ಕನ್ನಡಪ್ರಭ ವಾರ್ತೆ ಬೇಲೂರು
ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಐತಿಹಾಸಿಕ ಆನೆ ಬಾಗಿಲಿಗೆ ಹೊಂದಿಕೊಂಡಿರುವ ಸಂಸ್ಕೃತ ವೇದ ಪಾಠಶಾಲೆಯ ಬೃಹತ್ ಗೋಡೆ ಯಾವ ಸಮಯದಲ್ಲಾದರೂ ಕುಸಿದು ಬೀಳುವ ಹಂತದಲ್ಲಿದೆ.ದೇಶ, ವಿದೇಶದ ಪ್ರವಾಸಿಗರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು ಐತಿಹಾಸಿಕ ಆನೆ ಬಾಗಿಲಿನ ಸಮೀಪವಿರುವ ಪಾಠಶಾಲೆಯ ಗೋಡೆ ಸಂಪೂರ್ಣ ಬಿರುಕು ಬಿಟ್ಟಿದ್ದು, ಕೇಂದ್ರ ಪುರತತ್ವ ಇಲಾಖೆ ರಾಜ್ಯ ಮುಜರಾಯಿ ಇಲಾಖೆ ನಿರ್ಲಕ್ಷ್ಯದಿಂದ ಅಮಾಯಕರು ಬಲಿಯಾಗಬೇಕಿದೆ. ಆನೆ ಬಾಗಿಲಿನ ಬಳಿ ಸಾರ್ವಜನಿಕರು ಪ್ರವಾಸಿಗರು ನೆರಳಿಗಾಗಿ ವಿಶ್ರಾಂತಿಗೆಂದು ಇದೇ ಜಾಗಲ್ಲಿ ನಿಲ್ಲುತ್ತಾರೆ. ಕೆಲವರು ನಿದ್ರೆಗೆ ಜಾರುತ್ತಾರೆ. ಈ ಸಂದರ್ಭದಲ್ಲಿ ಗೋಡೆ ಕುಸಿದು ಬಿದ್ದರೆ ಅಮಾಯಕರು ಬಲಿಯಾಗುತ್ತಾರೆ. ಇತ್ತೀಚೆಗಷ್ಟೇ ಬೇಲೂರಿನ ಬಸ್ ನಿಲ್ದಾಣದ ಸಮೀಪ ಹಳೆ ಕಟ್ಟಡದ ಸಜ್ಜೆ ಕುಸಿದು ಸ್ಥಳದಲ್ಲಿಯೇ ಇಬ್ಬರು ಸಾವನಪ್ಪಿದ್ದು, ಹಲವು ದಿನಗಳ ನಂತರ ಗಾಯಗೊಂಡಿದ್ದ ಮಹಿಳೆ ಒಬ್ಬರು ಆಸ್ಪತ್ರೆಯಲ್ಲಿ ನಿಧಾನವಾಗಿದ್ದಾರೆ. ಆದರೂ ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳದೆ ಯಾವುದೇ ಮುಂಜಾಗ್ರತೆ ಕ್ರಮಕ್ಕೆ ಮುಂದಾಗುತ್ತಿಲ್ಲ.
ಐತಿಹಾಸಿಕ ಪ್ರವಾಸಿ ತಾಣ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಿರುವ ಪಾಠಶಾಲೆಯ ಗೋಡೆ ಬಿರುಕು ಬಿಟ್ಟರೂ ಯಾವ ಅಧಿಕಾರಿಯು ತಿರಗಿ ನೋಡಿಲ್ಲ ಮತ್ತು ಭದ್ರತೆಗೂ ಮುಂದಾಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು ಸಾವಿರಾರು ಮಂದಿ ಉತ್ಸವ ಗಳಿಗೆ ಪಾಲ್ಗೊಳ್ಳಲಿದ್ದು ರಥೋತ್ಸವದ ಪ್ರಮುಖ ನಾಲ್ಕೈದು ದಿನಗಳಲ್ಲಿ ಲಕ್ಷಾಂತರ ಮಂದಿ ಆಗಮಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಏನಾದರೂ ಈ ಗೋಡೆ ಕುಸಿದು ಬಿದ್ದರೆ ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಬಿರುಕು ಬಿಟ್ಟ ಗೋಡೆಯ ದುರಸ್ತಿಗೆ ಮುಂದಾಗಿ ಸಾರ್ವಜನಿಕರ ಪ್ರಾಣಗಳ ಮೇಲೆ ಚಲ್ಲಾಟವಾಡುವುದನ್ನು ಬಿಟ್ಟು ದುರಸ್ತಿಗೆ ಮುಂದಾಗುತ್ತಾರೋ ಕಾದು ನೋಡಬೇಕಿದೆ.ಈ ಸಂಬಂಧ ಬೇಲೂರಿನ ನಾಗರಿಕ ರಾಕೇಶ್ ಬಿ.ಡಿ ಮಾತನಾಡಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿರುವ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಿರುವ ಪಾಠಶಾಲೆಯ ಗೋಡೆ ಬಿರುಕು ಬಿಟ್ಟಿರುವುದು ಇಲ್ಲಿಯ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ. ಗೋಡೆ ಕುಸಿದು ದುರಂತ ಸಂಭವಿಸಿದರೆ ಯಾರು ಹೊಣೆ ಸಂಬಂಧಪಟ್ಟ ಇಲಾಖೆಗಳು ದುರಂತ ಸಂಭವಿಸುವ ಮೊದಲೇ ಗೋಡೆಯನ್ನು ತೆರೆವುಗೊಳಿಸಿ ದುರಸ್ತಿಗೆ ಮುಂದಾಗಬೇಕು. ಬೇಲೂರಿನ ದೇವಾಲಯ ವೀಕ್ಷಣೆಗೆ ಬರುವ ಪ್ರವಾಸಿಗರು ಆನೆಬಾಗಿಲಿನ ಆವರಣದಲ್ಲಿ ವಿಶ್ರಾಂತಿಗೆ ಈ ಸ್ಥಳದಲ್ಲಿ ಕೂರುವುದು, ನಿದ್ರಿಸುವುದು ಪ್ರತಿನಿತ್ಯ ಸಾಮಾನ್ಯವಾಗಿದ್ದು, ಗೋಡೆ ಕುಸಿದು ಬಿದ್ದರೆ ಉಸಿರು ಚೆಲ್ಲಬೇಕಾಗುತ್ತದೆ. ಜನರ ಜೀವದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು ಸಂಬಂಧಪಟ್ಟವರು ಆದಷ್ಟು ಬೇಗ ದುರಸ್ತಿಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.