ಹಾನಗಲ್ ಕುಮಾರೇಶ್ವರರು ಶಿಕ್ಷಣ ನೀಡಿದ ತಪಸ್ವಿ

KannadaprabhaNewsNetwork |  
Published : Sep 13, 2025, 02:05 AM IST
11ುಲು3 | Kannada Prabha

ಸಾರಾಂಶ

ಹಾನಗಲ್ ಕುಮಾರ ಶ್ರೀಗಳ ಜೀವನ ಮತ್ತು ಆದರ್ಶ ಬಗ್ಗೆ ತಿಳಿದುಕೊಳ್ಳುವುದು ಸೌಭಾಗ್ಯವೇ ಸರಿ. ವೀರಶೈವ ಲಿಂಗಾಯತ ಸಮಾಜ ಎಲ್ಲ ವರ್ಗದ ಜನರನ್ನು ಒಳಗೊಂಡು ರಾಜ್ಯದಲ್ಲಿ ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ.

ಗಂಗಾವತಿ:

ಹಾನಗಲ್ ಕುಮಾರೇಶ್ವರರು ಕೇವಲ ಅಧ್ಯಾತ್ಮಕ್ಕೆ ಸೀಮಿತವಾಗದೆ ನಾಡಿನ ಎಲ್ಲ ವರ್ಗದ ಜನಾಂಗಕ್ಕೆ ಶಿಕ್ಷಣ ಕಲ್ಪಿಸಿದ ತಪಸ್ವಿಗಳು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ಆಯೋಜಿಸಿದ್ದ ಹಾನಗಲ್ ಕುಮಾರ ಮಹಾಸ್ವಾಮಿಗಳ 158 ನೇ ಜಯಂತಿ ಮಹೋತ್ಸವ ಹಾಗೂ ಜೀವನ ಆದರ್ಶ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಾನಗಲ್ ಕುಮಾರ ಶ್ರೀಗಳ ಜೀವನ ಮತ್ತು ಆದರ್ಶ ಬಗ್ಗೆ ತಿಳಿದುಕೊಳ್ಳುವುದು ಸೌಭಾಗ್ಯವೇ ಸರಿ. ವೀರಶೈವ ಲಿಂಗಾಯತ ಸಮಾಜ ಎಲ್ಲ ವರ್ಗದ ಜನರನ್ನು ಒಳಗೊಂಡು ರಾಜ್ಯದಲ್ಲಿ ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ. ಎಲ್ಲೆಡೆ ಪುರಾಣ- ಪ್ರವಚನ ಕಾಣಬಹುದು. ಇಂಥ ಸಂಸ್ಕೃತಿ ದೇಶದ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯವಹಿಸಿದ್ದ ಮುಂಡರಗಿಯ ಅನ್ನದಾನೇಶ್ವರ ಸಂಸ್ಥಾನ‌ಮಠದ ನಾಡೋಜ ಅನ್ನದಾನ ಮಹಾ ಶಿವಯೋಗಿಗಳು ಮಾತನಾಡಿ, ಲಿಂಗಾಯತ, ಲಿಂಗವಂತ ಪದಗಳು ವೀರಶೈವದ ಪರ್ಯಾಯ ಪದಗಳೇ ಆಗಿವೆ. ವೀರಶೈವ ಎಂಬ ಪದಕ್ಕೆ ಇರುವ ಶಕ್ತಿ, ಲಿಂಗಾಯತ ಪದಕ್ಕೆ ಇಲ್ಲ ಎಂದರು.

ಗುರುವಿನಿಂದ ಲಿಂಗ ಆಯತ ಮಾಡುಕೊಂಡು, ಲಿಂಗ ಪೂಜೆ ಮಾಡುವವನೇ ಲಿಂಗಾಯತ. ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ತಲ್ಲೀನ ಆಗುವುದು ವೀರಶೈವದ ಭಾಗ. ಇದನ್ನೇ ಬಸವಣ್ಣ ಅವರು ಸಮಾಜಕ್ಕೆ ಹೇಳಿದ್ದಾರೆ. ಬಸವಣ್ಣರಾಗಲಿ, ಶಿವಾಚಾರ್ಯರಾಗಲಿ ವೀರಶೈವ ಧರ್ಮ ಸ್ಥಾಪಿಸಿಲ್ಲ. ಇದು ಪ್ರಾಚೀನ ಧರ್ಮ. ಬಸವಣ್ಣ ಅವರು ಕೂಡ ಆಗಮಗಳ ಅಧ್ಯಯನ ಮಾಡಿದ್ದರು. ಆ ಕಾರಣಕ್ಕಾಗಿಯೇ ಬಸವಣ್ಣ ಅವರು ಲಿಂಗಧಾರಣೆ ಮಾಡುವ ಯಾವುದೇ ವ್ಯಕ್ತಿ ಶಿವ ಸ್ವರೂಪ ಆಗುತ್ತಾನೆ ಎಂದು ಹೇಳಿದ್ದರು ಎಂದರು.

ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅರಳಹಳ್ಳಿಯ ಗವಿಸಿದ್ದಯ್ಯ ತಾತನವರು, ಶಿವಕುಮಾರ ದೇವರು, ಚಂದ್ರಶೇಖರ ದೇವರು ಇದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಚ್. ಗಿರಿಗೌಡ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಸಮಾಜದ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ, ಸೋಮನಾಥ ಮಟ್ಟಣಶೆಟ್ಟಿ, ಮನೋಹರಸ್ವಾಮಿ ಹಿರೇಮಠ, ಅಶೋಕಸ್ವಾಮಿ ಹೇರೂರು, ಎಚ್.ಎಂ. ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ನಂದಿನಿ ಮುದಗಲ್ ಇದ್ದರು. ಶರಣಬಸವ ಗವಾಯಿಗಳು ಪ್ರಾರ್ಥಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಮೆರವಣಿಗೆ:

ಕಾರ್ಯಕ್ರಮ ಪೂರ್ವದಲ್ಲಿ ಕುಮಾರೇಶ್ವರರ ಜಯಂತಿ ಮಹೋತ್ಸವದ ಜ್ಯೋತಿಯನ್ನು ಮಲ್ಲಿಕಾರ್ಜುನ ‌ಮಠಕ್ಕೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ