ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ರಾಜ್ಯ ಕಾಂಗ್ರೆಸ್ ಸರ್ಕಾರದ ಅಧಿಕಾರ ದುರುಪಯೋಗಕ್ಕೆ ತಕ್ಕ ಶಾಸ್ತಿ ಮಾಡಿದಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕಾನೂನು ಇಲಾಖೆ ಮತ್ತು ಪೊಲೀಸರು ವಿರೋಧ ವ್ಯಕ್ತಪಡಿಸಿದರೂ ರಾಜ್ಯ ಸರ್ಕಾರ ಪ್ರಕರಣ ಹಿಂಪಡೆಯುವ ತೀರ್ಮಾನ ತೆಗೆದುಕೊಂಡಿತ್ತು. ಆದರೆ, ರಾಜ್ಯ ಹೈಕೋರ್ಟ್ ಈಗ ಸರ್ಕಾರಕ್ಕೆ ತಕ್ಕ ಉತ್ತರ ನೀಡಿದೆ ಎಂದು ಜೋಶಿ ಹೇಳಿದರು.
ಹಳೇ ಹುಬ್ಬಳ್ಳಿ ಗಲಭೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಹಾಗಿದ್ದರೂ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಯಾವುದೇ ಸಮರ್ಪಕ ಕಾರಣಗಳನ್ನು ನೀಡದೆ ಪ್ರಕರಣ ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು. ಹೈಕೋರ್ಟ್ ತೀರ್ಪು ಇದಕ್ಕೆಲ್ಲ ಬ್ರೇಕ್ ಹಾಕಿದೆ ಎಂದು ಹೇಳಿದ್ದಾರೆ.ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ರದ್ದುಗೊಳಿಸಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛಿಮಾರಿ ಹಾಕಿದೆ. ಇದರಿಂದ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಮುಸ್ಲಿಂ ಓಲೈಕೆ ರಾಜಕಾರಣ ಮಾಡಬಾರದು. ಇನ್ನಾದರೂ ಸರ್ಕಾರ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ವಹಿಸಲಿ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಯಾವುದೇ ಕಾರಣಕ್ಕೂ ಪ್ರಕರಣ ಹಿಂಪಡೆಯಬೇಡಿ ನಿಮಗೆ ತಿರುಗು ಬಾಣವಾಗುತ್ತದೆ ಎಂದು ಸದನದಲ್ಲೇ ಹೇಳಿದ್ದೆ. ಈಗ ಅದೇ ರೀತಿ ಹೈಕೋರ್ಟ್ ಛಿಮಾರಿ ಹಾಕಿದೆ. ವೋಟ್ ಬ್ಯಾಂಕ್‌ಗಾಗಿ ಪ್ರಕರಣವನ್ನು ಹಿಂಪಡೆದಿತ್ತು. ನಮ್ಮ ಹೋರಾಟಕ್ಕೆ ಸಂದ ಜಯ ಇದಾಗಿದೆ. ವಕೀಲರಾದ ವೆಂಕಟೇಶ ದಳವಾಯಿ, ಗಿರೇಶ ಭಾರದ್ವಾಜ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.ಹೈಕೋರ್ಟ್ ತೀರ್ಪಿನಿಂದ ರಾಜ್ಯ ಸರ್ಕಾರಕ್ಕೆ ಕಪಾಳ ಮೋಕ್ಷವಾಗಿದೆ. ಹೈಕೋರ್ಟ್ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಒಂದು ವೇಳೆ ಸುಪ್ರೀಂ ಕೋರ್ಟಿಗೆ ಹೋದರೆ ಅಲ್ಲೂ ಮುಖಭಂಗ ಖಚಿತ. ಈಗಲಾದರೂ ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ ಕೈಬಿಟ್ಟು ನ್ಯಾಯಯುತವಾಗಿ ನಡೆದುಕೊಳ್ಳಲಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
ಪೊಲೀಸರು ಹಾಗೂ ಪೊಲೀಸ್ ಠಾಣೆಯನ್ನೇ ಗುರಿಯಾಗಿಸಿಕೊಂಡು ಮಾಡಿದ ಗಲಭೆ ಅದು. ಅಂಥ ಗಲಭೆ ಕೇಸ್‌ನ್ನು ಹಿಂಪಡೆಯುವ ಮೂಲಕ ಪೊಲೀಸರ ಆತ್ಮಸ್ಥೈರ್ಯವನ್ನು ಕಳೆಯುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿತ್ತು. ಇದೀಗ ಹೈಕೋರ್ಟ್ ಅಕ್ಷರಶಃ ಛಿಮಾರಿ ಹಾಕಿ ಚಾಟಿ ಬೀಸಿದೆ. ಇನ್ನಾದರೂ ಮತಬ್ಯಾಂಕ್ ರಾಜಕಾರಣದಿಂದ ಹೊರಬರಲಿ ಎಂದು ಪಾಲಿಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು.ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ರದ್ದುಗೊಳಿಸಿದ್ದ ರಾಜ್ಯ ಸರ್ಕಾರದ ಹೈಕೋರ್ಟ್ ಛಿಮಾರಿ ಹಾಕಿದೆ. ಹೈಕೋರ್ಟ್ ನೀಡಿರುವ ಆದೇಶದಿಂದ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿ ಕಪಾಳಮೋಕ್ಷವಾದಂತಾಗಿದೆ. ಇನ್ನಾದರೂ ರಾಜ್ಯದ ಸಿದ್ದರಾಮಯ್ಯ ಸರ್ಕಾರ ತುಷ್ಟೀಕರಣ ನೀತಿ ಬಿಟ್ಟು ಉತ್ತಮ ಆಡಳಿತ ನೀಡುವತ್ತ ಗಮನಹರಿಸಬೇಕು ಎಂದು ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ಪೊಲೀಸರ ಮೇಲೆ ಹಲ್ಲೆ ನಡೆಸಿದವರ ಮೇಲಿನ ಕೇಸನ್ನು ಹಿಂಪಡೆದರೆ ಅವರ ಮನೋಬಲ ಕುಸಿಯುತ್ತದೆ. ಅಂಥ ಕೆಲಸವನ್ನು ರಾಜ್ಯ ಸರ್ಕಾರ ಮಾಡಿತ್ತು. ಇದೀಗ ಹೈಕೋರ್ಟ್ ಅದಕ್ಕೆ ತಡೆ ನೀಡಿದೆ. ರಾಜ್ಯ ಸರ್ಕಾರದ ನಿರ್ಧಾರ ತಪ್ಪು ಎಂದು ಸ್ಪಷ್ಟವಾಗಿ ಹೇಳಿದೆ. ಇದು ಪೊಲೀಸರ ಮನೋಬಲ ಹೆಚ್ಚಿಸುವ ಕೆಲಸವಾದಂತಾಗಿದೆ ಎಂದು ವಕೀಲರಾದ ಸಂಜೀವ ಬಡಸ್ಕರ್ ಹೇಳಿದರು.