ಕೇಕೆ, ಶಿಳ್ಳೆ, ಹಲಗೆ ಶಬ್ದ, ಉಸಿರು ಬಿಗಿ ಹಿಡಿದು ನೋಡುವ ದೃಶ್ಯ... ಇದು ಹಂಪಿ ಉತ್ಸವದ ಅಂಗವಾಗಿ ಇಲ್ಲಿಯ ಹೊಸಮಲಪನ ಗುಡಿ ಬಳಿ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ಕುಸ್ತಿ ಪಂದ್ಯಾವಳಿಯ ಜಲಕ್...
ಬಿ. ರಾಮಪ್ರಸಾದ್ ಗಾಂಧಿ
ಹಂಪಿ: ಕೇಕೆ, ಶಿಳ್ಳೆ, ಹಲಗೆ ಶಬ್ದ, ಉಸಿರು ಬಿಗಿ ಹಿಡಿದು ನೋಡುವ ದೃಶ್ಯ... ಇದು ಹಂಪಿ ಉತ್ಸವದ ಅಂಗವಾಗಿ ಇಲ್ಲಿಯ ಹೊಸಮಲಪನ ಗುಡಿ ಬಳಿ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ಕುಸ್ತಿ ಪಂದ್ಯಾವಳಿಯ ಜಲಕ್...
ಬೆಳಗಾವಿ, ಗದಗ, ಧಾರವಾಡ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತಹ ಕುಸ್ತಿಪಟುಗಳು ಆಗಮಿಸಿ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಹಂಪಿ ಕಿಶೋರ, ಹಂಪಿ ಕುಮಾರ, ಹಂಪಿ ಕೇಸರಿ, ಹಂಪಿ ಕಂಠೀರವ... ಹೀಗೆ ನಾಲ್ಕು ವಿಭಾಗಗಳಲ್ಲಿ ಕುಸ್ತಿ ಪಂದ್ಯ ಜರುಗಿತು.
ಹಂಪಿ ಕಿಶೋರಕ್ಕೆ 57ರಿಂದ 65 ಕಿಲೋ ಹೊಂದಿರಬೇಕು. ಇದರಲ್ಲಿ 11 ಜನರು ಭಾಗವಹಿಸಿದ್ದರು. ಹಂಪಿ ಕುಮಾರಗೆ 66ರಿಂದ 74 ಕಿಲೋ ತೂಕ ಹೊಂದಿರಬೇಕು. ಇದರಲ್ಲಿ 6 ಜನರು, ಹಂಪಿ ಕೇಸರಿಗೆ 75ರಿಂದ 85 ಕಿಲೋ ಇರಬೇಕು. ಇದರಲ್ಲಿ 4 ಜನರು ಪಾಲ್ಗೊಂಡರೆ, 86 ವಯಸ್ಸು ಮೇಲ್ಪಟ್ಟವರಿಗೆ ಹಂಪಿ ಕಂಠೀರವ ಪ್ರಶಸ್ತಿ ಇದರಲ್ಲಿ 4 ಜನರು ಭಾಗವಹಿಸಿದ್ದರು.
ಮಹಿಳಾ ವಿಭಾಗದಲ್ಲಿ ಹಂಪಿ ಕೇಸರಿಗೆ 7 ಜನರು, ಹಂಪಿ ಕುಮಾರಿಗೆ 5 ಜನರು, ಹಂಪಿ ಮಹಿಳಾ ಕೇಸರಿಗೆ 6 ಜನರು, 58 ವಯಸ್ಸು ಮೇಲ್ಪಟ್ಟ ಮಹಿಳಾ ಕುಸ್ತಿಪಟುಗಳು 6 ಜನರು ಭಾಗವಹಿಸಿ ಹಂಪಿ ಮಹಿಳಾ ಕಂಠೀರವ ಪ್ರಶಸ್ತಿಗೆ ಸ್ಪರ್ಧೆ ನಡೆಸಿದರು. ಜಿಲ್ಲಾ ಕೇಂದ್ರ ಹೊಸಪೇಟೆಯಿಂದಲೇ 25 ಪುರುಷ ಕುಸ್ತಿಪಟುಗಳು ಪಾಲ್ಗೊಂಡಿದ್ದರು.
ಬಿರು ಬಿಸಿಲಿನಲ್ಲೂ ಉತ್ಸಾಹದಿಂದ ಪೈಲ್ವಾನರು ಪಾಲ್ಗೊಂಡಿದ್ದರು. ಮಹಿಳಾ ಕುಸ್ತಿಪಟುಗಳು ಸಹ ಉತ್ಸಾಹದಿಂದ ಪಾಲ್ಗೊಂಡು ಪಂದ್ಯಾಳಿಗೆ ಮೆರಗು ನೀಡಿದರು.
ಮೈಸೂರಿನ ಪರಮಾನಂದ ಹಾಗೂ ಹರಪನಹಳ್ಳಿಯ ಕೃಷ್ಣ ಅವರ ರೋಚಕ ಕುಸ್ತಿ ಪಂದ್ಯಾವಳಿಗೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿ ಮಾತನಾಡಿ, ಹಂಪಿ ಉತ್ಸವ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಾಕರ್ಷಣೆಯಾಗಿ ಸಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಉತ್ಸವ ಯಶಸ್ವಿಗೆ ಹೆಚ್ಚು ಸಹಕಾರ ನೀಡುತ್ತಿದ್ದಾರೆ. ಇದೇ ವರ್ಷ ನವಂಬರ್‌ನಲ್ಲಿ ಪುನಃ ಹಂಪಿ ಉತ್ಸವ ನಡೆಯುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ತಾಪಂ ಇಒ ಆಲಮ್ ಬಾಷಾ, ಗ್ರಾಮೀಣ ಕ್ರೀಡಾ ಸಂಚಾಲಕ ಯು. ಅಶೋಕ, ಕ್ರೀಡಾ ಸಮಿತಿ ಅಧ್ಯಕ್ಷ ಎಂ. ಉಮೇಶ, ತರಬೇತುದಾರರಾದ ಬೀರಲಿಂಗಪ್ಪ, ವಿನಾಯಕ, ನಾಗರಾಜ, ಮಮತಾ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶ್ರೀಕಾಂತ ವಾಲ್ಮೀಕಿ ಉಪಸ್ಥಿತರಿದ್ದು, ಕುಸ್ತಿ ಪಂದ್ಯಾವಳಿ ಯಶಸ್ವಿಗೊಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.