ಹಂಪಿಯಲ್ಲಿ ಪ್ಲಾಸ್ಟಿಕ್‌ ಖಾಲಿ ಬಾಟಲಿಗೆ ಸಿಗಲಿದೆ ₹1

KannadaprabhaNewsNetwork |  
Published : Jul 20, 2026, 01:15 AM IST
ಹಂಪಿಯಲ್ಲಿ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಪಾರ್ಕಿಂಗ್‌ ಪ್ರದೇಶದಲ್ಲಿ ರಿವರ್ಸ್‌ ವೆಂಡಿಂಗ್‌ ಮೆಷಿನ್‌ಗಳನ್ನು ಅಳವಡಿಸಿರುವುದು. | Kannada Prabha

ಸಾರಾಂಶ

ಪ್ರವಾಸಿಗರು ಹಾಗೂ ಸ್ಥಳೀಯರು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳನ್ನು ಈ ಯಂತ್ರದಲ್ಲಿ ಹಾಕಿದರೆ ಸಾಕು ತಕ್ಷಣವೇ ನೀವು ₹1 ಪಡೆಯಬಹುದು.

ಸಿ.ಕೆ. ನಾಗರಾಜ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿಗಳು ಎಸೆಯುವಂತಿಲ್ಲ. ಹಂಪಿಯ ಪ್ರಮುಖ ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್ (ಪುಡಿಗಟ್ಟುವ) ಯಂತ್ರಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳನ್ನು ಈ ಯಂತ್ರದಲ್ಲಿ ಹಾಕಿದರೆ ಸಾಕು ತಕ್ಷಣವೇ ನೀವು ₹1 ಪಡೆಯಬಹುದು.

ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರದೊಳಗೆ ಒಂದು ಪ್ಲಾಸ್ಟಿಕ್‌ ಬಾಟಲಿ ಹಾಕಿದರೆ ಸಾಕು, ನಿಮಗೆ ಒಂದು ರುಪಾಯಿ ನಾಣ್ಯ ನೀಡುತ್ತದೆ. ಇದು ಪ್ರವಾಸಿಗರಲ್ಲಿ ಪರಿಸರ ಕಾಳಜಿ ಉತ್ತೇಜಿಸುವ ಕ್ರಮವಾಗಿದೆ. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಂತಹದೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಹಂಪಿಗೆ ದೇಶ-ವಿದೇಶ ಪ್ರವಾಸಿಗರು, ಸಾವಿರಾರು ಭಕ್ತರು ನಿತ್ಯವೂ ಭೇಟಿ ನೀಡುತ್ತಾರೆ. ಬಹುತೇಕ ಪ್ರವಾಸಿಗರು ತಾವು ತಂದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಡುತ್ತಾರೆ. ಇದರಿಂದ ಹಂಪಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬೀಳುತ್ತಿದೆ. ಸ್ವಚ್ಛತೆ ಕಾರ್ಯ ಕಾರ್ಮಿಕರಿಗೆ ಸವಾಲಿನ ಕೆಲಸವಾಗಿತ್ತು. ಅದರಿಂದ ಸ್ವಚ್ಛ ಹಂಪಿ-ಸುಂದರ ಹಂಪಿ ಎನ್ನುವ ಈ ಅಭಿಯಾನವನ್ನು ಎಎಸ್‌ಐ, ಹಂಪಿ ಪ್ರಾಧಿಕಾರ ಆರಂಭಿಸಿತು. ಪ್ಲಾಸ್ಟಿಕ್‌ ಮುಕ್ತ ಹಂಪಿಯನ್ನಾಗಿ ರೂಪಿಸುವ ಕಾರ್ಯಕ್ಕೆ ಹೈಟೆಕ್‌ ಸ್ಪರ್ಶ ನೀಡಲು ಮುಂದಾಗಿದೆ.

ಪ್ರವಾಸಿಗರು ಹೆಚ್ಚು ಭೇಟಿ ನೀಡುವ ವಿರೂಪಾಕ್ಷೇಶ್ವರ ದೇವಸ್ಥಾನ, ಪಾರ್ಕಿಂಗ್‌ ಪ್ರದೇಶ, ಗೆಜ್ಜಲ ಮಂಪಟ, ರಾಣಿಸ್ನಾನಗೃಹ, ಕಡಲೆಕಾಳು ಗಣೇಶ, ಮಹಾನವಮಿ ದಿಬ್ಬ ಸೇರಿದಂತೆ ಹಂಪಿಯ ಪ್ರಮುಖ 7​-8 ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಪ್ಲಾಸ್ಟಿಕ್ ರಿಸೈಕ್ಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಂಪನಿಯೊಂದು ಈ ಯಂತ್ರಗಳನ್ನು ಅಳವಡಿಸಿದೆ.

ಹಂಪಿಯಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಪ್ರವಾಸಿಗರು ಬಳಸುವ ಪ್ಲಾಸ್ಟಿಕ್‌ ನೀರಿನ ಬಾಟಲಿಗಳು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರಕ್ಕೆ ಮಾರಕವಾಗುತ್ತಿವೆ. ಇದನ್ನು ತಪ್ಪಿಸಲು ರಿವರ್ಸ್‌ ವೆಂಡಿಂಗ್‌ ಯಂತ್ರಗಳನ್ನು ಪಾರ್ಕಿಂಗ್‌ ಪ್ರದೇಶದಲ್ಲಿ ಅಳವಡಿಸಲಾಗುತ್ತಿದೆ. ಇನ್ನು 10-15 ದಿನಗಳಲ್ಲಿ ಈ ಯೋಜನೆ ಅಧಿಕೃತವಾಗಿ ಕಾರ್ಯಾರಂಭವಾಗಲಿದೆ ಎನ್ನುತ್ತಾರೆ ಪುರಾತತ್ವ ಅಧೀಕ್ಷಕರು, ಎಎಸ್‌ಐ ಹಂಪಿ ವೃತ್ತ ಕೆ. ರಾಮಕೃಷ್ಣ ರೆಡ್ಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಂಗ್ಚುಕ್ ಸತ್ಯಾಗ್ರಹ ಬೆಂಬಲಿಸಿ ಪ್ರತಿಭಟನೆ
ಮದ್ಯದ ಕತ್ತಲೆಯಿಂದ ಬದುಕಿನ ಬೆಳಕಿನೆಡೆಗೆ