ಕರ್ನಾಟಕ ರಾಜ್ಯದ ವಿದ್ಯುತ್ ಪ್ರಸರಣ ನಿಗಮವನ್ನು ರಾಜ್ಯ ಸರ್ಕಾರ ಖಾಸಗೀಕರಣ ಮಾಡಬಾರದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹಿಸಿದರು.
ವಿದ್ಯುತ್ ನಿಗಮ ಖಾಸಗೀಕರಣಗೊಳಿಸದಂತೆ ರೈತರ ಒತ್ತಾಯ
ಮುಖ್ಯಮಂತ್ರಿ ಡಿಕೆಶಿ ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧಾರ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕರ್ನಾಟಕ ರಾಜ್ಯದ ವಿದ್ಯುತ್ ಪ್ರಸರಣ ನಿಗಮವನ್ನು ರಾಜ್ಯ ಸರ್ಕಾರ ಖಾಸಗೀಕರಣ ಮಾಡಬಾರದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದ್ಯುತ್ ಖಾಸಗೀಕರಣ ಮಾಡಿದರೆ, ಕೃಷಿ ಚಟುವಟಿಕೆ ಮಾಡಲು ರೈತರಿಗೆ ತೊಂದರೆಯಾಗಲಿದೆ. ಖಾಸಗೀಕರಣದ ಹೊಡೆತದಿಂದ ಕೃಷಿ ಉತ್ಪನ್ನವು ಕುಂಠಿತವಾಗುವ ಸಾಧ್ಯತೆಗಳಿವೆ. ನಿಗದಿತ ಸಮಯಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದರು.
ವಿದ್ಯುತ್ ಪ್ರಸರಣ ನಿಗಮವನ್ನು ಖಾಸಗಿ ಕಂಪನಿಗಳು ವಹಿಸಿಕೊಂಡಲ್ಲಿ ನಿಯಮ ಮತ್ತು ಷರತ್ತುಗಳನ್ನು ವಿಧಿಸುತ್ತಾರೆ. ಇದರಿಂದ ಸಮರ್ಪಕವಾದ ವಿದ್ಯುತ್ ಪೂರೈಕೆಯಾಗದೆ, ಕೃಷಿ ಚಟುವಟಿಕೆ ವಿಫಲವಾಗುತ್ತದೆ. ಆಗ ರೈತರು ಕೃಷಿ ಬಿಟ್ಟು ಹೊರಬರುವ ಹಾಗೂ ಅವಕಾಶವಾದಿಯಾಗಿ ಕಾಯುತ್ತಿರುವ ಬಂಡವಾಳ ಶಾಹಿಗಳು ಮತ್ತು ಶ್ರೀಮಂತರು ಕೃಷಿ ಭೂಮಿಯನ್ನು ಆಕ್ರಮಿಸಿ ಮೂಲ ಕೃಷಿಕರನ್ನು ಕೂಲಿ ಕಾರ್ಮಿಕರಂತೆ ನೇಮಿಸಿಕೊಳ್ಳುವ ಸಾಧ್ಯತೆಗಳು ನಿರ್ಮಾಣವಾಗುತ್ತದೆ ಎಂದು ಆರೋಪಿಸಿದರು.
ಮೂಲ ಸೌಕರ್ಯವನ್ನು ಕಲ್ಪಿಸಿರುವ ವಿದ್ಯುತ್ ನಿಗಮಗಳು ಖಾಸಗಿಯವರ ಕೈಗೊಂಬೆಯಾದರೆ, ರಾಜ್ಯದ ಕೃಷಿ ವರ್ಗದ ರಕ್ಷಣೆ ಕೈ ತಪ್ಪಿದಂತಾಗುತ್ತದೆ. ಎಸ್. ಬಂಗಾರಪ್ಪನವರ ಕಾಲದಲ್ಲಿ ಸಾಕಷ್ಟು ಹೋರಾಟದ ನಂತರ ಕೃಷಿಗೆ ಉಚಿತ ವಿದ್ಯುತ್ ನೀಡುವ ಘೋಷಣೆಯಾಗಿದೆ. ಖಾಸಗಿಯವರಿಗೆ ವಹಿಸಿದರೆ, ಸ್ಮಾರ್ಟ್ ಮೀಟರ್ ಅಳವಡಿಕೆಯ ಒತ್ತಡಗಳಿಂದ ಕೃಷಿ ವಲಯಕ್ಕೆ ಹೊಡೆತ ಬೀಳಲಿದೆ ಎಂದರು.
ವಿದ್ಯುತ್ ವಲಯವನ್ನು ಹಂತ ಹಂತವಾಗಿ ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ರಾಜ್ಯದ ೧೫ ಜಿಲ್ಲೆಗಳಲ್ಲಿ ವಿತರಣೆ ಪರವಾನಗಿಯನ್ನು ಖಾಸಗಿ ಕಂಪನಿ ಕೇಳುತ್ತಿದೆ. ಸಾರ್ವಜನಿಕ ಹಣದಿಂದ ವಿದ್ಯುತ್ ಪ್ರಸರಣ ನಿಗಮ ನಿರ್ಮಾಣವಾಗಿದ್ದು, ಇದಕ್ಕಾಗಿ ರೈತರು ಭೂಮಿಯನ್ನು ಸಹ ಕಳೆದುಕೊಂಡಿದ್ದಾರೆ. ಸಾವಿರಾರು ಜನ ನೌಕರರು ಸೇವೆ ಸಲ್ಲಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಇಂಥ ಆಸ್ತಿಯನ್ನು ಖಾಸಗೀಕರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಗೃಹಜೋತಿ, ಭಾಗ್ಯಜ್ಯೋತಿ ಅಂತಹ ಯೋಜನೆಗಳಿಗೆ ವಿದ್ಯುತ್ ನೀಡುವರು ಯಾರು? ನಷ್ಟವಾದರೂ ಕೂಡ ದೂರದ ಗ್ರಾಮಗಳಿಗೆ ಹೆಚ್ಚಿನ ಗುಣಮಟ್ಟದ ವಿದ್ಯುತ್ ಪೂರೈಕೆ ಜವಾಬ್ದಾರಿ ಯಾರು ಮಾಡುವರು ಎಂಬ ಪ್ರಶ್ನೆಗಳು ಕಾಡುತ್ತಿದೆ ಎಂದರು.
ಮುಂಬೈ ಮೂಲದ ಟಾಟಾ ಪವರ್ ಕಂಪನಿ ಲಿಮಿಟೆಡ್ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ರಾಜ್ಯದ ೧೫ ಜಿಲ್ಲೆಗಳ ವಿದ್ಯುತ್ ವಿತರಣೆಗೆ ಅರ್ಜಿ ಸಲ್ಲಿಸಿದ್ದು, ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನೂ ಒಳಗೊಂಡಿರುವ ಸೆಸ್ಕಾಂ ವ್ಯಾಪ್ತಿಯ ಪ್ರದೇಶಗಳಿಗೆ ವಿತರಣಾ ಪರವಾನಗಿ ನೀಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣದ ಅವೈಜ್ಞಾನಿಕ ಯೋಜನೆಯನ್ನು ಜಾರಿಗೊಳಿಸಬಾರದು. ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ, ಪ್ರಕಾಶ್ ಗಾಂಧಿ, ಜಿಲ್ಲಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ, ಪದಾಧಿಕಾರಿಗಳಾದ ಅಂಗಡಿ ಸತೀಶ್, ಹೊನ್ನೇಗೌಡನಹಳ್ಳಿ ಮಹೇಶ್, ನಾಗರಾಜಪ, ಉಮೇಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.