ಹೊಸಪೇಟೆ: ಹಂಪಿಯಲ್ಲಿ ಫೆ. 2ರಿಂದ ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಂ. ದಿವಾಕರ್ ಅವರು ಮಂಗಳವಾರ ಭೇಟಿ ನೀಡಿ ವೇದಿಕೆ ಸ್ಥಳಗಳನ್ನು ಪರಿಶೀಲಿಸಿದರು.
ಹಂಪಿಯ ಎದುರು ಬಸವಣ್ಣ ಮಂಟಪ, ಗಾಯತ್ರಿ ಪೀಠ ವೇದಿಕೆ, ವಿರೂಪಾಕ್ಷೇಶ್ವರ ದೇವಸ್ಥಾನ, ಸಾಸಿವೆಕಾಳು ಗಣಪತಿ, ಗಜಶಾಲೆ ಪ್ರದೇಶಗಳಿಗೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.ಕಳೆದ ವರ್ಷದಂತೆ ಈ ವರ್ಷವೂ ನಾಲ್ಕು ಕಡೆ ವೇದಿಕೆಗಳನ್ನು ನಿರ್ಮಿಸಲು ಸ್ಥಳ ನಿಗದಿ ಮಾಡಲಾಗಿದೆ. ವಿಜಯನಗರ ಗತಕಾಲದ ವೈಭವ ಸಾರುವ ತುಂಗಭದ್ರಾ ಆರತಿ, ಹಂಪಿ ಬೈನೈಟ್, ಕುಸ್ತಿ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕರಕುಶಲ ವಸ್ತುಗಳ ಪ್ರದರ್ಶನ, ದೇಶಿ ಆಹಾರ, ಫಲಪುಷ್ಪ ಪ್ರದರ್ಶನ, ಶಿಲ್ಪಕಲಾ, ಚಿತ್ರಕಲಾ ಶಿಬಿರ, ಛಾಯಾಚಿತ್ರ ಸ್ಪರ್ಧೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು, ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜನೆಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
ಕಳೆದ ಉತ್ಸವದಲ್ಲಿ ನಡೆದ ಗಾಯತ್ರಿ ಪೀಠ, ಎದುರು ಬಸವಣ್ಣ ಮಂಟಪ, ಮಾಧ್ಯಮ ಗ್ಯಾಲರಿ, ಮೀಡಿಯಾ ಸೆಂಟರ್, ಗ್ರೀನ್ ರೂಮ್, ವಸ್ತು ಪ್ರದರ್ಶನ ಮಳಿಗೆಗಳು, ಪಾರ್ಕಿಂಗ್ ಪ್ರದೇಶ ಹಾಗೂ ವಿರೂಪಾಕ್ಷೇಶ್ವರ ದೇವಾಲಯದ ಆವರಣವನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.ವೈಭವದ ಹಂಪಿ ಉತ್ಸವ ಯಶ್ವಸಿಗೆ ಅಧಿಕಾರಿ ಹಾಗೂ ಸಿಬ್ಬಂದಿ ಶ್ರಮವಹಿಸಬೇಕು. ಯಾವುದೇ ಸಲಹೆ, ಸೂಚನೆಗಳನ್ನು ನೀಡುವ ಜತೆಗೆ ಗೊಂದಲಗಳಿದ್ದರೆ, ಪರಿಹರಿಸಿಕೊಳ್ಳಬೇಕು ಎಂದರು.
ಹಂಪಿಯಲ್ಲಿ ಫೆ. 2ರಿಂದ ಮೂರು ದಿನಗಳವರೆಗೆ ನಡೆಯಲಿರುವ ಹಂಪಿ ಉತ್ಸವದ ನಿಮಿತ್ತವಾಗಿ ಕಮಲಾಪುರ, ಕಡ್ಡಿರಾಂಪುರ ಇತರೆ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಪರಿಶೀಲನೆ ನಡೆಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಗಾಗಿ ಹಂಪಿ ಸುತ್ತಮುತ್ತಲಿನ ಹೊಲ, ಗದ್ದೆಗಳನ್ನು ಪರಿಶೀಲನೆ ನಡೆಸಲಾಗಿದೆ. ಬೆಳೆ ಕಟಾವು ಆದ ಬಳಿಕ ರೈತರೊಂದಿಗೆ ಮಾತನಾಡಲಾಗುವುದು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಜಿ. ಅನುರಾಧ, ಉಪವಿಭಾಗಾಧಿಕಾರಿ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಮ ಶಾ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮತ್ತಿತರರಿದ್ದರು.