ಏ. 2ಕ್ಕೆ ಕಾಳಿ ನೀರಾವರಿ ಯೋಜನೆ ಲೋಕಾರ್ಪಣೆಗೆ ಮುಹೂರ್ತ ನಿಗದಿಗೊಳಿಸಿದ ತಾಲೂಕಾಡಳಿತ
ಕಾಳಿನದಿ ನೀರಾವರಿ ಯೋಜನೆಯನ್ನು ಶೀಘ್ರ ಜಾರಿಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನಡೆಸಿದ ಹಳಿಯಾಳ ಬಂದ್ ಪ್ರತಿಭಟನೆ ಯಶಸ್ವಿಯಾಗಿದೆ.
ಪ್ರತಿಭಟನಾಕಾರರ ಬೇಡಿಕೆಗಳಿಗೆ ಮಣಿದ ತಾಲೂಕಾಡಳಿತವು ಕಾಳಿ ನೀರಾವರಿ ಯೋಜನೆ ಲೋಕಾರ್ಪಣೆ ಮಾಡುವುದಾಗಿ ಒಪ್ಪಿಗೆ ಸೂಚಿಸಿದ್ದು, ಲೋಕಾರ್ಪಣೆಗೆ ಏ. 2ಕ್ಕೆ ಮುಹೂರ್ತ ನಿಗದಿಪಡಿಸಿದೆ.ಪ್ರತಿಭಟನಾ ಸ್ಥಳಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮೂಹದೊಂದಿಗೆ ಆಗಮಿಸಿದ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಧರಣಿ ನಿರತ ರೈತರಿಗೆ ಬಹಿರಂಗ ಭರವಸೆ ನೀಡಿದರು. ತಹಸೀಲ್ದಾರ ನೀಡಿದ ಭರವಸೆಯಿಂದ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯುವುದಾಗಿಯೂ ಹೇಳಿ, ಒಂದಾನುವೇಳೆ ನೀಡಿದ ಭರವಸೆಯಂತೆ ನಡೆಯದಿದ್ದರೆ ರೈತರೆಲ್ಲರೂ ಉಗ್ರರೂಪದ ಹೋರಾಟಕ್ಕಿಳಿಯಲಿದ್ದಾರೆಂದು ಎಚ್ಚರಿಸಿದರು.
ಭಾಗಶಃ ಬಂದ್:
ಕಾಳಿ ನೀರಾವರಿ ಯೋಜನೆಯು ಕಳೆದ 8 ವರ್ಷದಿಂದ ನನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೆರಿ, ರಾಜ್ಯ ಕಾರ್ಯಾದ್ಯಕ್ಷ ಮಹೇಶಗೌಡ ಸುಬೇದಾರ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟೆ, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಅವರು ಮಾಜಿ ಸಚಿವ, ಶಾಸಕ ದೇಶಪಾಂಡೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟಕಾಕಾರರ ಒತ್ತಡಕ್ಕೆ ಮಣಿದ ತಾಲೂಕಾಡಳಿತವು ತಹಸೀಲ್ದಾರ ಮುಂದಾಳತ್ವದಲ್ಲಿ ವಿವಿಧ ಅಧಿಕಾರಿಗಳ ನಿಯೋಗವು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಕಾಳಿ ನೀರಾವರಿ ಯೋಜನೆಯ ಪ್ರಸ್ತುತ ಸ್ಥಿತಿ ಹಾಗೂ ಯೋಜನೆ ವಿಳಂಬವಾಗಲು ಕಾರಣವಾದ ಅಂಶ ಹೇಳಲು ಮುಂದಾದರೂ, ಅಧಿಕಾರಿಗಳ ಮಾತನ್ನು ಆಲಿಸುವ ಮನಸ್ಥಿತಿಯಲ್ಲಿಲ್ಲದ ಪ್ರತಿಭಟನಾಕಾರರು ಲಿಖಿತವಾಗಿ ಹೇಳಿಕೆ ನೀಡುವಂತೆ ಪಟ್ಟು ಹಿಡಿದರು, ಈ ಹಿನ್ನೆಲೆ ಮತ್ತೇ ಕಚೇರಿಗೆ ಮರಳಿದ ತಹಸೀಲ್ದಾರರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ ಮತ್ತೊಮ್ಮೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕಾಳಿನೀರಾವರಿ ಯೋಜನೆಯನ್ನು ಲೋಕಾರ್ಪಣೆ ಮಾಡುವ ಭರವಸೆ ನೀಡಿದರು. ನೀರಾವರಿ ಇಲಾಖೆಯ ಪ್ರಭಾರೆ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶಕುಮಾರ ಏ. 2ರಂದು ನೀರಾವರಿ ಯೋಜನೆಗೆ ಚಾಲನೆ ನೀಡುವ ಭರವಸೆ ನೀಡಿ, ಯೋಜನೆಯಲ್ಲಿ ಒಳಗೊಳ್ಳದ ಕೆರೆಗಳಿಗೂ ನೀರು ಹರಿಸಲು ಪ್ರಯತ್ನ ನಡೆಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹಳಿಯಾಳ ಸೇರಿದಂತೆ ನೆರೆಯ ಧಾರವಾಡ, ಬೆಳಗಾವಿ ಜಿಲ್ಲೆಯ ರೈತ ಪ್ರಮುಖರು ಆಗಮಿಸಿದ್ದರು.