ಧಾರವಾಡ:
ರಾಜ್ಯದಲ್ಲೆಡೆ ಪ್ರಸ್ತುತ ವಕ್ಫ್ ಮಂಡಳಿಯ ಆಸ್ತಿಯ ವಿಚಾರ ಚರ್ಚೆಯಲ್ಲಿದ್ದು, ರೈತರ ಹೊಲ, ಮಠ-ಮಂದಿರ ಹಾಗೂ ಸಾರ್ವಜನಿಕ ಆಸ್ತಿಗಳ ಪಹಣಿಯಲ್ಲೂ ವಕ್ಫ್ ಮಂಡಳಿ ಹೆಸರು ಇಂಡೀಕರಣವಾಗಿದ್ದು ಹಳೆಯ ಮಾತಾಯಿತು. ಬೀದರನ ಇಡೀ ಊರೇ ವಕ್ಫ್ ಮಂಡಳಿ ಆಸ್ತಿ ಎನ್ನುವಂತೆಯೇ ಧಾರವಾಡ ಸಮೀಪದ ಉಪ್ಪಿನ ಬೆಟಗೇರಿಯ ಅರ್ಧ ಊರೇ ವಕ್ಫ್ ಆಸ್ತಿ ಎಂದು ವಕ್ಫ್ ಮಂಡಳಿ ಘೋಷಿಸಿಕೊಂಡಿದೆ.ದೀಪಾವಳಿಗೂ ಮುಂಚೆ ಇದೇ ಗ್ರಾಮದ ರೈತರು ತಮ್ಮ ಜಮೀನಿನ 11ನೇ ಕಾಲಂನಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿದೆ ಎಂದು ತಹಸೀಲ್ದಾರ್ ಕಚೇರಿ ಎದುರು ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ನ. 5ರ ವರೆಗೆ ಗಡುವು ಸಹ ನೀಡಿದ್ದರು. ಇದೀಗ ದೀಪಾವಳಿ ಮುಗಿಯುತ್ತಿದ್ದಂತೆ ಹೊಲದಿಂದ ಊರಿನ ವರೆಗೂ ಬಂದಿರುವ ವಕ್ಫ್ ಮಂಡಳಿಯು ಗ್ರಾಮದ ಅನೇಕ ಓಣಿಗಳು ಹಾಗೂ ಅದರಲ್ಲಿನ ಮನೆಗಳು ವಕ್ಫ್ ಆಸ್ತಿಗೆ ಸೇರಿವೆ ಎಂದು ಮುಸ್ಲಿಂ ಸಮುದಾಯಕ್ಕೆ ಸೇರಿದ ಭವನದ ಎದುರು ನೋಟಿಸ್ ಹಚ್ಚಿದೆ. ಇದು ಗ್ರಾಮಸ್ಥರನ್ನು ಮತ್ತಷ್ಟು ಕೆರಳಿಸಿದ್ದು, ಸೋಮವಾರ ಸಾಧನಕೇರಿ ರಸ್ತೆಯಲ್ಲಿರುವ ವಕ್ಫ್ ಮಂಡಳಿಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಗ್ರಾಮಸ್ಥರು ಮುತ್ತಿಗೆ ಹಾಕಿ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಕಿತ್ತೂರು ಓಣಿ, ಹೊಸಪೇಟೆ ಓಣಿ, ಧಾರವಾಡ ರಸ್ತೆಗೆ ಅಂಟಿಕೊಂಡ ಮನೆಗಳು, ಕುಸುಬಿ ಓಣಿ ಹೀಗೆ ಹಲವು ಓಣಿಗಳ ಮನೆಗಳನ್ನು ಒಳಗೊಂಡು ಅರ್ಧ ಊರೇ ವಕ್ಫ್ ಮಂಡಳಿ ಆಸ್ತಿ ಎಂದು ಮಂಡಳಿಯು ನೋಟಿಸ್ ಹಚ್ಚಿ ಏಳು ದಿನಗಳ ಒಳಗೆ ಉತ್ತರ ಕೊಡಬೇಕೆಂದು ಸೂಚಿಸಿದೆ. ಇಂಗ್ಲಿಷ್‌ನಲ್ಲಿ ನೋಟಿಸ್ ಹಚ್ಚಿದ್ದು ನಮಗೆ ತಿಳಿಯದೇ ಇದೀಗ ಉತ್ತರ ಕೊಡಲು ವಕ್ಫ್ ಮಂಡಳಿ ಕಚೇರಿಗೆ ಬಂದಿದ್ದೇವೆ ಎಂದು ಗ್ರಾಮದ ಮುಖಂಡರಾದ ಕಲ್ಲಪ್ಪ ಪುಡಕಲಕಟ್ಟಿ, ಶಿವಪ್ಪ ಬಿಜಾಪುರ, ನಿಂಗಪ್ಪ ದಿವಟಗಿ ಮತ್ತಿತರರು ಹೇಳಿದರು.ಈ ವೇಳೆ ವಕ್ಫ್ ಮಂಡಳಿಯ ಅಧಿಕಾರಿ ತಾಜುದ್ದೀನ ಶೇಖ್ ಗ್ರಾಮಸ್ಥರಿಗೆ ಸಮಾಧಾನ ಹೇಳಲು ಹೋಗಿ ಗ್ರಾಮಸ್ಥರಿಂದ ತೀವ್ರವಾಗಿ ತರಾಟೆಗೆ ಒಳಗಾದರು. ಈ ಪ್ರಕರಣದಲ್ಲಿ ತಮ್ಮದೇನೂ ಪಾತ್ರವಲ್ಲ. ಬೆಂಗಳೂರಿನಿಂದ ಬಂದ ಆದೇಶದ ಪ್ರಕಾರ ನಾವು ನಡೆದುಕೊಂಡುದ್ದೇವೆ ಎಂದು ಸಮಜಾಯಿಸಿದರೂ ಪ್ರಮೋದ ಮುತಾಲಿಕ್ ಹಾಗೂ ರೈತರು ಅವರ ಮಾತಿಗೆ ಕಿವಿಗೊಡದೇ ಅಧಿಕಾರಿಗೆ ಮುತ್ತಿಗೆ ಹಾಕಿ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಜತೆಗೆ ಇದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಕೂಡಲೇ ಈ ದಾಖಲೆಯನ್ನು ಬದಲಾಯಿಸುವಂತೆ ಜನರು ಆಗ್ರಹಿಸಿದರು.
ದಿನದಿಂದ ದಿನಕ್ಕೆ ಈ ವಕ್ಫ್ ಮಂಡಳಿಯ ಹೆಸರು ದಾಖಲಾಗುತ್ತಿರುವ ಪ್ರಕರಣ ಹೊಸ ಹೊಸ ತಿರುವು ಪಡೆಯುತ್ತಿದೆ. ಇದರೊಂದಿಗೆ ಅನೇಕ ಕಡೆಗಳಲ್ಲಿ ಮುಸ್ಲಿಮರ ಆಸ್ತಿಗಳ ದಾಖಲೆಯಲ್ಲಿಯೂ ಇದೇ ರೀತಿ ನಮೂದಾಗಿರುವುದು ಕೂಡ ಅಧಿಕಾರಿಗಳಿಗೆ ದೊಡ್ಡ ತಲೆನೋವು ತಂದಿದೆ.