ಕಾರ್ಮಿಕರ ಮತಗಳತ್ತ ಕೈ-ಕಮಲ ಪಕ್ಷಗಳ ಚಿತ್ತ

KannadaprabhaNewsNetwork | Updated : Nov 04 2024, 12:19 AM IST

ಸಾರಾಂಶ

ಜಿಂದಾಲ್ ಕಾರ್ಖಾನೆಯಲ್ಲಿ ಸುಮಾರು 25 ಸಾವಿರ ಕಾರ್ಮಿಕರ ಮತಗಳಿವೆ.

ವಿಶೇಷ ವರದಿ

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗೆ ಪ್ರಮುಖ ಪಾತ್ರ ವಹಿಸುವ ಕಾರ್ಮಿಕರ ಮತಗಳ ಕಡೆ ಎರಡು ರಾಷ್ಟ್ರೀಯ ಪಕ್ಷಗಳ ಗಮನ ನೆಟ್ಟಿದೆ.

ಜಿಂದಾಲ್ ಕಾರ್ಖಾನೆಯಲ್ಲಿ ಸುಮಾರು 25 ಸಾವಿರ ಕಾರ್ಮಿಕರ ಮತಗಳಿದ್ದು, ಈ ಮತಗಳು ಯಾವ ಪಕ್ಷದ ಕಡೆ ವಾಲುತ್ತವೆಯೋ ಆ ಪಕ್ಷಕ್ಕೆ ಗೆಲುವಿನ ದಾರಿ ಸಲೀಸು ಎಂಬ ಮಾತು ಚಾಲ್ತಿಯಲ್ಲಿದೆ. ಪ್ರತಿ ಚುನಾವಣೆಯಲ್ಲಿ ಜಿಂದಾಲ್‌ನಲ್ಲಿ ಐದು ಮತಕೇಂದ್ರಗಳನ್ನು ತೆರೆಯಲಾಗುತ್ತಿದೆ. ಹೊರ ರಾಜ್ಯಗಳ ಸುಮಾರು 3 ಸಾವಿರ ಕಾರ್ಮಿಕರ ಮತಗಳಿವೆ. ಕೈಗಾರಿಕೆಯಲ್ಲಿ ವಿವಿಧ ಸ್ತರಗಳಲ್ಲಿ ದುಡಿಯುತ್ತಿರುವ ವಡ್ಡು, ಬಸಾಪುರ, ತೋರಣಗಲ್, ಅಂತಾಪುರ, ಬನ್ನಿಹಟ್ಟಿ ಸೇರಿದಂತೆ 15ಕ್ಕೂ ಹೆಚ್ಚು ಹಳ್ಳಿಗಳ ಕಾರ್ಮಿಕರ ಮತಗಳು ಉಪ ಚುನಾವಣೆಯ ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧರಿಸಲಿದೆ. ದುಡಿಯುವ ಜನರ ಮತಗಳನ್ನು ಹಿಡಿದಿಟ್ಟಕೊಳ್ಳಲು ಎರಡು ಪಕ್ಷಗಳು ನಾನಾ ತಂತ್ರಗಳನ್ನು ರೂಪಿಸುತ್ತಿವೆ.

ಲಾಡ್ ಬಿಗಿ ಹಿಡಿತ:

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಸಂತೋಷ್‌ ಲಾಡ್ ಬಿಗಿ ಹಿಡಿತ ಮುಂದುವರಿದಿದೆ. ಇಡೀ ಕ್ಷೇತ್ರದ ಹಳ್ಳಿಗಳು, ಆಯಾ ಗ್ರಾಮದ ಮುಖಂಡರು, ಜಿಂದಾಲ್ ಸುತ್ತಮುತ್ತ ಪ್ರದೇಶದಲ್ಲಿರುವ ಕಾರ್ಮಿಕರ ಕುಟುಂಬಗಳ ಜತೆ ಸಚಿವ ಸಂತೋಷ್‌ ಲಾಡ್ ನಿರಂತರ ಸಂಪರ್ಕದಲ್ಲಿದ್ದಾರೆ. ಆಯಾ ಗ್ರಾಮಗಳ ಕಷ್ಟ-ಸುಖಗಳಿಗೆ ಲಾಡ್ ಸ್ಪಂದಿಸುತ್ತಲೇ ಬಂದಿರುವುದರಿಂದ ಕಾರ್ಮಿಕರ ಬಹುತೇಕ ಮತಗಳು ಕಾಂಗ್ರೆಸ್ ಪಾಲಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂಬ ವಿಶ್ಲೇಷಣೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ಏತನ್ಮಧ್ಯೆ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಈ.ತುಕಾರಾಂ ಕ್ಷೇತ್ರದ ಜನರೊಂದಿಗೆ ನಿರಂತರ ಒಡನಾಟ ಇದ್ದು, ಜಿಂದಾಲ್ ಕಾರ್ಮಿಕರ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಬಂದಿದ್ದಾರೆ. ಕಾರ್ಮಿಕರ ಮತಗಳು ಕೈ ಪಕ್ಷ ಬಿಟ್ಟು ಕದಲುವುದಿಲ್ಲ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿದೆ.

ಮತ ಬ್ಯಾಂಕ್ ಲೆಕ್ಕಾಚಾರ:

ಸಂಡೂರು ಉಪ ಚುನಾವಣೆಯ ಕದನ ಬಿರುಸುಗೊಂಡಿರುವ ನಡುವೆ ಜಾತಿವಾರು ಲೆಕ್ಕಾಚಾರ ಜೋರಾಗಿದೆ. ಯಾವ ಸಮುದಾಯದ ಮತಗಳು ಕೈ-ಕಮಲ ಅಭ್ಯರ್ಥಿಗಳ ಗೆಲುವಿನ ಹಾದಿ ಸುಗಮಗೊಳಿಸುತ್ತವೆ ಎಂಬ ಲೆಕ್ಕಾಚಾರಕ್ಕೆ ಕ್ಷೇತ್ರದ ಜನರು ಮೊರೆ ಹೋಗಿದ್ದಾರೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಭಾಗಶಃ ಮತಗಳು ಕಾಂಗ್ರೆಸ್‌ ನತ್ತ ವಾಲಿದರೆ, ಉಳಿದ ಸಮುದಾಯಗಳ ಮತಗಳ ಅರ್ಧದಷ್ಟು ಕೈ ಪಕ್ಷ ದಕ್ಕಿಸಿಕೊಂಡರೆ ಗೆಲುವು ಸಲೀಸು ಎಂಬ ಮಾತಿದೆ.

ಆದರೆ, ಕಮಲ ಪಕ್ಷದ ಲೆಕ್ಕಾಚಾರವೇ ಬೇರೆಯಾಗಿದೆ. ಈ ಬಾರಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮತಗಳೇ ಕೈ ಪಕ್ಷಕ್ಕೆ ಮುಳುಗಾಗಲಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶೋಷಿತ ಸಮುದಾಯಗಳ ಹಿತ ಕಾಯುವ ಯೋಜನೆಗಳು ಜಾರಿಯಾಗುತ್ತವೆ ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ, ವಾಲ್ಮೀಕಿ, ಮುಡಾ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ಭಾರೀ ಭ್ರಷ್ಟಾಚಾರ, ರಾಜ್ಯದ ಅಭಿವೃದ್ಧಿ ಕುಂಠಿತ, ನಾಲ್ಕು ಬಾರಿ ಶಾಸಕರಾಗಿದ್ದೂ ತುಕಾರಾಂ ಸಂಡೂರು ಅಭಿವೃದ್ಧಿಗೆ ಹೆಚ್ಚಿನ ಆಸ್ಥೆ ವಹಿಸಿಲ್ಲ. ಒಳ ಮೀಸಲಾತಿ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈ ಎಲ್ಲ ಸಂಗತಿಗಳನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್ ಹಾಗೂ ತುಕಾರಾಂ ಆಡಳಿತದಿಂದ ಜನರು ರೋಸಿ ಹೋಗಿದ್ದು, ಈ ಬಾರಿ ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಲಿದೆ ಎಂಬ ವಿಶ್ವಾಸ ಕಮಲ ಪಕ್ಷದ ನಾಯಕರಲ್ಲಿದೆ.

Share this article