ಪ್ರೇಮಲೋಕಕ್ಕೆ ಒಲವಿನ ಭಾಷ್ಯ ಬರೆದ ಪ್ರೇಮಿಗಳು

KannadaprabhaNewsNetwork |  
Published : Feb 15, 2026, 03:45 AM IST
ಅಂಕೋಲಾದ ನದಿಭಾಗ ಬೀಚನಲ್ಲಿ ಕಂಡು ಬಂದ ಪ್ರೇಮಿಗಳು. | Kannada Prabha

ಸಾರಾಂಶ

ಪ್ರೇಮದ ಸ್ಪಂದನೆ, ಗುಲಾಬಿಯ ಸುವಾಸನೆ, ಹೃದಯದ ಮಿಡಿತಗಳ ನಡುವೆ ವಿಶ್ವ ಪ್ರೇಮಿಗಳ ದಿನವನ್ನು ಶನಿವಾರ ಅಂಕೋಲಾದಲ್ಲಿ ಯುವ ಜೋಡಿಗಳು ಹಚ್ಚ ಹಸಿರಾಗಿ, ಹೃದಯ ತುಂಬಿ ಆಚರಿಸಿದರು.

ಅಂಕೋಲಾದಲ್ಲಿ ಪ್ರೇಮಿಗಳ ಹಬ್ಬದ ಸಂಭ್ರಮೋತ್ಸವ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಪ್ರೇಮದ ಸ್ಪಂದನೆ, ಗುಲಾಬಿಯ ಸುವಾಸನೆ, ಹೃದಯದ ಮಿಡಿತಗಳ ನಡುವೆ ವಿಶ್ವ ಪ್ರೇಮಿಗಳ ದಿನವನ್ನು ಶನಿವಾರ ಅಂಕೋಲಾದಲ್ಲಿ ಯುವ ಜೋಡಿಗಳು ಹಚ್ಚ ಹಸಿರಾಗಿ, ಹೃದಯ ತುಂಬಿ ಆಚರಿಸಿದರು.

ಪ್ರೇಮಿಗಳ ಸಂಭ್ರಮ:

ಪ್ರೇಮಿಗಳ ದಿನವೆಂದರೆ ಯುವ ಮನಸ್ಸುಗಳಿಗೆ ಹಬ್ಬದ ದಿನ. ಅಂಕೋಲಾದ ವಿವಿಧ ಏಕಾಂತ ಪ್ರದೇಶಗಳಿಗೆ ತೆರಳಿದ ಜೋಡಿಗಳು ಒಲವಿನ ಮಾತು, ನಗು, ಉಡುಗೊರೆಗಳ ವಿನಿಮಯದ ಮೂಲಕ ದಿನವನ್ನು ಸ್ಮರಣೀಯವನ್ನಾಗಿಸಿಕೊಂಡರು. ಕೈಹಿಡಿದು ನಡೆದು, ಹೃದಯದ ಮಾತು ಹಂಚಿಕೊಂಡ ಕ್ಷಣಗಳು ಅವರಿಗೆ ವಿಶೇಷವಾಗಿದ್ದವು. ನಗರದಲ್ಲೂ, ಪ್ರಕೃತಿಯ ಮಡಿಲಲ್ಲೂ, ದೇವಸ್ಥಾನಗಳನ್ನು ಸುತ್ತಿ ತಮ್ಮ ಪ್ರೇಮದ ಯಶಸ್ಸಿಗೆ ಪ್ರಾರ್ಥಿಸಿದರು.ಮಧುರ ಯಾತನೆ:

ಕೆಲವು ಕಾಲೇಜು ವಿದ್ಯಾರ್ಥಿ ಜೋಡಿಗಳು ಕಾಲೇಜಿಗೆ ಹೋಗುವ ನೆಪದಲ್ಲಿ ಹೊರಟು, ಏಕಾಂತ ತಾಣಗಳಲ್ಲಿ ಭೇಟಿ ಮಾಡಿ ಪರಸ್ಪರ ಶುಭಾಶಯ ಹಾಗೂ ಉಡುಗೊರೆಗಳನ್ನು ಹಂಚಿಕೊಂಡರು. ಪ್ರೇಮದ ಮಧುರ ಯಾತನೆಯಲ್ಲಿ ತೇಲಿದ ಅವರು, ಪಾಲಕರ ಗಮನಕ್ಕೆ ಬಾರದಂತೆ ಮಧ್ಯಾಹ್ನದೊಳಗೆ ಮನೆ ಸೇರಿಕೊಂಡರು. ಇನ್ನೂ ಕೆಲವರು ಮೊಬೈಲ್ ಸಂದೇಶಗಳ ಮೂಲಕವೇ ಪ್ರೇಮದ ಹೂವು ಅರಳಿಸಿ, ಮನೆಯವರ ಮುಂದೆ ಸಭ್ಯರಂತೆ ಉಳಿದರು.ದೇವಸ್ಥಾನ ಸುತ್ತಿದ ಪ್ರೇಮಿಗಳು:

ನಗರದ ಗಣಪತಿ ದೇವಸ್ಥಾನ, ಕೋಟೆ ಮಾರುತಿ ದೇವಸ್ಥಾನಗಳಲ್ಲಿ ಬೆಳಗ್ಗೆಯೇ ಪ್ರೇಮಿಗಳು ದರ್ಶನ ಪಡೆದು ತಮ್ಮ ಪ್ರೇಮಯಾತ್ರೆ ಯಶಸ್ವಿಯಾಗಲೆಂದು ಪ್ರಾರ್ಥಿಸಿದರು. ಭಕ್ತಿ ಹಾಗೂ ಪ್ರೇಮ ಒಂದೇ ವೇದಿಕೆಯಲ್ಲಿ ಮಿಳಿತಗೊಂಡ ದೃಶ್ಯ ಕಂಡುಬಂತು.

ಅಂಕೋಲಾ ಬಸ್ ನಿಲ್ದಾಣ, ಕಂಚಿನಭಾಗ, ಬಸಾಕಲ್ ಗುಡ್ಡ, ಶಿರೂರು ಗುಡ್ಡ, ನದಿಬಾಗ ಸಮುದ್ರ ತೀರಗಳಲ್ಲಿ ಯುವ ಜೋಡಿಗಳು ತಮ್ಮದೇ ರೀತಿಯಲ್ಲಿ ಹಬ್ಬದ ಸವಿಯನ್ನು ಆಸ್ವಾದಿಸಿದರು. ಏರಿದ ಪ್ರೇಮ ಜ್ವರ:

ಪ್ರೇಮಿಗಳ ಹಬ್ಬವೆಂದರೆ ಕೆಲವರಿಗೆ ‘ಪ್ರೇಮ ಜ್ವರ’ ಏರಿದಂತೆಯೇ, ತಾಲೂಕು ಕೇಂದ್ರದಿಂದ ಸುಮಾರು 6 ಕಿಮೀ ದೂರದ ಹೊನ್ನೇಬೇಲ ಹಾಗೂ ನದಿಭಾಗ ಬೀಚಗಳಲ್ಲಿ ಜೋಡಿಗಳು ಪ್ರೇಮದ ಕಾವಿನಲ್ಲಿ ಮೈಮರೆತು ಸಂಭ್ರಮಿಸಿದರು. ಪ್ರಕೃತಿಯ ಮಡಿಲಲ್ಲಿ ಕುಳಿತು ಮನದಾಳದ ಮಾತು ಹಂಚಿಕೊಳ್ಳುತ್ತಿರುವುದು ಕಂಡು ಬಂತು. ಹಾಗೆ ಇಲ್ಲಿನ ಪ್ರಶಾಂತ ಕಡಲ ಕಿನಾರೆಗಳಲ್ಲಿ ವಿಹರಿಸಿದ ಯುವ ಜೋಡಿಗಳಿಗೆ ತೆರೆಗಳ ಜೋಗುಳದ ಹಾರೈಕೆ ದೊರೆಯಿತೆ ವಿನಃ ಕಿಡಿಗೇಡಿಗಳ ಉಪಟಳವಿರಲಿಲ್ಲ.ಗುಲಾಬಿ ದರ ದ್ವಿಗುಣ:

ಸಾಮಾನ್ಯ ದಿನಗಳಲ್ಲಿ ₹15ಕ್ಕೆ ಸಿಗುತ್ತಿದ್ದ ಗುಲಾಬಿ ಹೂವು, ಪ್ರೇಮಿಗಳ ದಿನದಂದು ₹30ಕ್ಕೆ ಏರಿಕೆಯಾಯಿತು. ಆದರೂ ವರ್ಷಕ್ಕೊಮ್ಮೆ ಬರುವ ಈ ದಿನದ ವಿಶೇಷಕ್ಕೆ ದರದ ಏರಿಕೆ ಪ್ರೇಮಿಗಳಿಗೆ ಗಮನಕ್ಕೆ ಬರಲಿಲ್ಲ. ಪ್ರೇಮದ ಬೆಲೆ ಮುಂದೆ ಗುಲಾಬಿಯ ಬೆಲೆ ಕ್ಷುಲ್ಲಕವೆನಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿನಲ್ಲಿ ನೆಮ್ಮದಿಗೆ ಸಂಗೀತ ಅಗತ್ಯ: ಡಾ. ಜಿ.ಎಲ್. ಹೆಗಡೆ
ಕವಿತೆಗಳಿಗೆ ಕಿವಿಯಾದ ಅಂಗನವಾಡಿ ಕಾರ್ಯಕರ್ತೆಯರು