ಕುಮಟಾ ತಾಲೂಕಿನ ಹಳಕಾರ ಅರಣ್ಯ ಪಂಚಾಯಿತಿ ಶತಮಾನೋತ್ಸವ ಸಂಪನ್ನ

KannadaprabhaNewsNetwork |  
Published : Dec 23, 2024, 01:02 AM IST
ಹಳಕಾರದಲ್ಲಿ ಅರಣ್ಯ ಪಂಚಾಯಿತಿಯ ಶತಮಾನೋತ್ಸವವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಮಾನ್ಯವಾಗಿ ಸ್ವಂತಕ್ಕಾಗಿ ಏನನ್ನಾದರೂ ಸಂರಕ್ಷಿಸಿ ಇಟ್ಟುಕೊಳ್ಳುವುದು ವಾಡಿಕೆ. ಆದರೆ ಹಳಕಾರದ ಜನ ಇಡೀ ಊರಿಗಾಗಿ ಅರಣ್ಯವನ್ನು ಉಳಿಸಿಕೊಂಡು, ಅದರ ಮೇಲೆ ತಮ್ಮ ಹಕ್ಕನ್ನೂ ಕಾಪಿಟ್ಟುಕೊಂಡಿರುವುದು ವಿಶೇಷ. ಇದು ದೇಶಕ್ಕೆ ಮಾದರಿ.

ಕುಮಟಾ: ನಮ್ಮ ಹಿರಿಯ ತಲೆಮಾರಿನವರು ಅರಣ್ಯ ಸಂಪತ್ತಿನ ಮಹತ್ವವರಿತು ಅರಣ್ಯ ಪಂಚಾಯಿತಿಯನ್ನು ಸ್ಥಾಪಿಸಿ ಪೀಳಿಗೆಯಿಂದ ಪೀಳಿಗೆಗೆ ಹಸಿರನ್ನು ಉಳಿಸಿ ಬೆಳೆಸಿದ್ದರಿಂದ ಇಂದು ಹಳಕಾರ ಅರಣ್ಯ ಪಂಚಾಯಿತಿ ಶತಮಾನೋತ್ಸವ ಆಚರಿಸಲು ಸಾಧ್ಯವಾಗಿದೆ. ಹಳಕಾರಿನ ಜನ ನಿಜಕ್ಕೂ ಅಭಿನಂದನೀಯರು ಎಂದು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.ಹಳಕಾರದಲ್ಲಿ ಗ್ರಾಮ ಅರಣ್ಯ ಪಂಚಾಯಿತಿ ಸ್ಥಾಪನೆಗೊಂಡ ಶತಮಾನೋತ್ಸವ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯವಾಗಿ ಸ್ವಂತಕ್ಕಾಗಿ ಏನನ್ನಾದರೂ ಸಂರಕ್ಷಿಸಿ ಇಟ್ಟುಕೊಳ್ಳುವುದು ವಾಡಿಕೆ. ಆದರೆ ಹಳಕಾರದ ಜನ ಇಡೀ ಊರಿಗಾಗಿ ಅರಣ್ಯವನ್ನು ಉಳಿಸಿಕೊಂಡು, ಅದರ ಮೇಲೆ ತಮ್ಮ ಹಕ್ಕನ್ನೂ ಕಾಪಿಟ್ಟುಕೊಂಡಿರುವುದು ವಿಶೇಷ. ಇದು ದೇಶಕ್ಕೆ ಮಾದರಿ. ಈ ಅರಣ್ಯದಲ್ಲಿ ಸಾಧ್ಯವಾದಷ್ಟು ಹಣ್ಣು ಮರ ಬೆಳೆಸಿ, ಜನರಿಗೆ ಪ್ರಯೋಜನವಾಗುವಂಥ ಪ್ರಕೃತಿಯಾಗಲಿ, ಕಸ ವಿಲೇವಾರಿಗೆ ಆದ್ಯತೆ ಕೊಡಿ, ಅಕೇಶಿಯಾದಂತಹ ಮರಗಳನ್ನು ಸಂಪೂರ್ಣ ಕಡಿಮೆ ಮಾಡಿ, ಪೂರಕವಾಗಿ ನಮ್ಮೆಲ್ಲರ ಸಹಕಾರ ಇರಲಿದೆ ಎಂದರು. ಅರಣ್ಯ ಪಂಚಾಯಿತಿಯ ಮುಖ್ಯ ಕಮಾನು ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ದೇಶದ ಏಕೈಕ ಜನಾರಣ್ಯವಾಗಿರುವ ಹಳಕಾರ ಅರಣ್ಯ ಪಂಚಾಯಿತಿ ನಮಗೆ ಹೆಮ್ಮೆ. ಇದು ಈ ಭಾಗದ ಪ್ರಾಕೃತಿಕ ವೈಭವ ಮತ್ತು ಪರಿಸರ ಉಳಿವಿಗೆ ಮಹತ್ವಪೂರ್ಣ ಪಾತ್ರ ವಹಿಸಿದೆ. ಮುಂದಿನ ಪೀಳಿಗೆಗೂ ಮಾದರಿಯಾಗಿ ಜನರ ಹಸಿರನ್ನೇ ಉಸಿರಾಗಿಸಿಕೊಂಡ ಇತಿಹಾಸ ಪ್ರೇರಣೆಯಾಗಲಿದೆ. ಹಸಿರನ್ನು ತನ್ನದೇ ಮಾರ್ಗದಲ್ಲಿ ಆರಾಧಿಸಿದ ವೃಕ್ಷಮಾತೆ ತುಳಸಿಗೌಡ ಪದ್ಮಶ್ರೀಯಂಥ ಉನ್ನತ ಗೌರವಕ್ಕೆ ಪಾತ್ರರಾಗಿ ಸ್ಮರಣೀಯರಾಗಿದ್ದಾರೆ. ಹಾಗೆಯೇ ಹಳಕಾರ ಗ್ರಾಮವೂ ಅರಣ್ಯ ಸಂರಕ್ಷಣೆಯ ಕಾರ್ಯದಲ್ಲಿ ಎಲ್ಲ ಗೌರವಕ್ಕೆ ಅರ್ಹರು ಎಂದರು.

ಕೇಶವ ಶಂಭು ಭಟ್, ಅರಣ್ಯ ಪಂಚಾಯಿತಿ ಅಧ್ಯಕ್ಷ ನಾಗರಾಜ ಭಟ್, ಹೊಲನಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಹೆಗಡೆ, ಗಜಾನನ ಎಸ್. ಗುನಗ, ಅನಿಲ ಮಡಿವಾಳ, ಮಾದೇವಿ ಮುಕ್ರಿ, ಸಾವಿತ್ರಿ ಪಟಗಾರ, ಪರಿಸರ ವಿಜ್ಞಾನಿ ಡಾ. ಎಂ.ಡಿ. ಸುಭಾಸ್ ಚಂದ್ರನ್, ಪ್ರೊ. ಎಂ.ಜಿ. ನಾಯ್ಕ, ಶಾಂತಾರಾಮ ಹರಿಕಂತ್ರ ಇತರರು ಇದ್ದರು. ರಕ್ತದಾನ ಶ್ರೇಷ್ಠ ದಾನ

ಪಣಜಿ: ರಕ್ತದಾನ ಶ್ರೇಷ್ಠ ದಾನವಾಗಿದ್ದು, ಗೋವಾ ಕನ್ನಡಿಗರೆಲ್ಲ ಸೇರಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಗೋವೆಯ ಕನ್ನಡಿಗ, ಉದ್ಯಮಿ ವಿನಾಯಕ ಎಂ. ಶಾನಭಾಗ್ ತಿಳಿಸಿದರು.ಗೋವಾ ವಿಮೋಚನಾ ದಿನದ ಅಂಗವಾಗಿ ಗೋವಾ ಕನ್ನಡ ಸಮಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಲಕ್ಷಾಂತರ ಕನ್ನಡಿಗರು ಗೋವೆಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೀಗೆ ಜೀವನ ನಡೆಸಲು ಬಂದ ಕನ್ನಡಿಗರು ರಕ್ತದಾನದಂಥ ಶಿಬಿರಗಳನ್ನು ನಡೆಸಿ, ಜೀವ ಉಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಗೋವಾ ಕನ್ನಡ ಸಮಾಜದ ಅಧ್ಯಕ್ಷರಾದ ಅರುಣಕುಮಾರ್, ಗೋವಾ ಕನ್ನಡ ಸಮಾಜ ರಾಜ್ಯದಲ್ಲಿ ಹಲವು ವರ್ಷಗಳಿಂದ ರಕ್ತದಾನ ಶಿಬಿರದಂಥ ಅನೇಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಕನ್ನಡಿಗರು ಸಹೃದಯತೆಯನ್ನು ಮೆರೆದಿದ್ದಾರೆ ಎಂದರು.ಗೋವಾ ಕನ್ನಡ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಗೋವಾ ಕೇಸರಿ ದಿನಪತ್ರಿಕೆಯ ಸಂಪಾದಕ ಶ್ರೀನಿವಾಸ ಪೈ, ಶ್ರೀಮೀಡಿಯಾ ನ್ಯೂಸ್ ಸಂಪಾದಕ ಪ್ರಕಾಶ ಭಟ್ ಇತರರು ಇದ್ದರು. ನಂತರ ಗೋವಾ ಮೆಡಿಕಲ್ ಕಾಲೇಜ್ ಬಾಂಬೋಲಿಯಲ್ಲಿ ಆಯೋಜಿಸಿಸಿದ್ದ ಶಿಬಿರದಲ್ಲಿ ಅನೇಕ ಕನ್ನಡಿಗರು ರಕ್ತದಾನ ಮಾಡಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ