ಹುಬ್ಬಳ್ಳಿಯಲ್ಲಿ ಪೌರಕಾರ್ಮಿಕರ ಅರೆಬೆತ್ತಲೆ ಪ್ರತಿಭಟನೆ

KannadaprabhaNewsNetwork | Published : Jul 21, 2024 1:18 AM

ಸಾರಾಂಶ

ಪಾಲಿಕೆಯ ಕಾಯಂ ಪೌರಕಾರ್ಮಿಕರು ಸೋಮವಾರದಿಂದ ಸಾಮೂಹಿಕವಾಗಿ ರಜೆ ಹಾಕಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಪೌರಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ನೇತೃತ್ವದಲ್ಲಿ ರಾಜ್ಯಾದ್ಯಂತ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಲಿದ್ದಾರೆ.

ಹುಬ್ಬಳ್ಳಿ:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ಪಾಲಿಕೆ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು, ಶನಿವಾರದಂದು ಪೌರಕಾರ್ಮಿಕರು ಸುರಿಯುತ್ತಿರುವ ಮಳೆಯಲ್ಲಿಯೇ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಸೋಮವಾರದಿಂದ (ಜು.22) ರಾಜ್ಯದ ಎಲ್ಲ ಪೌರಕಾರ್ಮಿಕರು ಕೆಲಸಕ್ಕೆ ಗೈರಾಗಿ ಹುಬ್ಬಳ್ಳಿ ಪ್ರತಿಭಟನೆಗೆ ಬೆಂಬಲಿಸಲಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಸರ್ಕಾರ, ಜಿಲ್ಲಾಧಿಕಾರಿ, ರಾಷ್ಟ್ರೀಯ ಮತ್ತು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಆದೇಶ ನೀಡಿದರೂ ಪೌರಕಾರ್ಮಿಕರಿಗೆ ಶಾಸನಬದ್ಧ ಹಕ್ಕು, ಕಾರ್ಮಿಕ ಕಾಯ್ದೆ ಅಡಿ ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ. ಪರಿಶಿಷ್ಟ ಜಾತಿಯ ಪೌರಕಾರ್ಮಿಕರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಗುಂಟ್ರಾಳ ಮಾತನಾಡಿ, ಪಾಲಿಕೆಯ ಕಾಯಂ ಪೌರಕಾರ್ಮಿಕರು ಸೋಮವಾರದಿಂದ ಸಾಮೂಹಿಕವಾಗಿ ರಜೆ ಹಾಕಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಪೌರಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ನೇತೃತ್ವದಲ್ಲಿ ರಾಜ್ಯಾದ್ಯಂತ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಲಿದ್ದಾರೆ ಎಂದರು.

ಶನಿವಾರ ಪಾಲಿಕೆಯ ಕಾಯಂ ಪೌರಕಾರ್ಮಿಕರ ಸಂಘ ಮತ್ತು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಬೆಂಬಲ ಸೂಚಿಸಿತು. ಈ ವೇಳೆ ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಕನಕಪ್ಪ ಕೋಟಬಾಗಿ, ರೇಣುಕಾ ನಾಗರಾಳ, ಶರಣಪ್ಪ ಅಮರಾವತಿ, ತಾಯಪ್ಪ ಹಾಳಾಕೇರಿ, ಸುನೀಲ ದೊಡ್ಡಮನಿ, ಶರೀಫ್ ಮಸರಕಲ್ ಸೇರಿದಂತೆ ಹಲವರಿದ್ದರು.

3 ದಿನದಿಂದ ಕೆಲಸಕ್ಕೆ ಗೈರು:

ಕಳೆದ ಮೂರು ದಿನಗಳಿಂದ ಪಾಲಿಕೆಯಲ್ಲಿ ಕಾಯಂ ಆಗಿ ನೇಮಕಗೊಂಡ 260 ಪೌರಕಾರ್ಮಿಕರನ್ನು ಹೊರತುಪಡಿಸಿ ಇನ್ನುಳಿದ 1800ಕ್ಕೂ ಅಧಿಕ ಪೌರ ಕಾರ್ಮಿಕರು ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಹು-ಧಾ ಮಹಾನಗರ ಸ್ವಚ್ಛತಾ ಕಾರ್ಯ, ತ್ಯಾಜ್ಯವಿಲೇವಾರಿ ಸೇರಿದಂತೆ ಹಲವು ಕಾರ್ಯಗಳಲ್ಲಿ ಅಸ್ತವ್ಯಸ್ತವಾಗಿದೆ. ಇನ್ನು ಸೋಮವಾರದಿಂದ ಕಾಯಂ ಆಗಿ ನೇಮಕಗೊಂಡ ಪೌರಕಾರ್ಮಿಕರೂ ಸಹ ಕೆಲಸಕ್ಕೆ ಹಾಜರಾಗದೇ ಧರಣಿಗೆ ಕೈಜೋಡಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಸಮಸ್ಯೆ ಉಂಟಾಗುವ ಲಕ್ಷಣವಿದ್ದು, ಪಾಲಿಕೆ ಆಯುಕ್ತರು ಹಾಗೂ ಮೇಯರ್‌ ಪ್ರತಿಭಟನಾ ನಿರತ ಪೌರಕಾರ್ಮಿಕರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

Share this article