ಹುಬ್ಬಳ್ಳಿ:
ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆಯುತ್ತಿರುವುದು ಖಂಡಿಸಿ ಬುಧವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ದಿಂಡಿ ಹನುಮಂತ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಇಂಡಿ ಪಂಪ್ ವೃತ್ತದ ವರೆಗೆ ತೆರಳಿ ಅಲ್ಲಿ ಸಮಾರೋಪಗೊಂಡು ಕೆಲಕಾಲ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಈ ನಿರ್ಧಾರ ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮಹಾನಗರ ಅಧ್ಯಕ್ಷ ಸಂಜೀವ ಬಡಸ್ಕರ್ ಮಾತನಾಡಿ, 2022ರಲ್ಲಿ ಇಂಡಿ ಪಂಪ್ ಪೊಲೀಸ್ ಠಾಣೆಗೆ ದುಷ್ಕರ್ಮಿಗಳು ನುಗ್ಗಿ ಗಲಾಟೆ ಮಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು, ತಪ್ಪಿತಸ್ಥರನ್ನು ಶಿಕ್ಷಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ವಾಪಸ್ ತೆಗೆದುಕೊಳ್ಳುತ್ತಿದ್ದೇವೆ ಎಂದು ತನ್ನ ನಿರ್ಧಾರ ಪ್ರಕಟಿಸಿದ್ದು, ಇದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೇ ರಾಜ್ಯ ಸರ್ಕಾರ ತನ್ನ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಜತೆಗೆ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.ಡಿಎನ್‌ಎ ಪರೀಕ್ಷಿಸುವ ಸ್ಥಿತಿ:
ಮುಖ್ಯಮಂತ್ರಿ ಹಾಗೂ ಗೃಹಸಚಿವರ ಡಿಎನ್‌ಎ ಪರೀಕ್ಷಿಸುವ ಸ್ಥಿತಿ ಇಂದು ಉದ್ಭವವಾಗಿದೆ ಎಂದ ಅವರು, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲೇ ಮುಸ್ಲಿಮರು ನಮ್ಮ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದ್ದೇ ಆದಲ್ಲಿ ಅವರ ಮೇಲಿರುವ ಎಲ್ಲ ಪ್ರಕರಣ ಹಿಂಪಡೆಯುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರ ಮೇಲಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯುತ್ತಿದೆ. ನಾವು ಇಷ್ಟಕ್ಕೆ ಇದನ್ನು ಬಿಡುವುದಿಲ್ಲ. ಸರ್ಕಾರ ಈ ಪ್ರಕರಣವನ್ನು ಹಿಂಪಡೆದಿರುವುದನ್ನು ಕೈಬಿಡಬೇಕು, ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ. ಅದಕ್ಕೆ ಬೇಕಾದ ಎಲ್ಲ ಪೂರಕ ದಾಖಲೆ ಸಂಗ್ರಹಿಸಲಾಗಿದ್ದು, ಶೀಘ್ರದಲ್ಲಿಯೇ ಕಾನೂನು ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ ಮಹಾನಗರ ಕಾರ್ಯದರ್ಶಿ ರಘು ಯಲ್ಲಕ್ಕನವರ, ವಿಭಾಗ ಕಾರ್ಯದರ್ಶಿ ರಮೇಶ ಕದಮ್, ಮುಖಂಡರಾದ ಜಯತೀರ್ಥ ಕಟ್ಟಿ, ವಿಜಯ ಕ್ಷೀರಸಾಗರ, ದಿನೇಶ್ ವಾಗಮೋಡೆ, ಶಶಿಕಾಂತ ಬಿಜವಾಡ, ಅಶೋಕ ಅಣವೇಕರ್, ಸುನೀಲ ಕಟ್ಟಿಮನಿ, ಸುಭಾಷ ಡಂಕ, ವಿವೇಕ ಮೊಕಾಶಿ ಸೇರಿದಂತೆ ನೂರಾರು ಮಹಿಳೆಯರು ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.