ಮಂಜುನಾಥ ಕೆ.ಎಂ.
ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವಕ್ಕೆ ಜನೋತ್ಸಾಹ ಕಂಡು ಬಂದಿದ್ದು, ಸಾವಿರಾರು ಜನರು ಸ್ಮಾರಕಗಳ ನಗರಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಹಂಪಿಗೆ ಪ್ರವಾಸಿಗರು ಸೇರಿದಂತೆ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿ ಉತ್ಸವ ವೀಕ್ಷಣೆಗೆ ಆಗಮಿಸಿದ್ದರು. ಮಧ್ಯಾಹ್ನದವರೆಗೆ ನೀರಸವಾಗಿ ಕಂಡು ಬಂದ ಹಂಪಿ ಪರಿಸರ ಸಂಜೆಯಾಗುತ್ತಿದ್ದಂತೆಯೇ ಜನರಿಂದ ತುಂಬಿಕೊಂಡಿತು.ಎತ್ತುಗಳ ಪ್ರದರ್ಶನ, ವಸ್ತು ಪ್ರದರ್ಶನ, ಮತ್ಸ್ಯಮೇಳ, ಫಲಪುಷ್ಪ ಪ್ರದರ್ಶನದಲ್ಲಿ ಜನಜಂಗುಳಿ ಕಂಡು ಬಂತು. ಆಹಾರ ಮೇಳ ತೋಪೆದ್ದು ಹೋಗಿತ್ತು. ಯಾವುದೇ ತಯಾರಿಯಿಲ್ಲದೇ ನಡೆದ ಆಹಾರ ಮೇಳ ರಸ್ತೆಬದಿಯ ಹೋಟೆಲ್‌ಗಳಿಗೆ ಸೀಮಿತವಾಗಿತ್ತು. ಕಮಲಾಪುರ ಬಳಿ ಜರುಗಿದ ಎತ್ತುಗಳ ಪ್ರದರ್ಶನದಲ್ಲಿ ೨೦೦ ಜೋಡಿ ಎತ್ತುಗಳು ಪ್ರದರ್ಶನಕ್ಕೆ ಬಂದಿದ್ದವು. ಹೊಸಪೇಟೆ ಹಾಗೂ ಹಂಪಿ ಸುತ್ತಮುತ್ತಲಿನ ರೈತರು ಎತ್ತುಗಳ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆಂಧ್ರಪ್ರದೇಶದಿಂದ ಆಗಮಿಸಿದ್ದ ಗಜಗಾತ್ರದ ಎತ್ತುಗಳು ಗಮನ ಸೆಳೆದವು. ಹಳ್ಳಿಕಾರ್ ದೇಸಿ ಎತ್ತುಗಳ ಬಳಿ ನಿಂತು ರೈತರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮಿಶ್ರ ತಳಿಯ ಎತ್ತುಗಳು ಸಹ ಪ್ರದರ್ಶನಕ್ಕೆ ಬಂದಿದ್ದವು.
ಕಮಲಾಪುರದ ಮಯೂರ ಭುವನೇಶ್ವರಿ ಆವರಣದಲ್ಲಿ ಫೆ.೧೨ರಿಂದ ಶುರುಗೊಂಡಿರುವ ಹಂಪಿ ಬೈಸ್ಕೈಗೆ ಹೆಚ್ಚಿನ ಬೇಡಿಕೆಯಿತ್ತು. ಬೆಳಿಗ್ಗೆಯಿಂದ ಆಗಸದಿಂದ ಹಂಪಿ ನೋಡುವ ಕೌತುಕ ಮುಂದುವರಿದಿತ್ತು. ಮಹಿಳೆಯರು, ಮಕ್ಕಳು ಹೆಲಿಕಾಪ್ಟರ್ ಹತ್ತಲು ಉತ್ಸಾಹದಿಂದ ಬೇರೆ ಬೇರೆ ಊರುಗಳಿಂದ ಆಗಮಿಸಿದ್ದರು.
ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಜರುಗಿದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಬಹುಮಾನ ವಿತರಣೆ ಮಾಡಿದರು. ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ವಿಜಯನಗರ ಕಾಲದ ಸಂವಹನ ವ್ಯವಸ್ಥೆ, ಮಹಿಳೆಯರ ಸ್ಥಿತಿಗತಿ ಸೇರಿದಂತೆ ವಿವಿಧ ಸಾಹಿತ್ಯ ಗೋಷ್ಠಿಗಳು ಜರುಗಿದವು. ಬಳಿಕ ಜರುಗಿದ ಕವಿಗೋಷ್ಠಿಯಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ರಾಯಚೂರು, ಗದಗ, ಬೆಂಗಳೂರು, ಹಾವೇರಿ, ನಿಪ್ಪಾಣಿ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ೩೮ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಹೊಸಪೇಟೆಗೆ ಬಂತು ಕಾಂಗ್ರೆಸ್ ದಂಡು:
ಸ್ವಚ್ಛತೆಗೆ ಇರಲಿಲ್ಲ ಆದ್ಯತೆ, ನಿರ್ವಹಣೆ ಕೊರತೆ:
ಹೀಗಾಗಿ ರಸ್ತೆ ಬದಿಯ ಹೋಟೆಲ್‌ಗಳನ್ನು ಜನರು ಆಶ್ರಯಿಸಿದರು. ಉತ್ಸವಕ್ಕೆ ಬರುವವರಿಗೆ ಕುಡಿವ ನೀರು, ಸುಲಭ ಶೌಚಾಲಯದ ಕೊರತೆ ಎದುರಾಯಿತು. ಸ್ವಚ್ಛತೆಗೆ ಜಿಲ್ಲಾಡಳಿತ ಆದ್ಯತೆ ನೀಡಿದಂತೆ ಕಂಡು ಬರಲಿಲ್ಲ. ಶೌಚಾಲಯಗಳು ನಿರ್ವಹಣೆಯಿಲ್ಲದೇ ಗಬ್ಬು ನಾರುತ್ತಿದ್ದವು. ಹೀಗಾಗಿ ಜಲಬಾಧೆ ನೀಗಿಸಿಕೊಳ್ಳಲು ಜನರು ಪರದಾಡುವಂತಾಯಿತು.
ಮುಖ್ಯವೇದಿಕೆಗೆ ವಿಐಪಿ ಪಾಸ್ ಹಿಡಿದು ಆಗಮಿಸಿದ್ದ ರಾಜಕೀಯ ನಾಯಕರು ಹಾಗೂ ಪೊಲೀಸರ ನಡುವೆ ವಾಗ್ವಾದದ ಪ್ರಸಂಗಗಳು ನಿರಂತರವಾಗಿ ನಡೆದವು. ಪಾರ್ಕಿಂಗ್ ಸೇರಿದಂತೆ ಅನೇಕ ಕಡೆ ಪೊಲೀಸರ ಜೊತೆ ಸಾರ್ವಜನಿಕರು ಹಾಗೂ ರಾಜಕಾರಣಿಗಳು ವಾಗ್ವಾದ ನಡೆಸುತ್ತಿರುವ ದೃಶ್ಯ ಕಂಡು ಬಂದವು. ಉತ್ಸವದ ಮುಖ್ಯವೇದಿಕೆಯತ್ತ ಬರುವವರ ಸಂಖ್ಯೆ ಹೆಚ್ಚಾಗಿತ್ತು.