ಜೆಜೆಎಂ ಯೋಜನೆಯಡಿ ನೀರು ಬಂದರೆ ಮಾತ್ರ ಹಸ್ತಾಂತರ ಮಾಡಿಕೊಳ್ಳಿ: ಶಾಸಕ ಪ್ರಕಾಶ ಕೋಳಿವಾಡ

KannadaprabhaNewsNetwork |  
Published : Apr 30, 2025, 12:30 AM IST
ರಾಣಿಬೆನ್ನೂರಿನ ತಾಪಂ ಸಭಾಭವನದಲ್ಲಿ ಶಾಸಕ ಕೆ.ಬಿ. ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಯೊಬ್ಬರು ಸಭೆಗೆ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಕಾಮಗಾರಿ ಮುಗಿದ ನಂತರ ನಲ್ಲಿಯಲ್ಲಿ ನೀರು ಬರುತ್ತಿಲ್ಲ ಎನ್ನುವ ದೂರು ಕೇಳಿಬಂದಿವೆ. ಹೀಗಾಗಿ ಆಯಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಪಿಡಿಒಗಳು ನಲ್ಲಿಯಲ್ಲಿ ನೀರು ಬರುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಹಸ್ತಾಂತರ ಮಾಡಿಕೊಳ್ಳಬೇಕು.

ರಾಣಿಬೆನ್ನೂರು: ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡೆದಿರುವ ಜೆಜೆಎಂ ಯೋಜನೆಯಲ್ಲಿ ನೀರು ಬರುತ್ತಿಲ್ಲ ಎನ್ನುವ ಆರೋಪಗಳಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ಎಂದು ಶಾಸಕ ಪ್ರಕಾಶ ಕೋಳಿವಾಡ ಸೂಚಿಸಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾಮಗಾರಿ ಮುಗಿದ ನಂತರ ನಲ್ಲಿಯಲ್ಲಿ ನೀರು ಬರುತ್ತಿಲ್ಲ ಎನ್ನುವ ದೂರು ಕೇಳಿಬಂದಿವೆ. ಹೀಗಾಗಿ ಆಯಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಪಿಡಿಒಗಳು ನಲ್ಲಿಯಲ್ಲಿ ನೀರು ಬರುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಹಸ್ತಾಂತರ ಮಾಡಿಕೊಳ್ಳಬೇಕು. ಕಾಮಗಾರಿಯ ಬಗ್ಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.ಕೆಡಿಪಿ ಸದಸ್ಯ ಹನುಮಂತಪ್ಪ ಬ್ಯಾಲದಹಳ್ಳಿ ಮಾತನಾಡಿ, ಹಾವು ಕಡಿತ ಸೇರಿದಂತೆ ಅನಿರೀಕ್ಷತ ಪ್ರಕರಣದಲ್ಲಿ ಸಾವಿಗೀಡಾಗಿದವರಿಗೆ ಪರಿಹಾರ ಬಂದಿರುವ ಕುರಿತು ಅಧಿಕಾರಿಗಳಲ್ಲಿ ಮಾಹಿತಿಯಿಲ್ಲ. ಸರ್ಕಾರದಿಂದ ಪರಿಹಾರ ಬಂದಿರುವ ಬಗ್ಗೆ ನಮಗೆ ತಿಳಿಸಿದರೆ ನಾವು ಫಲಾನುಭವಿಗಳಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದರು. ಆಗ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರು, ಇಂತಹ ಪ್ರಕರಣಗಳಿಗೆ ಸರ್ಕಾರದಿಂದ ನೇರವಾಗಿ ಫಲಾನುಭವಿಗಳ ಖಾತೆ ಪರಿಹಾರದ ಹಣ ಜಮಾ ಆಗುತ್ತದೆ. ನಾವು ಘಟನೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ. ಪರಿಹಾರ ಜಮಾ ಆಗಿರುವ ಬಗ್ಗೆ ನಮಗೆ ಗೊತ್ತಾಗುವುದಿಲ್ಲ ಎಂದರು.ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಜಾಗವಿದ್ದು, ಅಲ್ಲಿ ಕುಡಿಯುವ ನೀರಿಗಾಗಿ ಒವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಬಹುದು. ಮೆಡ್ಲೇರಿ ಗ್ರಾಮದಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಜಾಗವಿದ್ದು, ಈಗಾಗಲೇ ನಾಡಕಚೇರಿ ನಿರ್ಮಾಣ ಮಾಡಲಾಗಿದೆ. ಉಳಿದ ಜಾಗವನ್ನು ಶಿಕ್ಷಣ ಇಲಾಖೆ ಹಸ್ತಾಂತರಿಸಿ ಮೈದಾನ ನಿರ್ಮಾಣ ಮಾಡಿಕೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಪ್ರಕಾಶ ಕೋಳಿವಾಡ ಸಲಹೆ ನೀಡಿದರು.ತಾಲೂಕಿನ ಹಲಗೇರಿ ಗ್ರಾಮದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಎದುರು ಬಸ್‌ಗಳು ನಿಲುಗಡೆ ಮಾಡುತ್ತಿಲ್ಲ. ಅಲ್ಲಿ ಯಾರು ಇಳಿಯುವರು ಇದ್ದರೆ ಮಾತ್ರ ಸ್ಟಾಪ್ ಮಾಡಲಾಗುತ್ತದೆ. ಇಲ್ಲವಾದರೆ ಬಸ್ ನಿಲ್ಲಿಸುವುದಿಲ್ಲ ಎಂದು ದೂರು ಕೇಳಿಬಂದಿದ್ದು, ಕೂಡಲೇ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದರು.ರೈತರ ಬೆಳೆಹಾನಿ ಸರ್ವೆ ಮಾಡಿಸುವಾಗ ವಿಮೆ ಕಂಪನಿಯವರು ಹಾಗೂ ಕೃಷಿ ಅಧಿಕಾರಿಗಳು ಮಾತ್ರ ರೈತರು ಜಮೀನಿಗೆ ತೆರಳಿ ಸರ್ವೆ ಮಾಡಿಸುತ್ತಾರೆ. ಇದರಿಂದ ಆಯಾ ಗ್ರಾಪಂಗೆ ಮಾಹಿತಿ ಇಲ್ಲದಾಗುತ್ತದೆ. ಆದ್ದರಿಂದ ಸಂಬಂಧಿಸಿದ ಗ್ರಾಪಂ ಅಧ್ಯಕ್ಷರು ಅಥವಾ ಸದಸ್ಯರನ್ನು ಕರೆದುಕೊಂಡು ಹೋಗಿ ಸರ್ವೆ ಮಾಡಬೇಕು ಎಂದು ಸೂಚನೆ ನೀಡಿದರು.ಮಳೆಗಾಲ ಆರಂಭವಾಗಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯಾಗುತ್ತದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿರುವ ಲೈನ್‌ಮೆನ್ ಅಲರ್ಟ್ ಆಗಿರಲು ಎಂಜಿನಿಯರ್ ಸೂಚನೆ ನೀಡಬೇಕು ಎಂದು ಎಚ್ಚರಿಕೆ ನೀಡಿದರು.ಗ್ಯಾರಂಟಿ ಸಮಿತಿ ಸಭೆ: ವೇದಿಕೆಯಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಂಜನಗೌಡ ಪಾಟೀಲ, ತಾಪಂ ಇಒ ಪರಮೇಶ, ತಹಸೀಲ್ದಾರ್ ಆರ್.ಎಚ್. ಭಾಗವಾನ್ ಇದ್ದರು. ಇದಕ್ಕೂ ಪೂರ್ವದಲ್ಲಿ ಪಂಚ ಗ್ಯಾರಂಟಿ ತಾಲೂಕು ಸಮಿತಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಸಿಡಿಪಿಒ ಪಾರ್ವತಿ ಹುಂಡೇಕಾರ ಮಾತನಾಡಿ, ಗೃಹಲಕ್ಷ್ಮಿ ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಿದರು. 2717 ಫಲಾನುಭವಿಗಳಿಗೆ ಐಟಿ, ಜಿಎಸ್‌ಟಿ ಕಾರಣದಿಂದ ಹಣ ಬಿಡುಗಡೆ ಆಗಿಲ್ಲ. 396 ಜನರ ಅರ್ಜಿ ತಿರಸ್ಕೃತಗೊಂಡಿವೆ ಎಂದು ಮಾಹಿತಿ ನೀಡಿದರು. ಆಗ ಪಂಚ ಗ್ಯಾರಂಟಿ ಸಮಿಸಿ ಸದಸ್ಯರು ಯೋಜನೆಯಿಂದ ವಂಚಿತರಾದ ಫಲಾನುಭವಿಗಳಿಗೆ ನೆರವು ಕಲ್ಪಿಸುವಂತೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಸಿಡಿಪಿಒ ಪಾರ್ವತಿ ಹುಂಡೇಕಾರ, ನಮಗೆ ಲಿಸ್ಟ್ ಸಿಕ್ಕರೆ ಫಲಾನುಭವಿಗಳನ್ನು ಸಂಪರ್ಕ ಮಾಡಲು ಸಾಧ್ಯ ಎಂದರು.ಗೃಹಜ್ಯೋತಿ ಯೋಜನೆಯಡಿ ಮಾರ್ಚ್ ತಿಂಗಳಿನಲ್ಲಿ ಉಪವಿಭಾಗ- 1ರಲ್ಲಿ ₹2.71 ಕೋಟಿ ಖರ್ಚಾಗಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಸಾದ ಮಾಹಿತಿ ನೀಡಿದರು. ಕೆಲವು ಪಡಿತರ ಅಂಗಡಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಅಕ್ಕಿ ವಿತರಣೆ ಮಾಡುತ್ತಿದ್ದಾರೆ ಎಂದು ಸದಸ್ಯರು ಆರೋಪ ಮಾಡಿದರು. ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಸದಸ್ಯರಿಂದ ಕೆಲವು ದೂರುಗಳು ಬಂದಿದ್ದು, ಅದಕ್ಕೆ ಉತ್ತರಿಸಬೇಕಾದ ಡಿಪೋ ಮ್ಯಾನೇಜರ್ ಸಭೆಗೆ ಗೈರಾಗಿದ್ದರು. ಇದಕ್ಕೆ ಕೆರಳಿದ ಶಾಸಕ ಪ್ರಕಾಶ ಕೋಳಿವಾಡ ಅಧಿಕಾರಿಗೆ ನೋಟಿಸ್ ಕೊಡುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಆರಾಧನಾ ಯೋಜನೆಯಡಿ ಸರ್ಕಾರದಿಂದ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಒಟ್ಟು ₹34 ಲಕ್ಷ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು. ಚೆಕ್ ಸ್ವೀಕರಿಸಿದ ದೇವಸ್ಥಾನ ಆಡಳಿತ ಮಂಡಳಿ ಒಂದು ತಿಂಗಳಿನ ಒಳಗಾಗಿ ಕಾಮಗಾರಿ ಪ್ರಾರಂಭಿಸುವಂತೆ ತಹಸೀಲ್ದಾರ್ ಆರ್.ಎಚ್.ಭಾಗವಾನ್ ಸೂಚಿಸಿದರು. ಸಭೆ ಆರಂಭಿಸುವ ಪೂರ್ವದಲ್ಲಿ ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಹತರಾದ ಪ್ರವಾಸಿಗರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ