ಕನ್ನಡಪ್ರಭ ವಾರ್ತೆ ಹರಿಹರ
ಇಂಗಳಗೊಂದಿ, ದೂಳೆಹೊಳೆ, ಹೊಳೆ ಸಿರಿಗೆರೆ ಮಾರ್ಗವಾಗಿ ಹಳ್ಳಿಹಾಳ್ ಗ್ರಾಮದವರೆಗಿನ ರಸ್ತೆಯ ತುಂಬಾ ಗುಂಡಿಗಳು ಬಿದ್ದಿವೆ. ಆ ಗುಂಡಿಗಳನ್ನು ಮುಚ್ಚಲು ಸರ್ಕಾರ 18 ಲಕ್ಷ ರು. ಅನುದಾನ ನೀಡಿದೆ. ಇಂಗಳಗೊಂದಿಯಿಂದ ಸಿರಿಗೆರೆವರೆಗೆ ರಸ್ತೆ ದುರಸ್ತಿ ಆಗಿದೆ. ಸಿರಿಗೆರೆ ಕೆರೆಯಿಂದ ಹಳ್ಳಿಹಾಳ್ ಗ್ರಾಮದವರೆಗೆ ರಸ್ತೆ ಗುಂಡಿಗಳು ಅರೆ ಬರೆ ಕಾಮಗಾರಿ ನಡೆದಿದೆ ಎಂದು ಕಡರನಾಯ್ಕನಹಳ್ಳಿ ಗ್ರಾಮದ ಎಸ್ ಅನಂತ,ಮೊಸವಳ್ಳಿ ಸುರೇಶ್ ಮತ್ತಿತರರು ದೂರಿದ್ದಾರೆ.
ಸದರಿ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿವೆ. ಸದರಿ ಗುಂಡಿಗಳಿಗೆ ಸ್ವಲ್ಪ ಸ್ವಲ್ಪ ಜೆಲ್ಲಿ ಹಾಕಿದ್ದಾರೆ ಗುಂಡಿಗಳು ಮುಚ್ಚಿಲ್ಲ, ಕೆಲವು ಕಡೆ ಗುಂಡಿಗಳಿಗೆ ಜೆಲ್ಲಿ ಹಾಕಿಲ್ಲ, ಇನ್ನೂ ಕೆಲವೆಡೆ ಗುಂಡಿಗಳಿಗೆ ಜೆಲ್ಲಿ ಹಾಕಿ ಡಾಂಬರು ಹಾಕಿದ್ದಾರೆ. ಆದರೆ ರಸ್ತೆಗೆ ಈ ಕಾಮಗಾರಿ ಪ್ರಯೋಜನ ತಂದಿಲ್ಲ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.ಕೊಕ್ಕನೂರು- ಕಡರನಾಯ್ಕನಹಳ್ಳಿ 4 ಕಿಲೋಮೀಟರ್ ಕಾಮಗಾರಿಯಲ್ಲಿ 2 ಕಿಲೋ ಮೀಟರ್ ಕಾಮಗಾರಿ ಮಾತ್ರ ಆಗಿದೆ ಇನ್ನುಳಿದ 2 ಕಿಲೋ ಮೀಟರ್ ಕಾಮಗಾರಿ ಪ್ರಾರಂಬವಾಗಿ 4 ವರ್ಷಗಳಿಂದ ಪೂರ್ಣಗೊಂಡಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಗಿಂಡೇರ ಅಂಜಿನಪ್ಪ, ವಿಜಯ್ ಗಂಟೇರ ಆಕ್ರೋಶ ಹೊರಹಾಕಿದ್ದಾರೆ.
ಇಂತಹ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳು ಇಂತಹ ಗುತ್ತಿಗೆದಾರರಿಂದ ಬಲಿಯಾಗುತ್ತಿವೆ. ಜನಸಾಮಾನ್ಯರ ತೆರಿಗೆ ಹಣ ನೀರು ಪಾಲಾಗುತ್ತಿದೆ. ಸಂಬಂಧಪಟ್ಟವರು ಮುತುವರ್ಜಿವಹಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎಂ ಎನ್ ವೆಂಕಟೇಶ್ ತಿಳಿಸಿದರು.
ಇಂಗಳಗೊಂದಿ, ದೂಳೆಹೊಳೆ, ಹೊಳೆ ಸಿರಿಗೆರೆ ಮಾರ್ಗಗಳಲ್ಲಿ ಸಮರ್ಪಕವಾಗಿ ರಸ್ತೆ ಕಾಮಗಾರಿ ನಡೆದಿದೆ. ಹೊಳೆ ಸಿರಿಗೆರೆ ಕೆರೆ ಏರಿ ಮಾರ್ಗದಿಂದ ಹಳ್ಳಿಹಾಳ್ ರಸ್ತೆ ತುಂಬಾ ಹದಗೆಟ್ಟಿದೆ.