ಪುರಾತತ್ವ ಇಲಾಖೆ ವಿರುದ್ಧ ಅರೆಬೆತ್ತಲೆ ಪ್ರತಿಭಟನೆ: ಹೋರಾಟ ಸಮಿತಿ ಎಚ್ಚರಿಕೆ

KannadaprabhaNewsNetwork |  
Published : May 13, 2026, 01:15 AM IST
ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನ. | Kannada Prabha

ಸಾರಾಂಶ

ದಶಕಗಳಿಂದ ಸೋರುತ್ತಿರುವ ಶ್ರೀ ಕ್ಷೇತ್ರ ಬನವಾಸಿ ಶ್ರೀ ಮಧುಕೇಶ್ವರ ದೇವಸ್ಥಾನ ದುರಸ್ತಿ ಕಾರ್ಯ ಮಾಡದೆ ಸೋರುವಿಕೆ ತಡೆಗಟ್ಟುವಲ್ಲಿ ವಿಫಲಗೊಂಡ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮತ್ತೊಮ್ಮೆ ಸುಳ್ಳನ್ನೇ ಸಾಬೀತು ಮಾಡಿದೆ ಎಂದು ಬನವಾಸಿ ನೂತನ ತಾಲೂಕು ರಚನೆ ಹೋರಾಟ ಸಮಿತಿ ಆಕ್ರೋಶ ಹೊರ ಹಾಕಿದೆ.

ಕನ್ನಡಪ್ರಭ ವಾರ್ತೆ ಬನವಾಸಿ

ದಶಕಗಳಿಂದ ಸೋರುತ್ತಿರುವ ಶ್ರೀ ಕ್ಷೇತ್ರ ಬನವಾಸಿ ಶ್ರೀ ಮಧುಕೇಶ್ವರ ದೇವಸ್ಥಾನ ದುರಸ್ತಿ ಕಾರ್ಯ ಮಾಡದೆ ಸೋರುವಿಕೆ ತಡೆಗಟ್ಟುವಲ್ಲಿ ವಿಫಲಗೊಂಡ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮತ್ತೊಮ್ಮೆ ಸುಳ್ಳನ್ನೇ ಸಾಬೀತು ಮಾಡಿದೆ ಎಂದು ಬನವಾಸಿ ನೂತನ ತಾಲೂಕು ರಚನೆ ಹೋರಾಟ ಸಮಿತಿ ಆಕ್ರೋಶ ಹೊರ ಹಾಕಿದೆ.ಈ ಕುರಿತು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ, ಗೌರವಾಧ್ಯಕ್ಷ ಸಿ.ಎಫ್. ನಾಯ್ಕ್ ಮಾಳಂಜಿ, ಕಾರ್ಯದರ್ಶಿ ವಿಶ್ವನಾಥ್ ಒಡೆಯರ್ ಜಂಟಿ ಹೇಳಿಕೆ ನೀಡಿದ್ದಾರೆ.

ಪ್ರತಿ ಬಾರಿ ಹೋರಾಟಕ್ಕೆ ನಾವು ತಯಾರಿ ನಡೆಸಿದಾಗ ಏನಾದರೂ ಒಂದು ಸಬೂಬು ಹೇಳಿ ಹೋರಾಟಗಾರರನ್ನು ನಂಬಿಸಿ ವಂಚನೆ ಮಾಡುತ್ತಿರುವ ಇಲಾಖೆ ಅಧಿಕಾರಿಗಳು. ಕೇವಲ ಸುಳ್ಳು ಹೇಳುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಬನವಾಸಿ ಜಾತ್ರೆಯ ದಿನವೇ ಸೇರಿದಂತೆ ಭಕ್ತ ಸಮೂಹ ಸೇರಿಸಿ ದೇವಸ್ಥಾನ ಎದುರುಗಡೆ ಹೋರಾಟ ಮಾಡಲು ತಯಾರಿದ್ದ ನಮ್ಮನ್ನ ಇಲಾಖೆ ಅಧಿಕಾರಿ ಖುದ್ದಾಗಿ ಬಂದು ಆದೇಶ ಪತ್ರ ತೋರಿಸಿ ಒಂದು ವಾರದಲ್ಲಿ ಕಾರ್ಯ ಆರಂಭ ಮಾಡುವ ಮೌಖಿಕ ಹೇಳಿಕೆ ನೀಡಿ ಸಮಜಾಯಿಸಿದ್ದರು.

ಅಂದು ನಾವು ಜಾತ್ರೆ ದಿನವೇ ಪ್ರತಿಭಟನೆಗೆ ಮುಂದಾಗಿರುವುದು ಊರ ಹಿತದ ದೃಷ್ಟಿಯಿಂದ ಸರಿಯಲ್ಲ ಎಂದು ಕೆಲವರು ಹೇಳಿದ್ದಕ್ಕೆ ನಾವು ಬದ್ಧರಾಗಿದ್ದೆವು. ಅಷ್ಟಕ್ಕೂ ಪೊಲೀಸ್ ಇಲಾಖೆ ಸ್ವತಃ ಮಧ್ಯಸ್ತಿಕೆ ವಹಿಸಿ ಈ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸದ್ಯದಲ್ಲಿ ದುರಸ್ತಿ ಕೆಲಸ ಮಾಡಿಸುವ ಭರವಸೆ ನೀಡಿದ್ದರು.

ಶ್ರೀ ಮಧುಕೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯರು ಅಲ್ಲದೆ ಸ್ವತಃ ಶಾಸಕರು ಜಾತ್ರಾ ದಿನದ ಹೋರಾಟ ಮುಂದೂಡುವಂತೆ ಹೇಳಿದ್ದರು. ನೀಡಿದ ಭರವಸೆ ಈವರೆಗೂ ಈಡೇರಿಲ್ಲ.

ಈಗ ಮಳೆ ಆರಂಭವಾಗಿದೆ. ದೇವಸ್ಥಾನ ಮತ್ತೆ ಸೋರುವುದು ನಿಶ್ಚಿತ. ಹಾಗಾಗಿ ಈ ಬಾರಿ ವಿಶೇಷ ರೀತಿಯಲ್ಲಿ ಅರೆಬೆತ್ತಲೆ ಪ್ರತಿಭಟನೆಗೆ ಮುಂದಾಗಿದ್ದೇವೆ. ಹಳ್ಳಿ ಹಳ್ಳಿಗಳಲ್ಲಿ ಸಭೆ ನಡೆಸಿ ಅಧಿಕೃತವಾಗಿ ಒಂದು ದಿನಾಂಕ ನಿಗದಿಪಡಿಸಿ ಜನರ ವಿಶ್ವಾಸ ಪಡೆದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದುಗಿನಲ್ಲಿ ಹಾಲಿಗಿಂತ ಮೊದಲೇ ಇಲ್ಲಿ ಮದ್ಯ ಸಿಗುತ್ತೆ!
ಎರಡು ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ