ಕನ್ನಡಪ್ರಭ ವಾರ್ತೆ ವಿಧಾನಸಭೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದ್ದು, ಸರ್ಕಾರದ ವೈಫಲ್ಯದಿಂದ ಗೂಂಡಾ ರಾಜ್ಯ ನಿರ್ಮಾಣವಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ತಾವು ನೀಡಿದ ನಿಲುವಳಿ ಸೂಚನೆ ಮೇಲೆ ವಿಷಯ ಮಂಡಿಸಿದ ಆರ್.ಅಶೋಕ್, ರಾಜ್ಯದಲ್ಲಿ ಸರ್ಕಾರ ಮತ್ತು ಕಾನೂನು ಸುವ್ಯವಸ್ಥೆ ನಡುವೆ ತಾಳ-ಮೇಳ ಇಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿ ನಾವೆಲ್ಲ ತಲೆತಗ್ಗಿಸುವಂಥ ಘಟನೆ ರಾಮನಗರದಲ್ಲಿ ನಡೆದಿದೆ. ಬಿಡದಿಯ ಟೊಯೋಟಾ ಸಂಸ್ಥೆಯ ಶೌಚಾಲಯದ ಗೋಡೆಯ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಮತ್ತು ಕನ್ನಡಿಗರನ್ನು ಅವಾಚ್ಯವಾಗಿ ನಿಂದಿಸುವ ಪದಗಳನ್ನು ಬರೆಯಲಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿ ಸರ್ಕಾರ ಈವರೆಗೆ ಯಾರನ್ನೂ ಬಂಧಿಸಿಲ್ಲ. ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಜನರು ಪ್ರಶ್ನಿಸುವಂತಾಗಿದೆ ಎಂದು ಹೇಳಿದರು.
ಗುಂಡೇಟು ಹಾಕಿ:ಬಿಡದಿ ಘಟನೆಯಲ್ಲಿ ಸರ್ಕಾರ ಈವರೆಗೆ ಮೌನವಾಗಿದೆ. ಹೀಗೆ ಪದೇ ಪದೆ ರಾಜ್ಯ ಮತ್ತು ದೇಶಕ್ಕೆ ಅವಮಾನ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮವಾಗಬೇಕು. ಈ ಕೃತ್ಯ ಎಸಗಿದವರನ್ನು ಪತ್ತೆ ಮಾಡಿ ಗುಂಡೇಟು ಹಾಕಬೇಕು. ಅದರಿಂದ ಆ ರೀತಿ ಮಾಡುವವರಿಗೆ ಬುದ್ಧಿ ಬರುತ್ತದೆ ಎಂದು ಅಶೋಕ್ ಆಗ್ರಹಿಸಿದರು.
ಹಾವೇರಿಯ ರಾಣೆಬೆನ್ನೂರಿನಲ್ಲಿ ನರ್ಸ್ ಸ್ವಾತಿ ಎಂಬಾಕೆಯನ್ನು ನಯಾಜ್ ಎಂಬಾತ ಲವ್ ಜಿಹಾದ್ ಬಲೆ ಬೀಳಿಸಿದ್ದ. ನಂತರ ನಯಾಜ್ ಮತ್ತು ಆತನ ಸ್ನೇಹಿತರಾದ ವಿನಯ್ ಮತ್ತು ದುರ್ಗಾಚಾರಿ ಎಂಬುವವರು ಸ್ವಾತಿಯನ್ನು ಕರೆದುಕೊಂಡು ಹೋಗಿದ್ದರು. ನಂತರ ಆಕೆಯನ್ನು ಪಾಳುಬಿದ್ದ ಶಾಲೆಯೊಂದರಲ್ಲಿ ಕತ್ತು ಹಿಸುಕಿ ಸಾಯಿಸಿ, ಶವವನ್ನು ತುಂಗಾ ನದಿಗೆ ಎಸೆದಿದ್ದರು. ಆಕೆಯ ಶವ ಪತ್ತೆಯಾದ ನಂತರ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸ್ವಾತಿ ಪೋಷಕರಿಗೆ ತಿಳಿಸದೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ನಂತರವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹೀಗಾಗಿಯೇ ಸ್ವಾತಿ ಕೊಲೆಯಾಗುವಂತಾಗಿದೆ ಎಂದು ಆರೋಪಿಸಿದರು.ವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಹಂಪಿಯಲ್ಲಿ ಇಸ್ರೇಲ್ ಮಹಿಳೆ ಹಾಗೂ ಹೋಮ್‌ಸ್ಟೇ ಮಾಲಕಿ ಮೇಲೆ ಕಿಡಿಗೇಡಿಗಳು ಅತ್ಯಾಚಾರ ಎಸಗಿದ್ದಾರೆ. ಅದರ ಜತೆಗೆ ಒಡಿಶಾ ಮೂಲದ ಪ್ರವಾಸಿಗನನ್ನು ಕೊಲೆ ಮಾಡಲಾಗಿದೆ. ಈ ದುರ್ಘಟನೆಯಿಂದ ಹಂಪಿಗೆ ಕೆಟ್ಟ ಹೆಸರು ಬರುವಂತಾಗಿದೆ. ಅಲ್ಲಿನ ವ್ಯಾಪಾರಸ್ಥರ ಆದಾಯ ಕುಸಿದಿದೆ. ವಿದೇಶಿ ಸಂಸ್ಥೆಗಳು ಸರ್ಕಾರವನ್ನು ಹೊಗಳುತ್ತಿದೆ ಎಂದು ಹೇಳುವ ಸರ್ಕಾರ, ವಿದೇಶಿ ಪ್ರವಾಸಿಗರ ರಕ್ಷಣೆ ಮಾಡಲು ಮುಂದಾಗುತ್ತಿಲ್ಲ ಎಂದು ಆರ್. ಅಶೋಕ್ ಆರೋಪಿಸಿದರು.
ಚಿನ್ನ ಕಳ್ಳ ಸಾಗಣೆಯಲ್ಲಿ ಸಚಿವರ ಹೆಸರು ಕೇಳಿ ಬರುತ್ತಿದೆ. ಹೀಗೆ ಹಲವು ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ ಸರ್ಕಾರ ಸುಮ್ಮನಿದೆ. ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂದು ಜನ ಕೇಳುವಂತಾಗಿದೆ. ಅಲ್ಲದೆ, ಸರ್ಕಾರ ಯಾವಾಗ ತೊಲಗುತ್ತದೆಯೋ ಎಂಬಂತೆ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.