
ಕನ್ನಡಪ್ರಭ ವಾರ್ತೆ ತುಮಕೂರು
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಹೆಳವ ಜನಾಂಗದವರು ಹಂದಿ ಸಾಕುವ ಹಾಗೂ ಹಂದಿ ಮಾರಾಟ ಮಾಡುವ ಹೆಸರಿನಲ್ಲಿ ನಾವೇ ಹಂದಿಜೋಗಿಸ್ ಎಂದು ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡು ನಿಜವಾದ ಹಂದಿಜೋಗಿಸ್ ಜನಾಂಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಗುಬ್ಬಿ ತಾಲೂಕಿನ ಸಾತೇನಹಳ್ಳಿಯ ನಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ. 49ರಲ್ಲಿ ನಮ್ಮ ಜನಾಂಗಕ್ಕೆ ಮೀಸಲಾಗಿದ್ದ ೨ ಎಕರೆ ಜಮೀನಿನಲ್ಲಿ ಹೆಳವ ಜಾತಿಯವರು ತಾವು ಹಂದಿಜೋಗಿಸ್ ಎಂದು ಸುಳ್ಳು ದಾಖಲೆ ಒದಗಿಸಿ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ತಾಲ್ಲೂಕಿನ ಬಂಗ್ಲೊಪಾಳ್ಯ ಸರ್ಕಾರಿ ಕಿರಿಯ ಶಾಲಾ ದಾಖಲಾತಿಗಳಲ್ಲಿ ಹೆಳವ ಜಾತಿ ಇರುತ್ತದೆ. ಸಾತೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವರ ಜಾತಿ ಹೆಳವ ಬದಲು ಹಂದಿ ಜೋಗಿಸ್ ಎಂದು ದಾಖಲಿಸಿರುತ್ತಾರೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಸಾಕಷ್ಟಿವೆ ಸರಿಯಾದ ತಪಾಸಣೆ ಮಾಡಿ ನಿಜವಾದ ಹಂದಿಜೋಗಿಸ್ ಜಾತಿಯವರಿಗೆ ನ್ಯಾಯ ನೀಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.ಸಂಘದ ಗೌರವಾಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಕ್ಕೆ ಸೇರಿರುವ ಹಂದಿಜೋಗಿಸ್ ಜಾತಿಯವರಿಗೆ ಸಾಂವಿಧಾನಿಕವಾಗಿ ಸಿಗಬೇಕಾಗಿರುವ ಸವಲತ್ತು, ಅವಕಾಶಗಳನ್ನು ಅನ್ಯ ಜಾತಿಯವರು ಕಬಳಿಸಿ ನಮಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಪಾಲು ನಮಗೆ, ನಿಮ್ಮ ಪಾಲು ನಿಮಗೆ, ಆದರೆ ನಾವೆಲ್ಲಾ ಒಟ್ಟಿಗೆ ಎಂಬ ಆಶಯದೊಂದಿಗೆ ಈ ಹೋರಾಟ ಮಾಡುತ್ತಿದ್ದೇವೆ ಎಂದರು.
ಗುಬ್ಬಿ ತಾಲೂಕು ಸಾತೇನಹಳ್ಳಿಯಲ್ಲಿ ಹಂದಿಜೋಗಿಸ್ ಜನಾಂಗಕ್ಕೆ ಮೀಸಲಾದ 2 ಎಕರೆ ಜಮೀನಿನಲ್ಲಿ ಅಕ್ರಮ ನಿವೇಶನಗಳನ್ನು ಪಡೆದುಕೊಂಡಿರುವ ವೆಂಕಟೇಶ್ ಎಂಬುವವರ ಶಾಲಾ ದಾಖಲಾತಿಗಳಲ್ಲಿ ಅವರ ಜಾತಿ ಹೆಳವ ಎಂದಿದೆ. ಆದರೆ ಹಂದಿಜೋಗಿಸ್ ಎಂದು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಆಪಾದಿಸಿದರು.