ಕೊಪ್ಪಳ: ಸರ್ಕಾರಿ ಶಾಲಾ ಮಕ್ಕಳಲ್ಲಿ ಗಣಿತ ಕಲಿಕೆಯ ಆಸಕ್ತಿ ಹೆಚ್ಚಿಸುವುದು, ಶೈಕ್ಷಣಿಕ ಗುಣಮಟ್ಟ ಸುಧಾರಿಸುವುದು ಹಾಗೂ ಮಕ್ಕಳ ಕಲಿಕೆಯಲ್ಲಿ ಪೋಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ ಅಕ್ಷರ ಫೌಂಡೇಶನ್ ಹಾಗೂ ಹಲಗೇರಿ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಊರ ಜನರ ನಡಿಗೆ-ಮಕ್ಕಳ ಕಲಿಕೆಯ ಕಡೆಗೆ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷರ ಫೌಂಡೇಶನ್ ಕಲಬುರಗಿ ವಿಭಾಗೀಯ ಕ್ಷೇತ್ರ ವ್ಯವಸ್ಥಾಪಕ ಅಡಿವೇಶಪ್ಪ ನೀರಲಕೇರಿ, ಮಕ್ಕಳ ಗುಣಮಟ್ಟದ ಶಿಕ್ಷಣ ಮತ್ತು ಗಣಿತ ಕಲಿಕೆಯ ಪ್ರಗತಿಯಲ್ಲಿ ಶಿಕ್ಷಕರ ಜತೆಗೆ ಪೋಷಕರು ಹಾಗೂ ಸ್ಥಳೀಯ ಸಮುದಾಯದ ಪಾತ್ರವೂ ಮಹತ್ವದ್ದಾಗಿದೆ. ಮಕ್ಕಳ ಕಲಿಕೆಯ ಜವಾಬ್ದಾರಿಯನ್ನು ಶಾಲೆಗಳಿಗೆ ಮಾತ್ರ ಸೀಮಿತಗೊಳಿಸದೆ, ತಾಯಂದಿರು, ಪೋಷಕರು, ಯುವಕರು ಹಾಗೂ ಯುವತಿಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಲಗೇರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಮೇಶ್ ತೆರಿನ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಗ್ರಾಮದ ಪ್ರತಿಯೊಬ್ಬರೂ ಪಾಲುದಾರರಾಗಬೇಕು. ಇಂತಹ ಸಮುದಾಯ ಆಧಾರಿತ ಕಾರ್ಯಕ್ರಮಗಳು ಮಕ್ಕಳ ಕಲಿಕಾ ಪ್ರಗತಿಗೆ ಪೂರಕವಾಗಿವೆ ಎಂದು ಹೇಳಿದರು.ಗಣಿತ ಚಟುವಟಿಕೆ ಆಧಾರಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಉತ್ತಮ ಸಾಧನೆ ಮಾಡಿದ ಮಂಜುನಾಥ, ಪ್ರಕಾಶ, ರಾಮಣ್ಣ, ದ್ಯಾಮವ್ವ, ಶಶಿಕಲಾ, ರಾಜೇಶ್ವರಿ, ದ್ಯಾಮಣ್ಣ, ಶಿವಕುಮಾರ್, ನಾಗರಾಜ್, ಸಂಗೀತಾ ಆರ್. ಮಾಲಿಪಾಟೀಲ್, ಸಿಂಧೂ ಕೆ. ಮತ್ತು ಚೈತ್ರಾ ಎಚ್. ಅವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರಿಗೂ ಅಭಿನಂದನಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.