ಹೊಸ ಯೋಜನೆಗಳಿಲ್ಲವಾದರೂ ಪ್ರತಿ ವಾರ್ಡ್‌ಗೆ ಮಹಿಳೆಯರಿಗಾಗಿ ಪಿಂಕ್ ಆಟೋ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಗೆ ₹ 25 ಸಾವಿರ ಪ್ರೋತ್ಸಾಹ ಧನ ನೀಡುವ ವಿದ್ಯಾಶ್ರೀ, ಪತ್ರಕರ್ತರಿಗೆ ಆರೋಗ್ಯ ವಿಮೆ, ಟ್ಯಾಕ್ಸ್ ಸಂಗ್ರಹಕ್ಕೆ ಜಾಗೃತ ದಳ ಯೋಜನೆಗಳನ್ನು ಘೋಷಿಸುವ ಮೂಲಕ ಜನರನ್ನು ಸೆಳೆದಿದೆ.
ಹುಬ್ಬಳ್ಳಿ:
ರಾಜ್ಯದ 2ನೇ ದೊಡ್ಡ ಪಾಲಿಕೆಯೆನಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಪ್ರಸಕ್ತ ಸಾಲಿನಲ್ಲಿ ₹ 1603.26 ಕೋಟಿ ಬಜೆಟ್ ಮಂಡಿಸಿದೆ. ಕಳೆದ ಬಾರಿ ₹ 1512.67 ಕೋಟಿ ಗಾತ್ರದ ಬಜೆಟ್ ಮಂಡಿಸಿದರೆ ಈ ಬಾರಿ ₹ 90.59 ಕೋಟಿ ಹೆಚ್ಚುವರಿ ಗಾತ್ರದ ಬಜೆಟ್ ಮಂಡಿಸಿದ್ದು ಬರೋಬ್ಬರಿ ₹ 41.17 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದೆ. ಕಳೆದ ಸಲ ಪಂಚ ಗುರಿಗಳನ್ನಿಟ್ಟುಕೊಂಡಿದ್ದ ಪಾಲಿಕೆಯೂ ಈ ಬಾರಿ ಸಪ್ತ ಸೂತ್ರ ಅಳವಡಿಸಿಕೊಂಡು ಮಹಾನಗರದ ಅಭಿವೃದ್ಧಿಗೆ ಪಣ ತೊಟ್ಟಿದೆ.
ತೆರಿಗೆ ಸುಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ವಂಟಮುರಿ 45 ನಿಮಿಷ ಮಂಡಿಸಿದ ಬಜೆಟ್‌ನಲ್ಲಿ ಮಹಾನಗರ ಅಭಿವೃದ್ಧಿಗೆ ಸಪ್ತ ಸೂತ್ರಗಳನ್ನು ಬಿಚ್ಚಿಟ್ಟರು. ಹೇಳಿಕೊಳ್ಳುವಂತಹ ಹೊಸ ಯೋಜನೆಗಳಿಲ್ಲವಾದರೂ ಪ್ರತಿ ವಾರ್ಡ್‌ಗೆ ಮಹಿಳೆಯರಿಗಾಗಿ ಪಿಂಕ್ ಆಟೋ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಗೆ ₹ 25 ಸಾವಿರ ಪ್ರೋತ್ಸಾಹ ಧನ ನೀಡುವ ವಿದ್ಯಾಶ್ರೀ, ಪತ್ರಕರ್ತರಿಗೆ ಆರೋಗ್ಯ ವಿಮೆ, ಟ್ಯಾಕ್ಸ್ ಸಂಗ್ರಹಕ್ಕೆ ಜಾಗೃತ ದಳ ಯೋಜನೆಗಳನ್ನು ಘೋಷಿಸುವ ಮೂಲಕ ಜನರನ್ನು ಸೆಳೆದಿದೆ.
ಎಲ್ಲ ಮೂಲಗಳಿಂದ ₹ 845.34 ಕೋಟಿ ಆದಾಯ ಸಂಗ್ರಹ, ಸರ್ಕಾರ ಹಾಗೂ ವಿವಿಧ ಮೂಲಗಳಿಂದ ₹ 757.99 ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಪಾಲಿಕೆ ಹೊಂದಿದೆ. ಕಳೆದ ಸಾಲಿನ ₹ 7.37 ಕೋಟಿ ಬಾಕಿ ಸೇರಿದಂತೆ ₹ 1595.47 ಕೋಟಿ ವೆಚ್ಚ ಮಾಡಲು ಯೋಜಿಸಿದೆ. ಇದರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ₹ 1057 ಕೋಟಿ ಖರ್ಚು ಮಾಡುವುದಾಗಿ ಘೋಷಿಸಿದೆ. ₹ 41.17 ಲಕ್ಷ ಉಳಿತಾಯ ಮಾಡುವುದಾಗಿ ಭರವಸೆ ನೀಡಿದೆ.
ಟ್ಯಾಕ್ಸ್ ಶಾಕ್:
ಕಳೆದ ವರ್ಷ 3 ಪಟ್ಟು ತೆರಿಗೆ ಹೆಚ್ಚಿಸಿ ಜನರಿಗೆ ಹೊರೆ ಹೇರಿದ್ದ ಪಾಲಿಕೆಯು ಈ ಬಾರಿಯೂ ಮತ್ತೆ ಶೇ. 5ರಷ್ಟು ಆಸ್ತಿ ತೆರಿಗೆ ಹೆಚ್ಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಈ ಮೂಲಕ ಟೆರೆರ್ ಟ್ಯಾಕ್ಸ್ ಶಾಕ್ ನೀಡಿದೆ. ಇದರೊಂದಿಗೆ ಆಸ್ತಿ ತೆರಿಗೆ ಮೂಲಕವೇ ₹ 333 ಕೋಟಿ ಕರ ಸಂಗ್ರಹಿಸುವುದಾಗಿ ತಿಳಿಸಿದೆ. ಕಟ್ಟಡ ಪರವಾನಗಿ, ಸಿಸಿ ನೀಡಿಕೆಯಿಂದ ₹ 53 ಕೋಟಿ ಶುಲ್ಕ ಸಂಗ್ರಹಿಸಲು ಯೋಜಿಸಿದೆ.
ಜಾಗೃತ ದಳ:
ಆದಾಯ ಕ್ರೋಡೀಕರಿಸಲು ಕಂದಾಯ ಅಧಿಕಾರಿ ನೇತೃತ್ವದಲ್ಲಿ ಕಂದಾಯ ಜಾಗೃತ ದಳ ರಚಿಸಲು ಉದ್ದೇಶಿಸಿದೆ. ಕುಡಿಯುವ ನೀರಿನ ಬಡ್ಡಿ ಮನ್ನಾ ಪ್ರಸ್ತಾವನಗೆ ಸರ್ಕಾರ ಅಸ್ತು ನೀಡಿದಲ್ಲಿ ₹ 142 ಕೋಟಿ ಪಾಲಿಕೆಗೆ ಹರಿದು ಬರಲಿದೆ ಎಂದು ಆಶಯವನ್ನೂ ವ್ಯಕ್ತಪಡಿಸಿದೆ. ತೆರಿಗೇತರ ಮೂಲಗಳಿಂದ ₹ 435 ಕೋಟಿ ಹಾಗೂ ಪಾಲಿಕೆ ಆಸ್ತಿಗಳಿಂದ ₹ 17 ಕೋಟಿ ಮತ್ತು ಪಾಲಿಕೆಯ ವಿವಿಧ ಆಸ್ತಿಗಳ ಮಾರಾಟದಿಂದ ₹ 111 ಕೋಟಿ ಆದಾಯ ಸಿಗಲಿದೆ ಎಂದು ಅಂದಾಜಿಸಿದೆ.
ಹಾಗೆಯೇ ಪಾಲಿಕೆಯ ವಿವಿಧ ಹಂತದ ನೌಕರರು, ಪೌರ ಕಾರ್ಮಿಕರು, ಹೊರಗುತ್ತಿಗೆ ನೌಕರರು ಒಳಗೊಂಡ ಮಾನವ ಸಂಪನ್ಮೂಲಗಳಿಗೆ ₹ 245 ಕೋಟಿ ವೆಚ್ಚ ಮಾಡುವುದಾಗಿ ತಿಳಿಸಿದೆ. ವಿವಿಧ ಆಸ್ತಿ ಮತ್ತು ಇತರೆ ನಿರ್ವಹಣೆಗಾಗಿ ₹ 156 ಕೋಟಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ₹ 1057.50 ಕೋಟಿ ವ್ಯಯಿಸುವುದಾಗಿ ಹೇಳಿದೆ.
ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ₹ 15.83 ಕೋಟಿ, ನಿರ್ದಿಷ್ಟ ಯೋಜನೆಗಳು, ಸರ್ಕಾರದ ವಿವಿಧ ಯೋಜನೆಗಳಿಗೆ ವಂತಿಗೆ ಪಾವತಿಸಲು ₹ 100 ಕೋಟಿ ಮೀಸಲಿಟ್ಟಿದೆ. ₹ 19.41 ಕೋಟಿ ಇತರೆ ತುರ್ತು ಕಾರ್ಯಗಳಿಗೆ ಖರ್ಚು ಮಾಡುವುದಾಗಿ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.