ಕೆಪಿಟಿಸಿಎಲ್ ಪರಿಹಾರ ದರ ಹೆಚ್ಚಳಕ್ಕೆ ಒತ್ತಾಯ

KannadaprabhaNewsNetwork |  
Published : Jul 20, 2026, 01:00 AM IST
ಪೋಟೊ19ಕೆಎಸಟಿ10: ಕುಷ್ಟಗಿ ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ರೈತರು ಮಾತನಾಡಿದರು. | Kannada Prabha

ಸಾರಾಂಶ

ವಿದ್ಯುತ್ ಪ್ರಸರಣ ಮಾರ್ಗ ಜಮೀನಿನ ಮೂಲಕ ಹಾದು ಹೋಗುವುದರಿಂದ ಭೂಮಿಯ ಸಂಪೂರ್ಣ ಬಳಕೆಗೆ ನಿರ್ಬಂಧ ಉಂಟಾಗಲಿದ್ದು, ಬೆಳೆಗಳು ಮತ್ತು ಮರಗಳಿಗೆ ನಷ್ಟವಾಗಲಿದೆ

ಕುಷ್ಟಗಿ: ಕೆಪಿಟಿಸಿಎಲ್ 400/220 ಕೆವಿ ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಕುಷ್ಟಗಿ ಸೀಮಾ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ವಿದ್ಯುತ್ ಮಾರ್ಗ ಹಾದು ಹೋಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ನಿಗದಿಪಡಿಸಿರುವ ಪರಿಹಾರ ದರ ಮರುಪರಿಶೀಲಿಸಿ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ನ್ಯಾಯಸಮ್ಮತ ಪರಿಹಾರ ನೀಡುವಂತೆ ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.

ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿದ್ಯುತ್ ಗೋಪುರಗಳಿಗೆ ಪ್ರತಿ ಚದರ ಮೀಟರ್‌ಗೆ ₹ 2,600 ಹಾಗೂ ಮೊಗಸಾಲೆಗೆ ಪ್ರತಿ ಚದರ ಮೀಟರ್‌ಗೆ ₹40ರಂತೆ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಈ ದರ ಜಮೀನಿನ ನೈಜ ಮಾರುಕಟ್ಟೆ ಮೌಲ್ಯಕ್ಕೆ ಹೊಂದಾಣಿಕೆಯಾಗುವುದಿಲ್ಲ ಎಂದು ತಿಳಿಸಿದರು.

ಕುಷ್ಟಗಿ ಸೀಮಾ ವ್ಯಾಪ್ತಿಯಲ್ಲಿ ಜಮೀನಿನ ಮಾರುಕಟ್ಟೆ ಮೌಲ್ಯ ಪ್ರತಿ ಚದರ ಮೀಟರ್‌ಗೆ ಸುಮಾರು ₹6 ಸಾವಿರ ಇದ್ದು, ಸರ್ಕಾರದ ಪರಿಷ್ಕೃತ ಎಸ್.ಆರ್.ಗೈಡ್‌ಲೈನ್ ಮೌಲ್ಯದ ಪ್ರಕಾರ ಅದು ₹12 ಸಾವಿರವಾಗುತ್ತದೆ. ಆದರೂ ಈ ಅಂಶ ಪರಿಗಣಿಸದೆ ಕಡಿಮೆ ಪರಿಹಾರ ನಿಗದಿಪಡಿಸಲಾಗಿದೆ ಎಂದು ಆರೋಪಿಸಿದರು.

ವಿದ್ಯುತ್ ಪ್ರಸರಣ ಮಾರ್ಗ ಜಮೀನಿನ ಮೂಲಕ ಹಾದು ಹೋಗುವುದರಿಂದ ಭೂಮಿಯ ಸಂಪೂರ್ಣ ಬಳಕೆಗೆ ನಿರ್ಬಂಧ ಉಂಟಾಗಲಿದ್ದು, ಬೆಳೆಗಳು ಮತ್ತು ಮರಗಳಿಗೆ ನಷ್ಟವಾಗಲಿದೆ. ಜತೆಗೆ ಭವಿಷ್ಯದಲ್ಲಿ ಜಮೀನಿನ ಮೌಲ್ಯ ಹಾಗೂ ಅಭಿವೃದ್ಧಿ ಸಾಮರ್ಥ್ಯಕ್ಕೂ ಧಕ್ಕೆಯಾಗಲಿದೆ. ಹೀಗಾಗಿ ಜಮೀನಿನ ನೈಜ ಮಾರುಕಟ್ಟೆ ಮೌಲ್ಯ, ಎಸ್.ಆರ್. ಗೈಡ್‌ಲೈನ್ ದರ ಹಾಗೂ ಇತ್ತೀಚಿನ ಮಾರಾಟ ಪತ್ರ ಪರಿಗಣಿಸಿ ಪರಿಹಾರ ಮರು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಈಗಾಗಲೇ ಜೂ.24ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಮತ್ತೊಮ್ಮೆ ಜು. 20ರಂದು ಕುಷ್ಟಗಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ರೈತರು ತಿಳಿಸಿದರು.

ರೈತರು ನಿಗದಿಪಡಿಸಿರುವ ಪರಿಹಾರ ಮರುಪರಿಶೀಲಿಸುವುದು, ಪ್ರಸ್ತುತ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಹೊಸದಾಗಿ ಪರಿಹಾರ ನಿಗದಿಪಡಿಸುವುದು ಹಾಗೂ ಬೆಳೆ, ಮರ ಮತ್ತು ಭವಿಷ್ಯದ ನಷ್ಟಕ್ಕೂ ಪ್ರತ್ಯೇಕ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಹುಲಗಪ್ಪ ಚೂರಿ, ಚನ್ನಪ್ಪ ನಾಲಗಾರ, ಅಜ್ಜಪ್ಪ ಕರಡಕಲ್, ರಾಮಣ್ಣ ಕಲಕಬಂಡಿ, ಶರಣಪ್ಪ ಕಟ್ಟಿಹೊಲ, ಪವಾಡೆಪ್ಪ ಕಲಕಬಂಡಿ, ಗುಂಡಪ್ಪ ಹೊಸೂರು, ರಾಮಣ್ಣ ಹನಮಸಾಗರ, ಬಸಮ್ಮ ಚಟ್ಟೇರ್‌, ವಿನಯಕುಮಾರ, ಪಾರ್ವತೆಮ್ಮ, ಬಾಳಪ್ಪ ಕಟ್ಟಿಹೊಲ, ಸಂಗವ್ವ, ಯಮನಪ್ಪ ಜರಗಡ್ಡಿ, ರಾಜಪ್ಪ ತಳುವಗೇರಾ, ಜಗದೀಶ ಚೂರಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ್ ಜೋಡೋ ಯುವಕರ ಸಂಘ ಕೈಬಿಟ್ಟು ಅಭಿವೃದ್ಧಿಗೆ ಅನುದಾನ ನೀಡಿ
ಬರದ ಭೀತಿಯಲ್ಲಿ ವರುಣ ದೇವನ ಆರಾಧನೆ