ಹಂಪಿ ಉತ್ಸವ ನಾಡ ಹಬ್ಬ ಇದ್ದಂತೆ - ಮನಃಪೂರ್ವಕವಾಗಿ ಕೆಲಸ ನಿರ್ವಹಿಸಬೇಕು: ಸಚಿವ ಜಮೀರ್ ಅಹ್ಮದ್ ಖಾನ್

KannadaprabhaNewsNetwork |  
Published : Feb 27, 2025, 12:33 AM ISTUpdated : Feb 27, 2025, 04:51 AM IST
25ಎಚ್‌ಪಿಟಿ5- ಹೊಸಪೇಟೆಯಲ್ಲಿ ಮಂಗಳವಾರ ಹಂಪಿ ಉತ್ಸವ-2025 ಸಿದ್ಧತೆಗಳ ಕುರಿತು ವಸತಿ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್  ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಮತ್ತಿತರರಿದ್ದರು. | Kannada Prabha

ಸಾರಾಂಶ

ಹಂಪಿ ಉತ್ಸವ ನಾಡ ಹಬ್ಬ ಇದ್ದಂತೆ, ಅಧಿಕಾರಿಗಳು ಮನಃಪೂರ್ವಕವಾಗಿ ತೊಡಗಿಕೊಂಡು ಕೆಲಸ ನಿರ್ವಹಿಸಬೇಕು. ಈ ಬಾರಿ ಬೇಸಿಗೆ ಮುಂಚಿತವಾಗಿ ಆರಂಭವಾಗಿದೆ.

 ಹೊಸಪೇಟೆ : ಹಂಪಿ ಉತ್ಸವ ನಾಡ ಹಬ್ಬ ಇದ್ದಂತೆ, ಅಧಿಕಾರಿಗಳು ಮನಃಪೂರ್ವಕವಾಗಿ ತೊಡಗಿಕೊಂಡು ಕೆಲಸ ನಿರ್ವಹಿಸಬೇಕು. ಈ ಬಾರಿ ಬೇಸಿಗೆ ಮುಂಚಿತವಾಗಿ ಆರಂಭವಾಗಿದೆ. ಪ್ರಧಾನ ವೇದಿಕೆ ಸೇರಿದಂತೆ ಎಲ್ಲಾ ವೇದಿಕೆಗಳ ಬಳಿ ದೂಳು ಬಾರದಂತೆ ಹೆಚ್ಚಿಗೆ ನೀರು ಹಾಯಿಸಬೇಕು. ಜನರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ವಸತಿ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಹಂಪಿ ಉತ್ಸವ-2025 ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಖಾಸಗಿ ವ್ಯಕ್ತಿಗಳ ಸಹಯೋಗದಲ್ಲಿ ಅರವಟಿಗೆ, ಮಜ್ಜಿಗೆ ನೀಡಲು ವ್ಯವಸ್ಥೆ ಮಾಡಬೇಕು. ಕಳೆದ ಬಾರಿಯಂತೆ ಹಂಪಿ ಉತ್ಸವ ಜನೋತ್ಸವವಾಗಿ ಯಶಸ್ವಿಯಾಗಬೇಕು. ಈ ಬಾರಿ ಮಹಾನವಮಿ ದಿಬ್ಬದ ಬಳಿ ಹೊಸದಾಗಿ ವೇದಿಕೆ ನಿರ್ಮಿಸಿ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಕಮಲಾಪುರ ಕೆರೆಯಲ್ಲಿ ಬೋಟಿಂಗ್ ಹಾಗೂ ಕುಸ್ತಿ ನಡೆಯುವ ಸ್ಥಳದಲ್ಲಿ ಬೈಕ್ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ‌ ಎಂದು ತಿಳಿಸಿದರು.

₹15 ಕೋಟಿ ಅನುದಾನಕ್ಕೆ ಬೇಡಿಕೆ:

ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ₹7 ಕೋಟಿ ಈಗಾಗಲೇ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಕಳೆದ ಬಾರಿ ಉತ್ಸವಕ್ಕೆ ₹14 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ 15 ಕೋಟಿ ಅನುದಾನಕ್ಕೆ ಪ್ರಸ್ತಾವನೆ ನೀಡಲಾಗಿದೆ. ಪ್ರಧಾನ ವೇದಿಕೆಗೆ ಹಂಪಿ ಉತ್ಸವದ ರೂವಾರಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಹೆಸರು ಇಡಲಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ವರ್ಷವೂ ನವೆಂಬರ್ ತಿಂಗಳಿನಲ್ಲಿ ಹಂಪಿ ಉತ್ಸವ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಉತ್ಸವಕ್ಕೆ ಎಲ್ಲಾ ಪಕ್ಷದ ನಾಯಕರನ್ನು ಸಹ ಆಹ್ವಾನಿಸಲಾಗಿದೆ. ಉತ್ಸವದಲ್ಲಿ ಯಾವುದೇ ರಾಜಕೀಯ ಬೆರಸುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.‌

ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಹಂಪಿ ಉತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ನಡೆಯಲಿದೆ. ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಜನವರಿಯಿಂದಲೇ ಹಂಪಿ ಉತ್ಸವ ಸಿದ್ದತೆ ಕಾರ್ಯ ಆರಂಭಿಸಲಾಗಿದೆ. ಉತ್ಸವದ ಯಶಸ್ವಿಗಾಗಿ ಸಮಿತಿ ರಚಿಸಲಾಗಿದೆ. ಪ್ರಧಾನ ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹಂಪಿ ಉತ್ಸವ ಉದ್ಘಾಟನೆ ಸಮಾರಂಭಕ್ಕೆ ಸಾರ್ವಜನಿಕರನ್ನು ಕರೆ ತರಲು 300 ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ 40 ಬಸ್‌ಗಳು ಹಂಪಿ ಉತ್ಸವಕ್ಕಾಗಿಯೇ ಕಾರ್ಯಾಚರಣೆ ನಡೆಸಲಿವೆ. 25 ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. 10 ತಾತ್ಕಾಲಿಕ ಆಸ್ಪತ್ರೆ, 9 ಆ್ಯಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ದೂಳು ಬಾರದ ಹಾಗೆ ಐದು ಲಾರಿಗಳ ಮೂಲಕ ನೀರು ಹಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾಹಿತಿ ನೀಡಿದರು.

ಹಂಪಿ ಉತ್ಸವದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಸಿಸಿಟಿವಿ ಅಳವಡಿಸಲಾಗಿದೆ. ಉತ್ಸವದ ಸ್ಥಳದಲ್ಲಿ ಸಹಾಯವಾಣಿ ಸಾರ್ವಜನಿಕ ಉದ್ಘೋಷ ಕೇಂದ್ರ ತೆರೆಯಲಾಗುವುದು. ಉತ್ಸವಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ಸೈನ್ ಬೋರ್ಡ್‌ ಅಳವಡಿಸಲಾಗಿದೆ. ಪಾಸುಗಳನ್ನು ನೀಡಲಾಗುವುದು. ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹಂಪಿಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. 100 ಎಕೆರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಮ್ ಷಾ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಞ, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ್ ಶೃತಿ ಎಂ.ಎಂ. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.---

25ಎಚ್‌ಪಿಟಿ5- ಹೊಸಪೇಟೆಯಲ್ಲಿ ಮಂಗಳವಾರ ಹಂಪಿ ಉತ್ಸವ-2025 ಸಿದ್ಧತೆಗಳ ಕುರಿತು ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ