ಹಾರನಹಳ್ಳಿ: ಮಹಿಳಾ ಮತ್ತು ಮಕ್ಕಳ ಇಲಾಖೆ ಅರಸೀಕೆರೆ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಹಾರನಹಳ್ಳಿ ಸಮುದಾಯ ಭವನದಲ್ಲಿ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಪೋಷಣ ಕಾರ್ಯಕ್ರಮ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಅಪೌಷ್ಟಿಕತೆ ನಿವಾರಣೆಗೆ ಕೈತೋಟ ಸಹಕಾರಿ ಎಂದು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶಂಕರಮೂರ್ತಿ ತಿಳಿಸಿದರು.
ಜಿಲ್ಲಾ ನಿರೂಪಣಾಧಿಕಾರಿ ಕುಮಾರ್ ಮಾತನಾಡಿ, ಇಲಾಖೆಯ ಮಹತ್ವಕಾಂಕ್ಷಿ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನೆ ಮಾತೃಪೂರ್ಣ ಯೋಜನೆ ಪ್ರಧಾನಮಂತ್ರಿ ಮಾತ್ರ ವಂದನಾ ಯೋಜನೆ, ಸ್ತ್ರೀಶಕ್ತಿ ಯೋಜನೆ ಮಾಹಿತಿಯನ್ನು ವಿವರವಾಗಿ ಸಭೆಗೆ ತಿಳಿಸಿದರು. ಪೋಷಣ್ ಮಾಸಾಚರಣೆ ಅಭಿಯಾನ ಯೋಜನೆಯ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಜೊತೆಗೆ ಅನ್ನಪ್ರಾಶನ, ಸೀಮಂತ ಸಾರ್ವಜನಿಕ ಆರೋಗ್ಯ ಅರಿವು ನೀಡಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಿದ್ದು 18 ವರ್ಷದೊಳಗಿನವರು ಬಾಲಗರ್ಭಿಣಿಯಾಗುತ್ತಿರುವುದು ವಿಷಾದ ಎಂದು ಅಭಿಪ್ರಾಯಪಟ್ಟರು.
ಹಾರನಹಳ್ಳಿ ಆರೋಗ್ಯ ಇಲಾಖೆಯ ಪ್ರಯೋಗ ತಜ್ಞರಾದ ಶ್ರೀ ಪರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಎಂದರೆ ಹೆಚ್ಚಿನ ಜಂಕ್ ಫುಡ್. ತರಕಾರಿ ಧಾನ್ಯ ಬೆಳೆಗೆ ಔಷಧಿ ಸಿಂಪಡಿಸುತ್ತಿರುವುದರಿಂದ ರಾಸಾಯನಿಕ ಆಹಾರ ಸೇವನೆಯಿಂದ ಅಪೌಷ್ಟಿಕತೆ ಹೆಚ್ಚುತ್ತಿದೆ. ಹಾಲು, ಹಾಲಿನ ಉತ್ಪನ್ನಗಳಾದ ಮೊಸರು ಬೆಣ್ಣೆ, ತುಪ್ಪ ತಮ್ಮ ಆಹಾರದಲ್ಲಿ ಬಳಸುವಂತೆ ತಿಳಿಸಿದರು.ನಂತರ ನಿವೃತ್ತಿ ಹೊಂದಿದ ಗಣ್ಯರನ್ನು ಸನ್ಮಾನಿಸಲಾಯಿತು. ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮ ನಿರೂಪಣೆಯನ್ನು ಹಾರನಹಳ್ಳಿ ಮೇಲ್ವಿಚಾರಕರಾದ ಡಿ. ಕೆ ರಾಧಾ ನಿರ್ವಹಿಸಿದರು. ಜ್ಯೋತಿ ಸ್ವಾಗತಿಸಿದರು. ಸಮಾರಂಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ದ್ರಾಕ್ಷಾಯಿಣಿ. ಪೋಷಣ ಅಭಿಯಾನ ಸಂಯೋಜಕ ರಾದ ಮಂಜುನಾಥ್ ಮೇಲ್ವಿಚಾರಕರಾದ ಇಂದ್ರಮ್ಮ, ಲತಾ, ಸ್ತ್ರೀಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತರು ಹಾಜರಿದ್ದರು. ಶ್ವೇತ ವಂದನಾರ್ಪಣೆ ಮಾಡಿದರು. ಹಾರನಹಳ್ಳಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.