ಹಾವೇರಿ: ಹಾನಗಲ್ಲ ತಾಲೂಕು ನಾಲ್ಕರ ಕ್ರಾಸ್ ಬಳಿ ಕಳೆದ ಜ. 8ರಂದು ಮಹಿಳೆಯೊಬ್ಬಳ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು 58 ದಿನಗಳಲ್ಲಿ ಪೂರ್ಣಗೊಳಿಸಿರುವ ಪೊಲೀಸರು, 19 ಆರೋಪಿತರ ಮೇಲೆ ಬರೋಬ್ಬರಿ 873 ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪೊಲೀಸರ ಎದುರು ನಡೆದ ಐಡೆಂಟಿಫಿಕೇಶನ್ ಪರೇಡ್‌ನಲ್ಲಿ ಸಂತ್ರಸ್ತೆ ಪ್ರಮುಖ ಏಳು ಆರೋಪಿತರನ್ನು ಗುರುತಿಸಿದ್ದಾರೆ. ಉಳಿದ 12 ಆರೋಪಿತರಲ್ಲಿ ಕೆಲವರನ್ನು ಗುರುತಿಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಕೆಲವರ ಸಾಕ್ಷ್ಯಗಳು ದೊರೆತಿವೆ. 20 ದಿನಗಳ ಹಿಂದೆಯೇ ತನಿಖೆ ಪೂರ್ಣಗೊಂಡಿತ್ತಾದರೂ ವಿಧಿವಿಜ್ಞಾನ ಪ್ರಯೋಗಾಲಯದ ಹಾಗೂ ಡಿಎನ್‌ಎ ವರದಿಗಾಗಿ ಕಾಯುತ್ತಿದ್ದ ಪೊಲೀಸರು, ವರದಿ ಕೈಗೆ ಸಿಕ್ಕ ಕೂಡಲೇ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 86 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಲಾಡ್ಜ್‌ನ ಸಿಬ್ಬಂದಿ, ರಕ್ತದ ಮಾದರಿ, ತನಿಖೆ ವೇಳೆ ಸಿಕ್ಕ ಬಟ್ಟೆಗಳ ಮಾದರಿ, ಸಂತ್ರಸ್ತೆ ಹಾಗೂ ಆರೋಪಿತರ ಕೂದಲು ಮಾದರಿಯ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು, ಮತ್ತಿತರ ಅಂಶಗಳು ಸಾಕ್ಷಿಗಳಾಗಿವೆ. ಡಿಎನ್‌ಎ ಪರೀಕ್ಷೆಯನ್ನೂ ಮಾಡಿಸಿದ್ದು, ಅತ್ಯಾಚಾರ ನಡೆದಿರುವುದು ವರದಿಯಲ್ಲಿ ಖಚಿತವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.ಪ್ರಕರಣದ ಹಿನ್ನೆಲೆ:
ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನ ಈಡಿಗಾಸ್ ಲಾಡ್ಜ್‌ನಲ್ಲಿ ಜ. 8ರಂದು ಮಹಿಳೆಯೊಬ್ಬರು ಪುರುಷರೊಬ್ಬರೊಂದಿಗೆ ರೂಮ್‌ನಲ್ಲಿದ್ದಾಗ ಯುವಕರ ಗುಂಪೊಂದು ದಾಳಿ ನಡೆಸಿ ಇಬ್ಬರ ಮೇಲೆಯೂ ಹಲ್ಲೆ ನಡೆಸಿತ್ತು. ರೂಮ್‌ನಿಂದ ಹೊರಗೆ ಎಳೆತಂದು ಮತ್ತೆ ಹಲ್ಲೆಗೈದು ಜೀವಬೆದರಿಕೆ ಹಾಕಿದ್ದರು. ಪುರುಷನನ್ನು ಅಪಹರಿಸಿ ಆತನನ್ನು ಕೊಲ್ಲಲು ಯತ್ನಿಸಿ ನಂತರ ಬಸ್ ನಿಲ್ದಾಣದ ಬಳಿ ಬಿಟ್ಟಿದ್ದರು. ಆರಂಭದಲ್ಲಿ ಕೇವಲ ನೈತಿಕ ಪೊಲೀಸ್‌ಗಿರಿ ಎಂದು ಹೇಳಲಾಗಿತ್ತಾದರೂ ಬಳಿಕ ಸಂತ್ರಸ್ತ ಮಹಿಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ ಮೇಲೆ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿತ್ತು.ಮಹಿಳೆಯನ್ನು ಬಾಳೂರ ಕೆರೆ ಸಮೀಪ ಕಚ್ಚಾ ರಸ್ತೆಯಲ್ಲಿ ಕರೆದೊಯ್ದು ಹಲ್ಲೆ ಮಾಡಿದ್ದರು. ನಂತರ ಮಾವಕೊಪ್ಪ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಏಳು ಜನರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿ ಪೈಶಾಚಿಕ ಕೃತ್ಯ ಮೆರೆದಿದ್ದರು. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪದ ಆರೋಪದಲ್ಲಿ ಹಾನಗಲ್ಲ ಇನ್‌ಸ್ಪೆಕ್ಟರ್ ಹಾಗೂ ಪೇದೆಯೊಬ್ಬರನ್ನು ಎಸ್ಪಿ ಅಂಶುಕುಮಾರ್ ಅಮಾನತುಗೊಳಿಸಿದ್ದರು. ಪ್ರಕರಣ ಮುಚ್ಚಿಹಾಕಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯ ರಾಜ್ಯ ನಾಯಕರು ಪ್ರತಿಭಟನೆ ನಡೆಸಿದ್ದರು. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗ್ಯಾಂಗ್‌ರೇಪ್ ಪ್ರಕರಣದ ಸಮಗ್ರ ತನಿಖೆ ನಡೆಸಿ 19 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ತನಿಖೆ ವೇಳೆ ದೊರೆತ ಎಲ್ಲ ಸಾಕ್ಯಾಧಾರಗಳನ್ನು ಅದರಲ್ಲಿ ಹೇಳಲಾಗಿದೆ ಎಂದು ಹಾವೇರಿ ಎಸ್ಪಿ ಅಂಶುಕುಮಾರ್ ಹೇಳಿದ್ದಾರೆ.