ಕೈ ರ್‍ಯಾಲಿ ನೀಟ್‌ ಮಕ್ಕಳಿಗೆ ಸಮಸ್ಯೆ: ಅಶೋಕ್‌

KannadaprabhaNewsNetwork |  
Published : Jun 23, 2026, 02:00 AM IST
ನೀಟ್‌ | Kannada Prabha

ಸಾರಾಂಶ

ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮದಿಂದಾಗಿ ನೀಟ್‌ ಪರೀಕ್ಷೆಗೆ ಭಾನುವಾರ ಹಾಜರಾಗಬೇಕಿದ್ದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಕಾಂಗ್ರೆಸ್‌ ಪಕ್ಷವೇ ಇದಕ್ಕೆ ನೇರ ಹೊಣೆ ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮದಿಂದಾಗಿ ನೀಟ್‌ ಪರೀಕ್ಷೆಗೆ ಭಾನುವಾರ ಹಾಜರಾಗಬೇಕಿದ್ದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಕಾಂಗ್ರೆಸ್‌ ಪಕ್ಷವೇ ಇದಕ್ಕೆ ನೇರ ಹೊಣೆ ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅಡ್ಡಿ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಎರಡು ಗಂಟೆ ಕುಳಿತಿದ್ದಾರೆ. ಆದರೆ ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆಗೆ ಬಂದು ಟ್ರಾಫಿಕ್‌ ಜಾಮ್‌ ಮಾಡಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಿದ್ದಾರೆ. ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಕಾಯ್ದಷ್ಟು ಜ್ಞಾನ ಕಾಂಗ್ರೆಸ್‌ನವರಿಗೆ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಕಾರ್ಯಕ್ರಮದ ಅವಶ್ಯಕತೆ ಇತ್ತಾ? ಎರಡ್ಮೂರು ಗಂಟೆ ಕಾರ್ಯಕ್ರಮವನ್ನು ಮುಂದೂಡಿದ್ದರೆ ಏನಾಗುತ್ತಿತ್ತು. ಹರಿಪ್ರಸಾದ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಎರಡು ಗಂಟೆ ಮುಂದೂಡಿದ್ದರೂ ಅವರೇ ಅಧ್ಯಕ್ಷರಾಗಿ ಇರುತ್ತಿದ್ದರು. ವೇದಿಕೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಲು ಹೊರಟಾಗ ಡಿಕೆ ಡಿಕೆ ಎಂದು ಕಾರ್ಯಕರ್ತರು ಕೂಗಿ ಮಾತನಾಡಲು ಅವಕಾಶ ನೀಡದೆ ಅಪಮಾನ ಮಾಡಿದ್ದಾರೆ. ಶಿವಕುಮಾರ್ ಅವರು ಕಾಡಿ-ಬೇಡಿ, ಧಮ್ಕಿ ಹಾಕಿ, ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿ ಅಧಿಕಾರ ಕಿತ್ತುಕೊಂಡಿದ್ದಾರೆ. ಮುಂದೆ ಸಿದ್ಧರಾಮಯ್ಯ ಏನೇನು ಮಾಡುತ್ತಾರೆ ಎಂದು ತಿಳಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.‘ಕೈ’ ರ್‍ಯಾಲಿಯಿಂದ ಹಲ ಮಕ್ಕಳು ನೀಟ್‌ ವಂಚಿತ:

ಕಾಂಗ್ರೆಸ್‌ ಸಮಾರಂಭದಿಂದಾಗಿ ಭಾನುವಾರ ನಗರದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ಹಲವು ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ದೇಶಾದ್ಯಂತ ನೀಟ್‌ ಪರೀಕ್ಷೆ ಆಯೋಜಿಸಲಾಗಿತ್ತು. ಹೀಗಿದ್ದರೂ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್‌ ಅಧಿಕಾರ ಸ್ವೀಕಾರ ಸಮಾರಂಭವನ್ನು ಆಯೋಜಿಸಿ ಕಾಂಗ್ರೆಸ್‌ನವರು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹಲವು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗದೇ ನೀಟ್‌ ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಟ್ರಾಫಿಕ್‌ ಜಾಮ್‌ನಿಂದಾಗಿ ಪರೀಕ್ಷೆಯಿಂದ ವಂಚಿತರಾದ ಮಕ್ಕಳು ಅಳುವುದು, ಅಂಗಾಲಾಚುವುದು ಕಂಡುಬಂದಿದೆ. ಮಕ್ಕಳು ಪರೀಕ್ಷೆಗೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ಒಂದು ಸಲ ಪರೀಕ್ಷೆ ಮುಂದೂಡಲಾಗಿತ್ತು. ಆದ್ದರಿಂದ ಕಾಂಗ್ರೆಸ್‌ ಕಾರ್ಯಕ್ರಮವನ್ನು ಒಂದು ದಿವಸ ಮುಂದೂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್‌ನವರು ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ. ಯಾವಾಗ ಪರೀಕ್ಷೆ ಇರುತ್ತದೆಯೋ ಆಗ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಬಾರದು. ಮುಖಂಡರ ಹುಟ್ಟುಹಬ್ಬ, ದೇವಸ್ಥಾನ-ಮಸೀದಿಗಳ ಉದ್ಘಾಟನೆ, ಕಾರ್ಯಕ್ರಮ ಎಂದು ರಸ್ತೆ ಬಂದ್‌ ಮಾಡುತ್ತಾರೆ. ಇದೆಲ್ಲಾ ಇನ್ನೂ ಎಷ್ಟು ದಿವಸ ನಡೆಯಬೇಕು. ವಿಐಪಿ ಸಂಸ್ಕೃತಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಲಿಗಿ ಕ್ರಾಸ್ ಮೇಲ್ಸೇತುವೆ ಲೋಕಾರ್ಪಣೆ
ಅಡವಿಟ್ಟ ಚಿನ್ನ ಕೇಳಿದ್ದಕ್ಕೆ ಗುಂಡಿನ ದಾಳಿ