ಹಾನಗಲ್ಲನಲ್ಲಿ ಲಿಂ. ಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಗೆ ಚಾಲನೆ

KannadaprabhaNewsNetwork | Published : Feb 19, 2025 12:46 AM

ಸಾರಾಂಶ

ವೀರಶೈವ ಮಹಾಸಭೆ ಸ್ಥಾಪನೆ ಮಾಡುವ ಮೂಲಕ ಸಮಾಜದಲ್ಲಿ ಧಾರ್ಮಿಕ ಕ್ರಾಂತಿಯನ್ನು ಮಾಡಿದ ಲಿಂ. ಕುಮಾರೇಶ್ವರರ ಆರಾಧನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಹಾನಗಲ್ಲ: ವೀರಶೈವ ಲಿಂಗಾಯತ ಸಮಾಜಕ್ಕೆ ಷಟಸ್ಥಲಗಳು ಅಷ್ಟಾವರಣಗಳು, ಪಂಚಾಚಾರಗಳು ಧರ್ಮ ಪದ್ಧತಿಗಳಾಗಿವೆ. ಷಟಸ್ಥಲ ಧ್ವಜಾರೋಹಣದ ಮೂಲಕ ಲಿಂ. ಕುಮಾರ ಶಿವಯೋಗಿಗಳ ಆರಾಧನೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದು ಅಕ್ಕಿಆಲೂರಿನ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಮಂಗಳವಾರ ಪಟ್ಟಣದ ವಿರಕ್ತಮಠದ ಆವರಣದಲ್ಲಿ ಲಿಂ. ಕುಮಾರ ಶಿವಯೋಗಿಗಳ ೯೫ನೇ ಪುಣ್ಯ ಸ್ಮರಣೋತ್ಸವದ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಈ ಸಮಾಜಕ್ಕೆ ಧಾರ್ಮಿಕ ದಿಕ್ಕನ್ನು ತೋರಿದ ಮಹಾಪುರುಷ ಕುಮಾರ ಶಿವಯೋಗಿಗಳ ಪುಣ್ಯ ಭೂಮಿಯಲ್ಲಿ ಜನಿಸಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ವೀರಶೈವ ಮಹಾಸಭೆ ಸ್ಥಾಪನೆ ಮಾಡುವ ಮೂಲಕ ಸಮಾಜದಲ್ಲಿ ಧಾರ್ಮಿಕ ಕ್ರಾಂತಿಯನ್ನು ಮಾಡಿದವರು. ಲಿಂ. ಕುಮಾರೇಶ್ವರರ ಆರಾಧನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಸ್ವಾಮಿಗಳು, ಬಿಜಕಲ್ ಶಿವಲಿಂಗ ಸ್ವಾಮಿಗಳು, ಬಾಳೂರಿನ ಕುಮಾರ ಸ್ವಾಮಿಗಳು, ಗಣ್ಯರಾದ ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ, ಚನ್ನವೀರಸ್ವಾಮಿ ಹಿರೇಮಠ, ದಾನಪ್ಪ ಸಿಂಧೂರ, ಶಿವಯೋಗಿ ಸವದತ್ತಿ, ಶಿವಯೋಗಿ ಅರಳೇಲಿಮಠ, ಎನ್. ಸದಾಶಿವಪ್ಪ, ಬಸವರಾಜ ಯಲಿ, ಸಿ.ಎಸ್. ವಸ್ತ್ರದ, ಮಹೇಶ ಕಬ್ಬೂರ, ವೀರೇಶ ಹುಗ್ಗಿ ಇತರರು ಪಾಲ್ಗೊಂಡಿದ್ದರು. ಶಾಸಕರಿಂದ ಪರಿಹಾರ ಚೆಕ್‌ ವಿತರಣೆ

ಬ್ಯಾಡಗಿ: ದುರ್ಘಟನೆಗಳು ಯಾರನ್ನೂ ಎಂದಿಗೂ ಹೇಳಿಕೇಳಿ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಕುಟುಂಬಗಳಿಗೆ ಸರ್ಕಾರ ಅಗತ್ಯವಿರುವ ಆರ್ಥಿಕ ನೆರವು ನೀಡಲಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಬ್ಯಾಡಗಿ ಮತಕ್ಷೇತ್ರದ ಕೂನಬೇವು ಗ್ರಾಮದಲ್ಲಿ ವಿದ್ಯುತ್ ಅವಘಡದಲ್ಲಿ ಗಾಯಗೊಂಡಿದ್ದ ಮಾಲತೇಶ ಗುಡ್ಡಪ್ಪ ಹಲವಾಗಲು ಅವರಿಗೆ ಹೆಸ್ಕಾಂ ವತಿಯಿಂದ ನೀಡಿದ ₹2.50 ಲಕ್ಷ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.

ಆಕಸ್ಮಿಕ ಅವಘಡಗಳು ನಮ್ಮನ್ನು ಬೆಂಬಿಡದೇ ಬೆನ್ನುಹತ್ತಿವೆ ಎಂದರೂ ತಪ್ಪಿಲ್ಲ. ನಿತ್ಯವೂ ಒಂದಿಲ್ಲೊಂದು ಕಡೆ ಇಂತಹ ದೃಶ್ಯಗಳನ್ನು ನೋಡುತ್ತಿದ್ದೇವೆ. ಅದರಲ್ಲೂ ರೈತರು, ಕುರಿಗಾರರು, ದನಗಾಹಿಗಳು ಸೇರಿದಂತೆ ಕೂಲಿ ಕಾರ್ಮಿಕರು ಅನಿವಾರ್ಯವಾಗಿ ಇಂತಹ ಅವಘಡಗಳನ್ನು ಎದುರಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಫಿರೋಜ್‌ಶಾ ಸೋಮನಕಟ್ಟಿ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಕೂನಬೇವು ಗ್ರಾಪಂ ಉಪಾಧ್ಯಕ್ಷ ಮೈಲಾರೆಪ್ಪ ಮಾಳಗುಡ್ಡಪ್ಪನವರ, ಮುಖಂಡರಾದ ಬೀರಣ್ಣ ಬಣಕಾರ, ನಾಗರಾಜ ಆನವೇರಿ, ಮಲ್ಲಪ್ಪ ದೇಸಾಯಿ, ಡಿ.ಎಚ್. ಬುಡ್ಡನಗೌಡ್ರ, ಶಿವಪುತ್ರಪ್ಪ ಅಗಡಿ, ಶಿವಕುಮಾರ ಪಾಟೀಲ, ದುರ್ಗೇಶ ಗೋಣೆಮ್ಮನವರ, ಮುನ್ನಾ ಎರೆಶೀಮಿ, ಸುರೇಶ ಪೂಜಾರ ಸೇರಿದಂತೆ ಇತರರಿದ್ದರು.

Share this article