುತ್ತದೆ. ಇದು ತಾಲೂಕಿನ ರೋಣಿಹಾಳ, ಹಿರೇ ಆಸಂಗಿ, ಕೊಲ್ಹಾರ, ಮಟ್ಟಿಹಾಳ ಸೇರಿ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಸಣ್ಣ ಮಕ್ಕಳು ಕಲ್ಲು ಸಕ್ಕರೆಯಂತೆ ಆಲಿಕಲ್ಲುಗಳನ್ನು ಆಯ್ದುಕೊಂಡು ತಿನ್ನುವುದು ಕಂಡು ಬಂತು. ಬಿಸಿಲಿನಿಂದ ಹೈರಾಣ ಆದ ಜನರಿಗೆ ಮಳೆ ಬಂದು ತಂಪು ತಂದಿತು. ಪರಿಣಾಮ: ಮುಖ್ಯವಾಗಿ ಈ ಭಾಗದಲ್ಲಿ ಈರುಳ್ಳಿಯನ್ನು ಹೆಚ್ಚು ಬೆಳೆಯಲಾಗುತ್ತದೆ. ಆದರೆ, ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.