ಕನ್ನಡಪ್ರಭ ವಾರ್ತೆ ಮೂಲ್ಕಿ
ಹಳೆಯಂಗಡಿಯಲ್ಲಿ ಸರ್ಕಾರಿ ಕಾಲೇಜು, ಸಹಕಾರಿ ಸಂಘ ಸ್ಥಾಪನೆ ಮೂಲಕ ಹಳೆಯಂಗಡಿಯ ಅಭಿವೃದ್ದಿಯ ರೂವಾರಿ, ಸಹಕಾರಿ ಸಂಘಗಳ ಭೀಷ್ಮರಾಗಿದ್ದ ಎಚ್. ನಾರಾಯಣ ಸನಿಲ್ ಸಹಕಾರಿ ಸಂಘಗಳ ಅಭಿವೃದ್ಧಿಗೆ ನೀಡಿದ್ದ ಕೊಡುಗೆ ಅಪಾರ ಎಂದು ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2023-24ನೇ ಸಾಲಿನ ವಿಶಿಷ್ಟ ಸಾಧನ ಪ್ರಶಸ್ತಿ ಪಡೆದ ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಆಶ್ರಯದಲ್ಲಿ ಸೊಸೈಟಿ ಸಭಾಭನದಲ್ಲಿ ಜರುಗಿದ ಸೊಸೈಟಿಯ ಸಹಕಾರಿ ಸಂಘದ ಭೀಷ್ಮ ಎಚ್. ನಾರಾಯಣ ಸನಿಲ್ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್ ಅಧ್ಯಕ್ಷತೆ ವಹಿಸಿದ್ದರು.ಹಳೆಯಂಗಡಿಯ ಪಿಸಿಎ ಬ್ಯಾಂಕಿನ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ ಸಿ ಕೋಟ್ಯಾನ್ ಮಾತನಾಡಿ, ನಾರಾಯಣ ಸನಿಲ್ ನೇರ ನಡೆ, ನುಡಿಯ ವ್ಯಕ್ತಿಯಾಗಿದ್ದು ಪ್ರಾಮಾಣಿಕತೆ ಮತ್ತು ಸಮಯ ಪರಿಪಾಲನೆಗೆ ಹೆಚ್ಚು ಒತ್ತು ನೀಡುತಿದ್ದು ಸದಾ ಹಳೆಯಂಗಡಿಯ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸುತ್ತಿದ್ದರು ಎಂದರು.
ಮಹಿಳೆಯರ ಸ್ವಾವಲಂಬನೆಗೆ ಸಹಕಾರಿಯಾಗಿ ಸಂಘದಿಂದ ನಿರುದ್ಯೋಗಿ ಆಶ್ರಿಯ ಅವರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಸಂಘದ ನಿರ್ದೇಶಕ ಡಾ. ಗಣೇಶ ಅಮೀನ್ ಸಂಕಮಾರ್ ಸಹಕಾರಿ ಸಂಘದ ಭೀಷ್ಮ ಎಚ್. ನಾರಾಯಣ ಸನಿಲ್ ಸಂಸ್ಮರಣಾ ಭಾಷಣ ಮಾಡಿದರು.ಸಂಘದ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಗೌತಮ್ ಜೈನ್, ಉಮಾನಾಥ ಶೆಟ್ಟಿಗಾರ್, ಗಣೇಶ್ ದೇವಾಡಿಗ, ನವೀನ್ ಸಾಲ್ಯಾನ್ ಪಂಜ, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತಿತರರು ಇದ್ದರು.
ಸ್ವಸಹಾಯ ಗುಂಪಿನ ಸಂಚಾಲಕಿ ನಿರಂಜಲ ಪ್ರಾರ್ಥಿಸಿದರು. ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು. ಹಿರಿಯ ಸಿಬ್ಬಂದಿ ಲೋಲಾಕ್ಷಿ ವಂದಿಸಿದರು. ಪ್ರಬಂಧಕಿ ಅಕ್ಷತಾ ಶೆಟ್ಟಿ, ನಿರೂಪಿಸಿದರು.