ಕೃಷ್ಣ ಲಮಾಣಿ ಹೊಸಪೇಟೆ
ಒಂದೆಡೆ ನೆತ್ತಿ ಸುಡುವ ಬಿಸಿಲು ಇದ್ದರೆ, ಇತ್ತ ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನಗಳು ಕೈ ಕೊಡುತ್ತಿರುವುದರಿಂದ ಭಾರೀ ಬಿಸಿಲಿನಲ್ಲೇ ಪ್ರವಾಸಿಗರು ಕಾಲ್ನಡಿಗೆಯಲ್ಲಿ ತೆರಳಿ ಸ್ಮಾರಕಗಳನ್ನು ವೀಕ್ಷಿಸುವ ಸ್ಥಿತಿ ಬಂದೊದಗಿದೆ!.ಹಂಪಿಯ ಗೆಜ್ಜಲ ಮಂಟಪದಿಂದ ವಿಜಯ ವಿಠಲ ದೇವಸ್ಥಾನದವರೆಗೆ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮಾಡಿದೆ. ಪೈಲಟ್ ಯೋಜನೆ ಮಾದರಿಯಲ್ಲಿ ಹಂಪಿಯಲ್ಲಿ ದಶಕಗಳ ಹಿಂದೆಯೇ ಪ್ರಾಧಿಕಾರ ಯೋಜನೆ ರೂಪಿಸಿ ಸಾಕಾರಗೊಳಿಸಿದೆ. ಆದರೂ ಇನ್ನೂ ಈ ಯೋಜನೆ ತೆವಳುತ್ತಲೇ ಸಾಗಿದೆ.
ಹಂಪಿ ಗೆಜ್ಜಲ ಮಂಟಪದಿಂದ ವಿಜಯ ವಿಠಲ ದೇವಸ್ಥಾನದವರೆಗೆ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಸಕ್ಸಸ್ ಆದರೆ, ಹಂಪಿಯ ಉಳಿದ ಸ್ಮಾರಕಗಳ ಬಳಿಯೂ ಈ ಯೋಜನೆ ರೂಪಿಸಲು ಪ್ರಾಧಿಕಾರ ಮುಂದಾಗಿತ್ತು. ಆದರೆ, ಬ್ಯಾಟರಿ ಚಾಲಿತ ವಾಹನಗಳ ಯೋಜನೆ ಇನ್ನೂ ಸಮಸ್ಯೆ ಸುಳಿಯಿಂದ ಹೊರ ಬಂದಿಲ್ಲ.25 ವೆಹಿಕಲ್‌ಗಳಲ್ಲಿ 10 ಮಾತ್ರ ರನ್ನಿಂಗ್: ಹಂಪಿಯಲ್ಲಿ 25 ಬ್ಯಾಟರಿ ಚಾಲಿತ ವಾಹನಗಳಿವೆ. ಈ ಪೈಕಿ 10 ವಾಹನಗಳು ಮಾತ್ರ ಈಗ ಚಾಲ್ತಿಯಲ್ಲಿವೆ. ಐದು ವೆಹಿಕಲ್ ಗುಜರಿಗೆ ಬಿದ್ದಿವೆ. ಉಳಿದ 20ರಲ್ಲಿ ಹತ್ತು ರನ್ನಿಂಗ್‌ನಲ್ಲಿದ್ದು, ಇನ್ನೂ ಹತ್ತು ವೆಹಿಕಲ್‌ಗಳು ರಿಪೇರಿಗೆ ಬಂದಿವೆ.
ಹೊಸದಾಗಿ ತರಿಸಲಾದ 10 ವೆಹಿಕಲ್‌ಗಳಲ್ಲಿ ಎರಡು ಕೈಕೊಟ್ಟಿವೆ. ಹಳೆಯ ಹತ್ತು ವೆಹಿಕಲ್‌ಗಳಲ್ಲಿ ಎಂಟು ಕೈಕೊಟ್ಟಿದ್ದು, ಎರಡು ಚಾಲ್ತಿಯಲ್ಲಿವೆ.ಕಾದು, ಕಾದು ಸುಸ್ತು: ದೇಶ, ವಿದೇಶಿ ಪ್ರವಾಸಿಗರು ಹಂಪಿ ಸ್ಮಾರಕಗಳ ವೀಕ್ಷಣೆಗೆ ಉತ್ಸಾಹದಿಂದ ಬಂದಿರುತ್ತಾರೆ. ಸರಿಯಾಗಿ ವೆಹಿಕಲ್‌ಗಳು ಸಿಗದೇ ಕಾದು ಕಾದು ಸುಸ್ತಾಗುತ್ತಿದ್ದಾರೆ. ಈ ಹತ್ತು ವೆಹಿಕಲ್‌ಗಳಲ್ಲಿ ಚಾರ್ಜಿಂಗ್ ಸಮಸ್ಯೆ ಕೂಡ ಕಂಡು ಬರುತ್ತಿರುವುರಿಂದ ಪ್ರವಾಸಿಗರ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲಾಗದೇ ಪ್ರಾಧಿಕಾರದ ತಾತ್ಕಾಲಿಕ ಸಿಬ್ಬಂದಿ ಬೆಸ್ತು ಬೀಳುತ್ತಿದ್ದಾರೆ.
ಕಾಲ್ನಡಿಗೆಯಲ್ಲೇ ಸ್ಮಾರಕಗಳ ವೀಕ್ಷಣೆ: ಗೆಜ್ಜಲ ಮಂಟಪದಿಂದ ಪ್ರವಾಸಿಗರು ಕಾಲ್ನಡಿಗೆಯಲ್ಲೇ ಆಗಮಿಸಿ 2 ಕಿಮೀ ದೂರದಲ್ಲಿರುವ ವಿಜಯ ವಿಠಲ ದೇವಸ್ಥಾನ, ಕಲ್ಲಿನತೇರು, ಸಪ್ತಸ್ವರ ಮಂಟಪ, ರಾಜರ ತುಲಾಭಾರ, ವಿಷ್ಣು ಸ್ಮಾರಕ, ಪುರಂದರ ದಾಸರ ಮಂಟಪ ಸೇರಿದಂತೆ ವಿವಿಧ ಸ್ಮಾರಕ ವೀಕ್ಷಣೆ ಮಾಡುತ್ತಿದ್ದಾರೆ.₹20 ದರ ನಿಗದಿ: ಹಂಪಿ ಬ್ಯಾಟರಿ ಚಾಲಿತ ವಾಹನಗಳಲ್ಲಿ ತೆರಳಲು ಎರಡು ಬದಿಗೆ ತಲಾ ₹20 ನಿಗದಿ ಪಡಿಸಲಾಗಿದೆ. 14 ವರ್ಷದೊಳಗಿನ ಮಕ್ಕಳು ಉಚಿತವಾಗಿ ತೆರಳಬಹುದು. ಒಟ್ಟು 21 ಮಹಿಳಾ ಚಾಲಕರಿದ್ದಾರೆ. ಒಬ್ಬರು ಸೂಪರ್ ವೈಸರ್ ಇದ್ದಾರೆ. ಬ್ಯಾಟರಿ ವೆಹಿಕಲ್‌ಗಳು ಸಮರ್ಪಕವಾಗಿ ಇಲ್ಲದಿದ್ದರಿಂದ ಚಾಲಕರಿಗೂ ಕೆಲಸ ಇಲ್ಲದಂತಾಗಿದೆ.
ಮರ್ಯಾದೆ ತೆಗೆಯುತ್ತಿರುವ ಶೌಚಾಲಯಗಳು!: ಹಂಪಿ ಗೆಜ್ಜಲ ಮಂಟಪದ ಬಳಿ ಬ್ಯಾಟರಿ ಚಾಲಿತ ವಾಹನ ಏರಲು ಬರುವ ಪ್ರವಾಸಿಗರಿಗಾಗಿ ಎರಡು ಇಟಾಲಿಯನ್ ಹಾಗು ಒಂದು ಇಂಡಿಯನ್ ಶೈಲಿಯ ಶೌಚಾಲಯಗಳಿವೆ. ಈ ಶೌಚಾಲಯಗಳಲ್ಲಿ ನೀರಿಲ್ಲದೇ ದೇಶ, ವಿದೇಶಿ ಪ್ರವಾಸಿಗರ ಎದುರು ಹಂಪಿ ಪ್ರವಾಸೋದ್ಯಮದ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿದೆ.ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಿರುವುದು ಸರಿಯಾಗಿದೆ. ಪರಿಸರ ಉಳಿಸಲು ಈ ಯೋಜನೆ ರೂಪಿಸಲಾಗಿದೆ.ಆದರೆ, 25ರಲ್ಲಿ10 ಮಾತ್ರ ಚಾಲ್ತಿಯಲ್ಲಿದ್ದು, ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ತೆರಳಲು ಸಮಸ್ಯೆ ಆಗುತ್ತಿದೆ ಎಂದು ಪ್ರವಾಸಿಗರಾದ ರಾಜಕಿಶೋರ, ಪ್ರಣಿತಾ ತಿಳಿಸಿದ್ದಾರೆ.
ಬ್ಯಾಟರಿ ವೆಹಿಕಲ್ ಸಮಸ್ಯೆ ಪರಿಹರಿಸಲಾಗುತ್ತಿದೆ. ಈಗಿರುವ 20 ರಲ್ಲಿ 10 ಚಾಲನೆಯಲ್ಲಿದ್ದು, ಉಳಿದ 10 ವೆಹಿಕಲ್‌ಗಳ ರಿಪೇರಿಗೂ ಸಂಬಂಧಿಸಿದ ಕಂಪನಿಗೆ ಸೂಚಿಸಲಾಗಿದೆ. ಪ್ರವಾಸಿಗರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.