ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಮಣ್ಣಪಳ್ಳ ಕೆರೆಯ ಅಸಮರ್ಪಕ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದು, ಖಾಸಗಿ ವ್ಯಕ್ತಿಗಳ ಮೂಲಕ ಜಿಲ್ಲಾಡಳಿತ ಮಣ್ಣಪಳ್ಳ ಕೆರೆಯನ್ನು ನಿರ್ವಹಣೆಗೆ ನೀಡಲು ಮುಂದಾಗಿರುವ ಬಗ್ಗೆ ವಿರೋಧ ವ್ಯಕ್ತವಾಗಿದೆ. ಹಿನ್ನೆಲೆಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಮಣ್ಣಪಳ್ಳ ಕೆರೆಯ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆ ನಡೆಸಲು ನಗರಸಭೆಗೆ ತಕ್ಷಣ ಹಸ್ತಾಂತರಿಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಜಿಲ್ಲಾಧಿಕಾರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.ಮಣ್ಣಪಳ್ಳ ಸುಮಾರು 120 ಎಕ್ರೆ ವಿಸ್ತೀರ್ಣ ಹೊಂದಿರುವ ನಗರ ಭಾಗದ ಅತೀದೊಡ್ಡ ಕೆರೆಯಾಗಿದ್ದು, ಪ್ರವಾಸೋದ್ಯಮ ಚಟುವಟಿಕೆ, ಉದ್ಯಾನವನ, ವಾಕಿಂಗ್, ಸಾಂಸ್ಕೃತಿಕ ಚಟುವಟಿಕೆ ನಡೆಸಲು ವಿಫುಲ ಅವಕಾಶವಿದ್ದು ಸೂಕ್ತ ನಿರ್ವಹಣೆಯ ಕೊರತೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ.ಉಡುಪಿ ನಗರಸಭೆ ವತಿಯಿಂದ ಮಣ್ಣಪಳ್ಳ ಕೆರೆಯನ್ನು ಸಮಗ್ರ ಅಭಿವೃದ್ಧಿ, ಸಾಹಸ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಯಲು ರಂಗ ಮಂದಿರ, ಜಲ ವಿಹಾರ ಚಟುವಟಿಕೆ, ಕೆರೆಯ ಹೂಳು ತೆರವು ಮಾಡಿ ನೀರಿನ ಸಂಗ್ರಹ ಹೆಚ್ಚಳ, ಸುಸಜ್ಜಿತ ವಾಕಿಂಗ್ ಟ್ರ್ಯಾಕ್, ಸೈಕ್ಲಿಂಗ್ ಟ್ರ್ಯಾಕ್, ಸಿಸಿ ಕ್ಯಾಮರ ಅಳವಡಿಕೆ, ಶೌಚಾಲಯ, ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಬೇಸಿಗೆ ಸಂದರ್ಭದಲ್ಲಿಯೂ ಕೆರೆಯಲ್ಲಿ ನೀರು ಕಲ್ಪಿಸುವ ನಿಟ್ಟಿನಲ್ಲಿ ಶೀಂಬ್ರ ನದಿಯಿಂದ ಪೈಪ್ ಲೈನ್ ಮೂಲಕ ಕೆರೆಗೆ ನೀರು ತುಂಬಿಸಿ ಪರಿಸರದ ಅಂತರ್ಜಲ ವೃದ್ಧಿಸುವ ಕಾಮಗಾರಿಗಳ ಬಗ್ಗೆ ಮಾಸ್ಟರ್ ಪ್ಲಾನ್ ತಯಾರಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದ ಮೂಲಕ ನಡೆಸಲು ಪ್ರಸ್ತಾವನೆ ಸಲ್ಲಿಸಲು ನಗರಸಭೆಯಿಂದ ಯೋಜನೆ ರೂಪಿಸಲಾಗಿದೆ.ಮಣ್ಣಪಳ್ಳ ಕೆರೆಯನ್ನು ಅತ್ಯಂತ ಸುವ್ಯವಸ್ಥಿತವಾಗಿ ಅಭಿವೃದ್ಧಿ ಗೊಳಿಸಿ ನಿರ್ವಹಣೆ ಮಾಡಲು ನಗರಸಭೆ ಬದ್ಧವಿದ್ದು,ಈಗಾಗಲೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಣ್ಣಪಳ್ಳ ಕೆರೆಯನ್ನು ನಗರಸಭೆಗೆ ಹಸ್ತಾಂತರ ಪಡೆಯಲು ನಿರ್ಣಯಿಸಲಾಗಿದೆ ಮತ್ತು ಈ ಬಗ್ಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆಯನ್ನು ಕೂಡಾ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.ಈ ನಡುವೆ ಮಣ್ಣಪಳ್ಳ ಕೆರೆಯನ್ನು ಖಾಸಗಿ ವ್ಯಕ್ತಿಗಳ ಸಹಯೋಗದಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಖಾಸಗಿ ವ್ಯಕ್ತಿಗಳಿಗೆ ನೀಡಲು ಉದ್ದೇಶಿಸಿರುವ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಮಣ್ಣಪಳ್ಳ ಕೆರೆ ಉಳಿಸಿ ಹೋರಾಟ ಸಮಿತಿಯ ಮೂಲಕ ಉಗ್ರ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.ಆದ್ದರಿಂದ ಜಿಲ್ಲಾಡಳಿತ ತಕ್ಷಣ ಮಣ್ಣಪಳ್ಳ ಕೆರೆಯನ್ನು ಖಾಸಗಿಯವರಿಗೆ ನೀಡುವ ಪ್ರಸ್ತಾಪವನ್ನು ಕೈಬಿಟ್ಟು, ಉಡುಪಿ ನಗರಸಭೆಗೆ ಹಸ್ತಾಂತರ ಮಾಡುವಂತೆ ಜನತೆಯ ಪರವಾಗಿ ಅಗ್ರಹಿಸಿರುವುದಾಗಿ ಯಸ್ಪಾಲ್ ತಿಳಿಸಿದ್ದಾರೆ.