ಹಾವೇರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಸಿಇಐಆರ್ ಪೋರ್ಟಲ್ ಮೂಲಕ ದೂರು ದಾಖಲಿಸಿ ನೋಂದಾಯಿಸಿಕೊಂಡಿದ್ದ ಅರ್ಹ ವಾರಸುದಾರರಿಗೆ ಜಿಲ್ಲಾ ಪೊಲೀಸರು ಸುಮಾರು 245 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಭಾನುವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮೊಬೈಲ್‌ಗಳನ್ನು ಹಸ್ತಾಂತರಿಸಲಾಯಿತು. ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕ ಕಚೇರಿ ಸಭಾಂಗಣದಲ್ಲಿ ಎಸ್‌ಪಿ ಅಂಶುಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರು ಮೊಬೈಲ್ ಪೋನ್‌ಗಳನ್ನು ಕಳೆದುಕೊಂಡ ಸಂದರ್ಭದಲ್ಲಿ ಪತ್ತೆ ಕಾರ್ಯವನ್ನು ಸುಲಭೀಕರಿಸಲು ಹಾಗೂ ಮೊಬೈಲ್ ಕಳ್ಳತನ ಪ್ರಕರಣಗಳನ್ನು ಹತೋಟಿಗೆ ತರಲು ಸರಕಾರ ಸಿ.ಇ.ಐ.ಆರ್ ಪೋರ್ಟಲ್‌ನ್ನು ಜಾರಿಗೆ ತಂದಿದೆ. ಈ ಪೋರ್ಟಲ್ ಮುಖಾಂತರ ಸಾರ್ವಜನಿಕರು ನೇರವಾಗಿ ಸಿ.ಇ.ಐ.ಆರ್ ಅಥವಾ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದೂರು ದಾಖಲಿಸಬಹುದಾಗಿದೆ. ಈ ಸಂಬಂಧ ಹಾವೇರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಾವು ಕಳೆದುಕೊಂಡ ಮೊಬೈಲ್‌ನ್ನು ಪತ್ತೆ ಮಾಡುವಂತೆ ಖುದ್ದು ಹಾಗೂ ಪೊಲೀಸರ ಸಹಾಯದೊಂದಿಗೆ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 2024 ಜೂ.8ರಿಂದ ಜೂ.22ರವರೆಗೆ ಒಟ್ಟು 245 ಮೊಬೈಲ್‌ಗಳನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ. ಪತ್ತೆಗಾಗಿ ಎಲ್ಲಾ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡವನ್ನು ರಚನೆ ಮಾಡಿದ್ದು, ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಪತ್ತೆ ಹಚ್ಚಿ ಮೊಬೈಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಮೊಬೈಲ್‌ಗಳನ್ನು ಅರ್ಹ ವಾರಸುದಾರರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು. ಅಲ್ಲದೇ ಇನ್ನುಮುಂದೆ ಯಾರೇ ಸಾರ್ವಜನಿಕರು ಮೊಬೈಲ್‌ಗಳನ್ನು ಕಳೆದುಕೊಂಡಲ್ಲಿ ಅಂತಹವರು ತಕ್ಷಣವೇ ಸಿ.ಇ.ಐ.ಆರ್ ಪೋರ್ಟಲ್‌ನಲ್ಲಿ ಸ್ವತಃ ಮಾಹಿತಿಯನ್ನು ದಾಖಲಿಸಬೇಕು. ಇಲ್ಲಿದಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದಲ್ಲಿ ಆದಷ್ಟು ಬೇಗ ಪತ್ತೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಸಿ. ಗೋಪಾಲ, ಡಿವೈಎಸ್‌ಪಿ ಎಂ.ಎಸ್. ಪಾಟೀಲ, ಗಿರೀಶ ಭೋಜಣ್ಣನವರ, ಕೆ. ಮಂಜುನಾಥ ಸೇರಿದಂತೆ ವಿವಿಧ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.