ಬರದ ಭೀತಿಯಲ್ಲಿ ವರುಣ ದೇವನ ಆರಾಧನೆ

KannadaprabhaNewsNetwork |  
Published : Jul 20, 2026, 01:00 AM IST
ಪೋಟೊ19ಕೆಎಸಟಿ1:ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಅವಧೂತ ಶುಖಮುನಿ ಸ್ವಾಮಿ ಗದ್ದುಗೆ ಮಠದಲ್ಲಿ ಉತ್ತಮ ಮಳೆಯಾಗಲೆಂದು ನೂರಾರು ಮಹಿಳೆಯರು ಸಾಮೂಹಿಕ ಗಾಯನ ನಡೆಸಿ ವರುಣ ದೇವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಬದುಕಿನಲ್ಲಿ ಮಳೆಯೇ ರೈತನ ಜೀವನಾಡಿ ಎಂಬ ನಂಬಿಕೆಯೊಂದಿಗೆ ಮಹಿಳೆಯರು ಭಕ್ತಿಭಾವದಿಂದ ವರುಣ ದೇವನನ್ನು ಕೊಂಡಾಡುತ್ತಿದ್ದಾರೆ.

ಕುಷ್ಟಗಿ: ಆಷಾಢ ಮಾಸ ಕಳೆಯುತ್ತಾ ಬಂದರೂ ನಿರೀಕ್ಷಿತ ಮಳೆಯಾಗದ ಹಿನ್ನೆಲೆ ರೈತರಲ್ಲಿ ಆತಂಕ ಮನೆಮಾಡಿದೆ. ಬಿತ್ತನೆ ಮಾಡಿದ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಭೀತಿ ಎದುರಾಗಿರುವ ಕಾರಣ,ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಮಳೆಗಾಗಿ ವಿಶಿಷ್ಟ ಧಾರ್ಮಿಕ ಆಚರಣೆ ನಡೆಯುತ್ತಿದೆ.

ಗ್ರಾಮದ ಶ್ರೀಅವಧೂತ ಶುಖಮುನಿ ಸ್ವಾಮಿ ಗದ್ದುಗೆ ಮಠದಲ್ಲಿ ಕಳೆದ ಐದು ದಿನಗಳಿಂದ ಪ್ರತಿದಿನ ರಾತ್ರಿ ನೂರಾರು ಮಹಿಳೆಯರು ಒಂದೆಡೆ ಸೇರಿ ವರುಣ ದೇವನ ಕೃಪೆಗಾಗಿ ಸಾಮೂಹಿಕ ಗಾಯನ ನಡೆಸುತ್ತಿದ್ದಾರೆ. ಸುಮಾರು ನಾಲ್ಕು ತಾಸುಗಳ ಕಾಲ ನಿರಂತರ ಮಳೆರಾಯನನ್ನು ಸ್ತುತಿಸುವ ಜಾನಪದ ಹಾಗೂ ಭಕ್ತಿಗೀತೆ ಹಾಡುತ್ತಾ, ಸಮೃದ್ಧ ಮಳೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಗ್ರಾಮೀಣ ಬದುಕಿನಲ್ಲಿ ಮಳೆಯೇ ರೈತನ ಜೀವನಾಡಿ ಎಂಬ ನಂಬಿಕೆಯೊಂದಿಗೆ ಮಹಿಳೆಯರು ಭಕ್ತಿಭಾವದಿಂದ ವರುಣ ದೇವನನ್ನು ಕೊಂಡಾಡುತ್ತಿದ್ದಾರೆ. ಗಾಯನದ ನಡುವೆ ರೈತರ ಸಂಕಷ್ಟ, ಬೆಳೆಗಳ ಉಳಿವು, ಜಾನುವಾರುಗಳ ರಕ್ಷಣೆ ಹಾಗೂ ಉತ್ತಮ ಮಳೆಯ ಆಶಯ ವ್ಯಕ್ತವಾಗುತ್ತಿದೆ.

ಯುವತಿಯರಿಂದ ಹಿಡಿದು ಹಿರಿಯ ಮಹಿಳೆಯವರೆಗೆ ಎಲ್ಲ ವಯೋಮಾನದವರು ಈ ಗಾಯನದಲ್ಲಿ ಪಾಲ್ಗೊಂಡಿದ್ದು, ದೇವಸ್ಥಾನದ ಆವರಣ ಭಕ್ತಿಮಯ ವಾತಾವರಣದಿಂದ ಕಂಗೊಳಿಸುತ್ತಿದೆ. ಗ್ರಾಮಸ್ಥರೂ ಸಹ ಪ್ರಾರ್ಥನೆಯಲ್ಲಿ ಭಾಗಿಯಾಗಿ ಮಳೆಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲೆಂದು ಕಪ್ಪೆ ಮದುವೆ, ವಿಶೇಷ ಪೂಜೆ, ಹೋಮ-ಹವನಗಳಂತಹ ಆಚರಣೆ ನಡೆಯುವಂತೆ ದೋಟಿಹಾಳದಲ್ಲಿ ಮಹಿಳೆಯರ ಈ ಸಾಮೂಹಿಕ ಗಾಯನವೂ ವಿಶಿಷ್ಟ ಸಂಪ್ರದಾಯವಾಗಿ ಗಮನ ಸೆಳೆಯುತ್ತಿದೆ. ಗ್ರಾಮೀಣ ಸಂಸ್ಕೃತಿ, ಭಕ್ತಿ ಮತ್ತು ಪ್ರಕೃತಿ ಮೇಲಿನ ಅವಲಂಬನೆಯ ಪ್ರತೀಕವಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ.

ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಈ ಪ್ರಾರ್ಥನೆ ಹೊಸ ಭರವಸೆ ಮೂಡಿಸಿದ್ದು, ಶೀಘ್ರವೇ ವರುಣ ದೇವ ಕೃಪೆ ತೋರಿ ಸಮೃದ್ಧ ಮಳೆಯಾಗಲಿ ಎಂಬ ಆಶಯ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ರುದ್ರಮ್ಮ ಮಾಳಗಿ, ಶಾಂತವ್ವ ಸರೂರು, ನಿಂಗಪ್ಪ ಸರೂರು, ಹನಮವ್ವ ಗೌಡರ, ಶಂಕರವ್ವ ಹನುಮಕಟ್ಟಿ, ಹನಮವ್ವ ಚೌರಿ, ರೇಣಮ್ಮ ಸರೂರು, ರತ್ನಮ್ಮ ಗೋತಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ, ಉತ್ತಮ ಮಳೆಯಾಗಿ ಬೆಳೆಗಳು ಉಳಿಯಲಿ, ರೈತರ ಬದುಕು ಹಸನಾಗಲಿ ಎಂಬ ಸಂಕಲ್ಪದಿಂದ ದೋಟಿಹಾಳ ಗ್ರಾಮದ ಶುಕಮುನಿ ಸ್ವಾಮಿ ಗದ್ದುಗೆಯ ಮಠದಲ್ಲಿ ಕಳೆದ ಐದಾರು ದಿನಗಳಿಂದ ಮಹಿಳೆಯರು ಪ್ರತಿದಿನ ಸಾಮೂಹಿಕ ಗಾಯನ ಹಾಗೂ ವಿಶೇಷ ಪ್ರಾರ್ಥನೆ ನಡೆಸುತ್ತಿದ್ದಾರೆ ಎಂದು ಆಯೋಜಕ ಷಣ್ಮುಖಪ್ಪ ಹೊಸಮನಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ್ ಜೋಡೋ ಯುವಕರ ಸಂಘ ಕೈಬಿಟ್ಟು ಅಭಿವೃದ್ಧಿಗೆ ಅನುದಾನ ನೀಡಿ
ಕೆಪಿಟಿಸಿಎಲ್ ಪರಿಹಾರ ದರ ಹೆಚ್ಚಳಕ್ಕೆ ಒತ್ತಾಯ