ಕಿಲಾರದ ಗಣೇಶ ಹೆಗಡೆ ಬರೆಹಗಳು ಇಂದಿಗೂ ಪ್ರಸ್ತುತ: ಕೆ.ವಿ. ಅಕ್ಷರ

KannadaprabhaNewsNetwork |  
Published : Jul 20, 2026, 01:15 AM IST
ಸಿದ್ದಾಪುರದಲ್ಲಿ ದಿ. ಗಣೇಶ ಹೆಗಡೆ ಕಿಲಾರ ಅವರ ಕೃತಿಗಳ ಸಂಪುಟವನ್ನು ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಹಳ್ಳಿಯಲ್ಲಿದ್ದೂ ಹೊರಗಿನ ಜಗತ್ತನ್ನು ಕಾಣುತ್ತ ತನ್ನದೇ ಬದುಕಿನ ದೃಷ್ಟಿಯಿಂದ ಲೋಕದೃಷ್ಟಿ ಹುಡುಕಿದವರು ಕಿಲಾರದ ಗಣೇಶ ಹೆಗಡೆ.

ಮಾನವೀ ನೀತಿ ಮತ್ತು ಇತರ ಕೃತಿಗಳು ಸಮಗ್ರ ಸಂಪುಟ ಬಿಡುಗಡೆ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಹಳ್ಳಿಯಲ್ಲಿದ್ದೂ ಹೊರಗಿನ ಜಗತ್ತನ್ನು ಕಾಣುತ್ತ ತನ್ನದೇ ಬದುಕಿನ ದೃಷ್ಟಿಯಿಂದ ಲೋಕದೃಷ್ಟಿ ಹುಡುಕಿದವರು ಕಿಲಾರದ ಗಣೇಶ ಹೆಗಡೆ. ಕಳೆದ ಶತಮಾನದಲ್ಲಿ ಹಲವು ಕ್ಷೇತ್ರಗಳಲ್ಲಿ ಸ್ವಯಂ ಪ್ರಯೋಗ, ವಿಚಾರದ ಮೂಲಕ ದಾಖಲಿಸಿದ ಅವರ ಬರೆಹಗಳು ಇಂದಿಗೂ ಪ್ರಸ್ತುತವಾಗಿವೆ. ಗಣೇಶ ಹೆಗಡೆ ಕಿಲಾರ ಓರ್ವ ಪ್ರಾತಿನಿಧಿಕ ಚಿಂತಕ ಎಂದು ರಂಗಕರ್ಮಿ ಕೆ.ವಿ. ಅಕ್ಷರ ಹೆಗ್ಗೋಡು ಹೇಳಿದರು.

ಕಿಲಾರ ಬಳಗ ಪಟ್ಟಣದ ಶಂಕರಮಠದಲ್ಲಿ ಆಯೋಜಿಸಿದ ದಿ. ಕಿಲಾರ ಗಣೇಶ ಹೆಗಡೆಯವರ ಮಾನವೀ ನೀತಿ ಮತ್ತು ಇತರ ಕೃತಿಗಳು ಎನ್ನುವ ಸಮಗ್ರ ಸಂಪುಟವನ್ನು ಗಣೇಶ ಹೆಗಡೆಯವರ ಪುತ್ರ ಹೇರಂಭ ಹೆಗಡೆ ಬಿಡುಗಡೆಗೊಳಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಗಣೇಶ ಹೆಗಡೆಯವರ ಕೃತಿಗಳನ್ನು ಓದಿದಾಗ ಅವರಿಗೆ ಜಾಗತಿಕ ಮಟ್ಟದಲ್ಲಿ ಯೋಚಿಸುವ ಮನಸ್ಸಿತ್ತು ಎನ್ನುವುದು ಅರಿವಾಗುತ್ತದೆ. ಅಂದಿನ ಅವರ ಚಿಂತನೆಗೆ ಇಂದಿಗೂ ಮಹತ್ವವಿದೆ. ಅವರ ಚಿಂತನೆಯ ಬಹುಮುಖ್ಯ ಅಂಶ ತನ್ನ ಕಾಲದಲ್ಲಿ ದೊಡ್ಡದು ಎಂದು ತಿಳಿದಿದ್ದ ನಾಗರಿಕತೆ ಮುಂತಾದ ಸಂಗತಿಗಳನ್ನು ಪ್ರಶ್ನೆ ಮಾಡಿದ್ದು. ಅವರು ಬರೆದದ್ದು ವಿದ್ವಾಂಸರಿಗಾಗಿ ಅಲ್ಲ. ಸುತ್ತಲಿನ ಸಮಾಜದ ಜೊತೆಗಿನ ಸಂವಾದಕ್ಕೆ ಬರೆದದ್ದು ಎನ್ನುವುದು ಅಷ್ಟೇ ಮಹತ್ವದ್ದು. ಗತಕಾಲವನ್ನು ವರ್ತಮಾನದ ಜೊತೆ ಸಂಯೋಜಿಸುವ ಕೃತಿ ಇದಾಗಿದ್ದು ಗಣೇಶ ಹೆಗಡೆಯವರ ಆಲೋಚನೆಗಳಿಗೆ ನಾವು ಮುಖಾಮುಖಿಯಾದಾಗ ಕೃತಿಗಳ ಪ್ರಸ್ತುತತೆ ಅರ್ಥವಾಗುತ್ತದೆ ಎಂದರು.

ಸಂಪುಟದ ಕೃತಿಗಳ ಕುರಿತು ಮಾತನಾಡಿದ ವಿಮರ್ಶಕ ವಿಕಾಸ ಹೊಸ್ಮನಿ, ಕಳೆದ ಶತಮಾನದಲ್ಲಿ ಬದುಕಿದ ಗಣೇಶ ಹೆಗಡೆ ಆ ಕಾಲದಲ್ಲೇ ಹಲವು ಪ್ರತಿಕೂಲ ಸ್ಥಿತಿಗಳನ್ನು ಎದುರಿಸಿಯೂ ಹಲವು ಕ್ಷೇತ್ರಗಳಲ್ಲಿ ಕ್ಷೇತ್ರ ಕಾರ್ಯ ನಡೆಸಿ, ಹೊಸ ಆವಿಷ್ಕಾರ, ಆಲೋಚನೆಗಳ ಮೂಲಕ ಸಾಧನೆ ಮಾಡಿದವರು. ಕೃಷಿ, ಅರಣ್ಯ, ಸಾಮಾಜಿಕ ಕ್ಷೇತ್ರಗಳ ಕುರಿತಾಗಿ ಸ್ವಂಯಂ ಚಿಂತನೆ ನಡೆಸಿದ್ದಲ್ಲದೇ, ಮೂಢನಂಬಿಕೆ ವಿರುದ್ಧ ಹೋರಾಡಿದವರು. ವಿಧವಾ ವಿವಾಹದ ಕುರಿತು ವೈಚಾರಿಕ ಅರಿವು ಮೂಡಿಸಿದವರು. ಅವರ ಕೃತಿಗಳು ಇಂದಿನ, ಮುಂದಿನ ತಲೆಮಾರಿಗೆ ಉಪಯುಕ್ತವಾದಂಥದ್ದು ಎಂದರು.

ಪರಿಸರ ಚಿಂತಕ, ಲೇಖಕ ಶಿವಾನಂದ ಕಳವೆ ಮಾತನಾಡಿ, ಗಣೇಶ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ದೊಡ್ಡ ಮರ. ಕೃಷಿ,ಅರಣ್ಯ, ಸಾಮಾಜಿಕ ಕ್ಷೇತ್ರಗಳ ಸಮಸ್ಯೆ, ಅನುಕೂಲಗಳ ಕುರಿತು ಅವರ ಕೃತಿಗಳಲ್ಲಿ ದಾಖಲೆಗಳಿವೆ. ನೂರು ವರ್ಷದ ಹಿಂದಿನ ಹಲವು ಸಂಗತಿಗಳ ಬಗ್ಗೆ ನಿರೂಪಣೆಯಿದೆ ಎಂದರು.

ಹಿರಿಯ ಲೇಖಕಿ ಭಾಗೀರಥಿ ಹೆಗಡೆ, ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಮಾತನಾಡಿದರು.

ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಿದ್ದರು. ಸಂಪುಟದ ಸಂಪಾದಕಿ ಡಾ. ಶಾಲಿನಿ ರಘುನಾಥ ಪ್ರಾಸ್ತಾವಿಕ ಮಾತನಾಡಿದರು. ಸತೀಶ ಹೆಗಡೆ ಕಿಲಾರ ಸ್ವಾಗತಿಸಿದರು. ಆರತಿ ಹೆಗಡೆ ನಿರ್ವಹಿಸಿದರು. ಡಾ. ವಿಜಯ ನಳಿನಿ, ಸಹನಾ ಹೆಗಡೆ, ಶಾಂತಿ ಹೆಗಡೆ, ಕೆ.ಎಸ್. ರಾಜಾರಾಮ, ಕೌಶಿಕ ಕಿಲಾರ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ
ಅನುಮತಿ ಬಳಿಕ ಶರಾವತಿ ಪಂಪ್ಡ್‌ ಸ್ಟೋರೇಜ್‌ ಶುರು : ಡಿಕೆ