ಆಲಿಕಲ್ಲು ಮಳೆಗೆ ಸಿರುಗುಪ್ಪ, ಕುರುಗೋಡಿನಲ್ಲಿ ಹೆಚ್ಚು ಹಾನಿ-ಜಿಲ್ಲಾಧಿಕಾರಿ

KannadaprabhaNewsNetwork |  
Published : Mar 21, 2026, 02:00 AM IST
ಕುರುಗೋಡು ೦೪ ತಾಲ್ಲೂಕಿನ ಗೆಣಿಕೆಹಾಳು ಗ್ರಾಮದಲ್ಲಿ ಮಳೆಗೆ ಬೆಳೆನಷ್ಟಹೊಂದಿದ ಭತ್ತದ ಗದ್ದೆಗೆ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಶುಕ್ರವಾರ ಭೇಟಿನೀಡಿ ಪರಿಶೀಲಿಸಿದರು | Kannada Prabha

ಸಾರಾಂಶ

ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಗೆ ಜಿಲ್ಲೆಯಲ್ಲಿ ಸಿರುಗುಪ್ಪ, ಕುರುಗೋಡು ತಾಲೂಕಿನಲ್ಲಿ ಹೆಚ್ಚು ಬೆಳೆನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ತಿಳಿಸಿದರು.

ಕುರುಗೋಡು:ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಗೆ ಜಿಲ್ಲೆಯಲ್ಲಿ ಸಿರುಗುಪ್ಪ, ಕುರುಗೋಡು ತಾಲೂಕಿನಲ್ಲಿ ಹೆಚ್ಚು ಬೆಳೆನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ತಿಳಿಸಿದರು.

ತಾಲೂಕಿನ ಗೆಣಿಕೆಹಾಳು ಮತ್ತು ಮುಷ್ಟಗಟ್ಟೆ, ಬಾದನಹಟ್ಟಿ ಗ್ರಾಮಗಳಲ್ಲಿ ಮಳೆಯಿಂದ ೧,೫೯೮ ಎಕರೆ ಬೆಳೆನಷ್ಟಹೊಂದಿದ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಭತ್ತದ ಬೆಳೆ ಕಟಾವಿನ ಹಂತದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದು ಅಪಾರ ಪ್ರಮಾಣದ ನಷ್ಟವಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಜಮೀನುಗಳಿಗೆ ಭೇಟಿ ನೀಡಿ ಬೆಳೆನಷ್ಟದ ವರದಿ ನೀಡಿದ್ದಾರೆ. ಕನಿಷ್ಠ ೪೫೦ ಹೆಕ್ಟೇರ್‌ನಷ್ಟು ಭತ್ತದ ಬೆಳೆನಷ್ಟ ಹೊಂದಿರುವ ಕುರಿತು ವರದಿ ಸಲ್ಲಿಸಿದ್ದಾರೆ. ಭತ್ತದ ಗದ್ದೆಯಲ್ಲಿ ಶೇ. ೩೩ರಷ್ಟು ನಷ್ಟವಾಗಿದ್ದರೂ ಶೇ. ೧೦೦ರಷ್ಟು ನಷ್ಟದ ಪ್ರಮಾಣ ಪರಿಗಣಿಸಲಾಗುವುದು ಎಂದರು.ಬೇಸಿಗೆ ಬೆಳೆ ಬೆಳೆಯಲು ಕಾಲುವೆಗೆ ನೀರು ಹರಿಸಿದ್ದರೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿತ್ತು. ಪಂಪ್‌ಸೆಟ್ ಆಧರಿತ ಭೂಮಿಯಲ್ಲಿ ಬೆಳೆದ ಗಂಗಾ ಕಾವೇರಿ ಭತ್ತದ ಬೆಳೆಗೆ ಮಾತ್ರ ನಷ್ಟ ಉಂಟಾಗಿರುವುದು ಕಂಡುಬಂದಿದೆ. ಸರ್ಕಾರಕ್ಕೆ ಬೆಳೆನಷ್ಟದ ವರದಿ ಸಲ್ಲಿಸಿ ಪರಿಹಾರ ದೊರಕಿಸಿಕೊಡಲು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಕ್ರಮ ಗ್ರಾವೆಲ್ ಸಾಗಣೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ರೈತರು ಸಮತಟ್ಟು ಮಾಡಲು ಅರ್ಜಿ ಸಲ್ಲಿಸಿದರೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮತಿ ನೀಡಲಿದ್ದಾರೆ. ಈ ಕುರಿತು ಜಿಲ್ಲಾಮಟ್ಟದ ಸಭೆ ನಡೆಸಲಾಗಿದೆ. ಅಕ್ರಮ ಸಾಗಣೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಖನಿಜ ನಿಧಿಯ ಅನುದಾನ ಬಳಸಿ ಕುರುಗೋಡು ಮತ್ತು ಕಂಪ್ಲಿಯಲ್ಲಿರುವ ಉಪ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಲೂಕಿನ ಬೈಲೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನವೋದಯ ವಸತಿ ಶಾಲೆಗೆ ಭೂಮಿ ಪರಿಶೀಲಿಸಿದ ಜಿಲ್ಲಾಧಿಕಾರಿ ಅದೇ ಗ್ರಾಮದಲ್ಲಿ ನಿರ್ಮಾಣವಾಗಿತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟದ ಕಾಮಗಾರಿ ಪರಿಶೀಲಿಸಿದರು.ಮುಷ್ಟಗಟ್ಟೆ ಗ್ರಾಮ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದ ಅವರು ಎಸ್ಎಸ್ಎಲ್‌ಸಿ ಫಲಿತಾಂಶ ಕುಸಿತಕ್ಕೆ ಕಾರಣ ಏನೆಂದು ಮುಖ್ಯಶಿಕ್ಷಕ ಕೊಟ್ರೇಶ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ವಿಜ್ಞಾನ, ಗಣಿತ ವಿಷಯದಲ್ಲಿ ಹೆಚ್ಚಿನ ಮಕ್ಕಳು ಅನುತ್ತೀರ್ಣವಾಗುತ್ತಿರುವುದೇ ಕಾರಣ ಎಂದು ತಿಳಿಸಿದರು.

ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ ಕೊಠಡಿಗೆ ತೆರಳಿದ ಡಿಸಿ ಅವರು ವಿದ್ಯಾರ್ಥಿಗಳನ್ನು ಕರೆಸಿ ವರ್ಡ್, ನುಡಿ, ಟೆಲಿಸ್ಕೋಪ್ ಬಗ್ಗೆ ಮಾಹಿತಿ ಕೇಳಿದಾಗ ಮಕ್ಕಳು ಉತ್ತರಿಸಲಿಲ್ಲ. ಮಕ್ಕಳಿಗೆ ಕನಿಷ್ಠ ಜ್ಞಾನ ಇಲ್ಲದಿದ್ದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಮಕ್ಕಳ ವೈದ್ಯಕೀಯ ತಪಾಸಣೆ ವರದಿ ಪರಿಶೀಲಿಸಿದ ನಾಗೇಂದ್ರ ಪ್ರಸಾದ್, ವರ್ಷದಲ್ಲಿ ಒಮ್ಮೆ ಮಾತ್ರ ಮಕ್ಕಳಿಗೆ ವೈದ್ಯಕೀಯ ತಪಾಸಣೆ ನಡೆಸಿರುವುದು ಬೆಳಕಿಗೆ ಬಂತು.

ಇದರಿಂದ ಕೋಪಗೊಂಡ ಅವರು ಕೂಡಲೇ ಸಂಬಂಧಪಟ್ಟ ವೈದ್ಯಾಧಿಕಾರಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ ನರಸಪ್ಪಗೆ ಸೂಚಿಸಿದರು. ಅಲ್ಲದೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಈಗಾಗಲೇ ಸಮಿತಿ ರಚಿಸಲಾಗಿದ್ದು, ಆಗಾಗ ವಸತಿ ಶಾಲೆಗೆ ಭೇಟಿ ನೀಡುವಂತೆ ಸೂಚಿಸಿದರು. ಶೌಚಾಲಯ ಸ್ವಚ್ಛತೆ ಇಲ್ಲದಿರುವುದುಕಂಡು ಬೇಸರಗೊಂಡರು. ಕೂಡಲೇ ಸ್ವಚ್ಛತೆಗೆ ಮಹತ್ವ ನೀಡುವಂತೆ ಸೂಚಿಸಿದರು. ಸರ್ಕಾರದಿಂದ ಉಚಿತವಾಗಿ ಕೊಡುವ ಊಟ, ಸೋಪು, ಪುಸ್ತಕಗಳ ವಿತರಣೆ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ವಸತಿ ಶಾಲೆ ಅಗತ್ಯ ಸೌಲಭ್ಯದ ಕುರಿತು ಕೂಡಲೇ ಕ್ರಿಯಾಯೋಜನೆ ತಯಾರಿಸಿ ನೀಡುವಂತೆ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ತಿಳಿಸಿದರು.

ತಹಸೀಲ್ದಾರ್ ನರಸಪ್ಪ, ಗ್ರೇಡ್- ೨ ತಹಸೀಲ್ದಾರ್ ಮಲ್ಲೇಶಪ್ಪ, ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್, ಉಪಕೃಷಿ ನಿರ್ದೇಶಕ ಮಂಜುನಾಥ ಕಂದಾಯ ನಿರೀಕ್ಷಕ ಸುರೇಶ್, ಕೃಷಿ ಅಧಿಕಾರಿ ದೇವರಾಜ್, ಆರ್‌ಐ ಸುರೇಶ್, ವಿಎ ಕೊಟ್ರೇಶ್, ಗಣೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರಲ್ಲಿ ದೇಶ ಭಕ್ತಿ ಮೂಡಿಸಿ
ಪಂಚಾಂಗ ಶ್ರವಣದಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದು-ಶಿವಾಚಾರ್ಯರು