ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ಬೈಪಾಸ್‌ನಿಂದ ಮಾಳ ವರೆಗಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಕುಂಟುತ್ತಲೇ ಸಾಗುತ್ತಿದೆ. ಸುಮಾರು 15.2 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ 11 ಕಿ.ಮೀ. ಭಾಗದಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲಿ ಅರೆಬರೆ ಕಾಮಗಾರಿಯಿಂದ ಸಂಚಾರ ದಟ್ಟಣೆ, ಅಪಘಾತಗಳು ನಡೆಯುತ್ತಿವೆ.
177.94 ಕೋಟಿ ರು. ವೆಚ್ಚ:ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 2022ರಲ್ಲಿ 177.94 ಕೋಟಿ ರುಪಾಯಿ ವೆಚ್ಚದ ಯೋಜನೆಗೆ ಅನುಮೋದನೆ ಲಭಿಸಿದ್ದು, ಸಾಣೂರು ಜಂಕ್ಷನ್‌ನಿಂದ ಮಾಳ ಫಾರೆಸ್ಟ್ ಗೇಟ್ ವರೆಗೆ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬದ ಕಾರಣದಿಂದಾಗಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.
ಚಾಲಕರು ಕಂಗಾಲು:ರಾಷ್ಟ್ರೀಯ ಹೆದ್ದಾರಿ 169ರ 4 ಕಿ.ಮೀ. ರಸ್ತೆಯು ಇನ್ನೂ ಕಚ್ಚಾ ಹಂತದಲ್ಲಿದ್ದು, ಮಳೆಗಾಲದಲ್ಲಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ. ಡೈವರ್ಶನ್ ಭಾಗದಲ್ಲಿ ಸಿಗ್ನಲ್ ಫಲಕಗಳು ಹಾಗೂ ದಿಕ್ಕು ಸೂಚನೆಗಳ ಕೊರತೆ ವಾಹನ ಚಾಲನೆಗೆ ಗೊಂದಲವನ್ನುಂಟುಮಾಡುತ್ತಿದೆ.
ಪ್ರವಾಸಿಗರಿಗೂ ಸಂಕಷ್ಟ:ಮಾಳ, ಕುದುರೆಮುಖ, ಕಳಸ ಭಾಗಗಳಿಗೆ ದೈನಂದಿನ ಮತ್ತು ಪ್ರವಾಸೋದ್ಯಮ ವಾಹನಗಳು ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಆದರೆ ಈ ಭಾಗದ ರಸ್ತೆಯ ದುಸ್ಥಿತಿಯಿಂದಾಗಿ ಪ್ರಯಾಣವನ್ನು ಕಠಿಣಗೊಳಿಸಿದೆ. ರಾತ್ರಿ ವೇಳೆ ರಸ್ತೆ ಅಸ್ಪಷ್ಟತೆಯಿಂದ ಅಪಘಾತಗಳು ಸಂಭವಿಸುತ್ತಿದೆ.
ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ:ಒಟ್ಟು 280 ಆಸ್ತಿಗಳಲ್ಲಿ ಶೇ.60ರಷ್ಟು ದಾಖಲೆಗಳ ಸಂಗ್ರಹ ಪೂರ್ಣಗೊಂಡಿದ್ದು, ಉಳಿದ 120 ಆಸ್ತಿಗಳ ಭೂಸ್ವಾಧೀನಕ್ಕೆ ಶೀಘ್ರದಲ್ಲೇ ಇನ್ನೊಂದು ಅಧಿಸೂಚನೆ ಹೊರಡುವ ಸಾಧ್ಯತೆ ಇದೆ. ಈ ಸಂಬಂಧ ಎಡಿಎಲ್‌ಆರ್ ನಕ್ಷೆ ತಯಾರಿಕೆ ಮುಂದುವರಿದಿದೆ.
ಮಳೆಯ ನಂತರ ಕಾಮಗಾರಿ ಪುನಾರಂಭ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ನೀಡಿದ ಮಾಹಿತಿ ಪ್ರಕಾರ, ಮಳೆಗಾಲ ಕೊನೆಗೊಂಡ ನಂತರ ತಕ್ಷಣವೇ ಕಾಮಗಾರಿಯನ್ನು ಪುನರಾರಂಭಿಸಿ ಶೀಘ್ರ ಪೂರ್ಣಗೊಳಿಸುವ ಉದ್ದೇಶವಿದೆ.