ಮನರೇಗಾ ಕೂಲಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Apr 20, 2025, 01:59 AM IST
19ಎಚ್‌ಪಿಟಿ3- ಹೊಸಪೇಟೆಯಲ್ಲಿ ಮನರೇಗಾ ಕಾರ್ಮಿಕರು ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಸರ್ಕಾರ ಹೊಸ ಹೊಸ ಆದೇಶ ಜಾರಿಗೆ ತಂದು ಕೂಲಿಯಿಂದ ಬದುಕು ಕಟ್ಟಿಕೊಳ್ಳಲು ಹೊರಟಿರುವ ಮನರೇಗಾ ಕಾರ್ಮಿಕರಿಗೆ ಹಿನ್ನಡೆ ಮಾಡುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ

ಹೊಸಪೇಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಹಾಗೂ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲೆಯ ಕೂಲಿ ಕಾರ್ಮಿಕರು ಜಿಲ್ಲಾಧಿಕಾರಿ ಭವನದಲ್ಲಿರುವ ಜಿಪಂ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಹಾಗೂ ಕಟ್ಟಕಡೆಯ ಕುಟುಂಬಕ್ಕೆ ಉದ್ಯೋಗದ ಭದ್ರತೆಗಾಗಿ ಜಾರಿ ಮಾಡಿರುವ ಕಾನೂನು ಕರ್ನಾಟಕದಲ್ಲಿ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ದುಡಿಯುವ ಕೈಗಳಿಗೆ ನ್ಯಾಯ ಸಿಗುತ್ತಿಲ್ಲ, ಸರ್ಕಾರ ಹೊಸ ಹೊಸ ಆದೇಶ ಜಾರಿಗೆ ತಂದು ಕೂಲಿಯಿಂದ ಬದುಕು ಕಟ್ಟಿಕೊಳ್ಳಲು ಹೊರಟಿರುವ ಮನರೇಗಾ ಕಾರ್ಮಿಕರಿಗೆ ಹಿನ್ನಡೆ ಮಾಡುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮನರೇಗಾ ಕಾನೂನಿನ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಇಲ್ಲದಂತಾಗಿದೆ. ನಿರಂತರ 100 ದಿನಗಳ ಕೆಲಸ ಸಿಗುತ್ತಿಲ್ಲ, ಕೆಲವು ಕಡೆ ಕೆಲಸ ಸಿಕ್ಕರೆ ಮೂರು ತಿಂಗಳಿಂದ ಕೂಲಿ ಪಾವತಿ ಆಗುತ್ತಿಲ್ಲ. ಕೆಲಸಕ್ಕೆ ಹೋದರೆ ತಾಂತ್ರಿಕ ಕಾರಣದಿಂದ ಕೆಲಸ ಮಾಡಲು ಆಗುತ್ತಿಲ್ಲ. ಒಮ್ಮೊಮ್ಮೆ ಕೆಲಸ ಮಾಡಿದರೆ ಹಾಜರಾತಿ ಆ್ಯಪ್‌ ಮೂಲಕ ತೆಗೆದುಕೊಳ್ಳದೆ ಇದ್ದಾಗ ಕೆಲಸ ಮಾಡಿಯೂ ಕೂಲಿ ಸಿಗದೇ ಇರುವಂತಹ ಪರಿಸ್ಥಿತಿ ಇದೆ ಎಂದರು.

ಬೇಡಿಕೆಗಳು:

ಭಾರೀ ಬಿಸಿಲು ಇರುವ ಹಿನ್ನೆಲೆ ಹಾಜರಾತಿ ಆ್ಯಪ್‌ನಲ್ಲಿ ಒಮ್ಮೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಕಳೆದ ಮೂರು ತಿಂಗಳಿಂದ ಕೆಲಸ ಮಾಡಿದ ಕೂಲಿ ಹಣ ಕೂಡಲೇ ಕೂಲಿ ಭತ್ಯೆ ಸಮೇತವಾಗಿ ಬಿಡುಗಡೆ ಮಾಡಬೇಕು, ಈ ತಿಂಗಳಲ್ಲಿ ಜಾಬ್ ಕಾರ್ಡ್ ವಿತರಣೆ ಮಾಡಲು ಇರುವ ತಾಂತ್ರಿಕ ಸಮಸ್ಯೆಗೆ ಪರಿಹಾರ ಕಲ್ಪಿಸಿ ಜಿಪಂ ಮಟ್ಟಕ್ಕೆ ಲಾಗಿನ್ ಮೂಲಕ ಪರಿಹಾರ ಸಿಗುವಂತೆ ಅನುಕೂಲ ಮಾಡಿಕೊಡಬೇಕು. ಮನರೇಗಾ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಮೃತಪಟ್ಟರೆ, ನೀಡುವ ಪರಿಹಾರ ₹2 ಲಕ್ಷ ಇದ್ದು, ಕನಿಷ್ಠ ₹ 5 ಲಕ್ಷ ಸಿಗುವಂತೆ ಕಾನೂನು ಆಗಬೇಕು. ಮನರೇಗಾ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸಿ ಸೌಲಭ್ಯ ಸಿಗುವಂತೆ ಕಾನೂನು ರೂಪಿಸಬೇಕು. ಕೂಸಿನ ಮನೆ ಸರಿಯಾಗಿ ನಡೆಸಬೇಕು ಎಂದು ಒತ್ತಾಯಿಸಿದರು.

ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ವಿಜಯನಗರ ಕೂಲಿ ಕಾರ್ಮಿಕರಾದ ಸಾವಿತ್ರಮ್ಮ, ಹುಲುಗಪ್ಪ, ಮಹಾಬಲೇಶ್, ಈರಮ್ಮ, ಕರಿಬಸಪ್ಪ, ನಾಗರಾಜ, ಬಸಲಿಂಗಮ್ಮ, ದುರುಗಪ್ಪ, ರತ್ನಮ್ಮ, ಮಲ್ಲೇಶ್ ಕೊಗಳಿ, ಶೈನಾಜ್, ಮಂಜುಳಾ, ನಾರಾಯಣ, ಅಕ್ಕಮಹಾದೇವಿ ಮರಬ್ಬಿಹಾಳ್ರ, ಸುಧಾ ಹೊಸಕೆರೆ, ನಿಂಗಮ್ಮ, ಶಬ್ಬೀರ್ ಬಾಷಾ, ಎಲ್ಲಮ್ಮ ಮತ್ತಿತರರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...