ಮುಂಜಾಗ್ರತೆಯಿಂದ ಸಮಸ್ಯೆ ನಿರ್ವಹಿಸಿ: ಶಾಸಕ

KannadaprabhaNewsNetwork |  
Published : May 17, 2026, 02:15 AM IST
ಫೋಟೋ : ೧೬ಕೆಎಂಟಿ_ಎಂಎವೈ_ಕೆಪಿ೧ : ತಾಲೂಕು ಆಡಳಿತ ಸೌಧದಲ್ಲಿ ಮಳೆಗಾಲ ಪೂರ್ವ ಸಿದ್ಧತೆ ಸಭೆ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಇತರರು ಇದ್ದರು.  | Kannada Prabha

ಸಾರಾಂಶ

ಗಟಾರುಗಳ ಸ್ವಚ್ಛತೆ, ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮ, ಕಟ್ಟಡ ಹಾಗೂ ರಸ್ತೆಯಂಚಿನ ಅತಿರಿಕ್ತ ಕೊಂಬೆರೆಂಬೆಗಳ ಕಟಾವು ಸೇರಿದಂತೆ ಪ್ರತಿಯೊಂದು ಸಂಭವನೀಯ ಸಮಸ್ಯೆಗಳನ್ನು ಮುಂಜಾಗ್ರತೆಯಿಂದ ನಿರ್ವಹಿಸಬೇಕು.

ಮುಂಗಾರು ಮಳೆಗಾಲದ ಪೂರ್ವ ಸಿದ್ಧತೆ: ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ದಿನಕರ ಶೆಟ್ಟಿ

ಕನ್ನಡಪ್ರಭ ವಾರ್ತೆ ಕುಮಟಾ

ಹವಾಮಾನ ವರದಿಯಂತೆ ಎಂಟು-ಹತ್ತು ದಿನದಲ್ಲಿ ಮುಂಗಾರು ಮಳೆ ಆರಂಭವಾಗುವ ಮುನ್ಸೂಚನೆ ಇರುವುದರಿಂದ ತಾಲೂಕಿನಲ್ಲಿ ಮಳೆಗಾಲದ ಪೂರ್ವ ಸಿದ್ಧತೆಗಳನ್ನು ಎಲ್ಲೆಡೆ ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಶಾಸಕ ದಿನಕರ ಶೆಟ್ಟಿ ಸೂಚಿಸಿದರು. ತಾಲೂಕುಸೌಧದಲ್ಲಿ ಶನಿವಾರ ಮುಂಗಾರು ಮಳೆಗಾಲದ ಪೂರ್ವ ಸಿದ್ಧತೆಗಳಿಗಾಗಿ ತಾಲೂಕು ಮಟ್ಟದ ಅಧಿಕಾರಿಗಳ ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಟಾರುಗಳ ಸ್ವಚ್ಛತೆ, ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮ, ಕಟ್ಟಡ ಹಾಗೂ ರಸ್ತೆಯಂಚಿನ ಅತಿರಿಕ್ತ ಕೊಂಬೆರೆಂಬೆಗಳ ಕಟಾವು ಸೇರಿದಂತೆ ಪ್ರತಿಯೊಂದು ಸಂಭವನೀಯ ಸಮಸ್ಯೆಗಳನ್ನು ಮುಂಜಾಗ್ರತೆಯಿಂದ ನಿರ್ವಹಿಸಬೇಕು. ಏಕೆಂದರೆ ಈಗಾಗಲೇ ಮುಂಗಾರು ಪೂರ್ವ ಮಳೆ ಬಿದ್ದಿದ್ದು ಕೆಲವೆಡೆ ಹಾನಿಯೂ ಆಗಿದೆ. ಮಳೆಗಾಲದಲ್ಲಿ ಪಂಚಾಯಿತಿ ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ತಹಸೀಲ್ದಾರ ಅವರಿಗೆ ತಿಳಿಸದೇ ಅನಗತ್ಯ ರಜೆ ಹಾಕುವಂತಿಲ್ಲ ಎಂದು ಸ್ಪಷ್ಟವಾಗಿ ಆದೇಶಿಸಿದರು. ಸಭೆಯಲ್ಲಿ ಹಾಜರಿದ್ದ ಪಿಡಿಒಗಳಿಂದ ಪ್ರತಿ ಪಂಚಾಯಿತಿಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದ ಶಾಸಕ ದಿನಕರ ಶೆಟ್ಟಿ, ಪಂಚಾಯಿತಿ ಮಟ್ಟದ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ರಸ್ತೆ, ಗಟಾರಗಳನ್ನು ಬಿಡದೇ ಅತಿಕ್ರಮಿಸುತ್ತಿದ್ದರೂ ಪಿಡಿಒಗಳು, ಕಾರ್ಯದರ್ಶಿಗಳು ಎಲ್ಲಿಯೂ ಸರ್ಕಾರಿ ಜಾಗ ಅತಿಕ್ರಮಣ ಖುಲ್ಲಾ ಪಡಿಸುವುದಿಲ್ಲ. ಒಬ್ಬರೇ ಗೂಡಂಗಡಿಗಳನ್ನು ರಸ್ತೆಯಂಚಿನ ಸರ್ಕಾರಿ ಜಾಗದಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಹಾಕಿ ಒಂದೆರಡನ್ನು ಬಾಡಿಗೆ ಕೊಡುವ ಮಟ್ಟಿಗೆ ಜನ ಬುದ್ಧಿವಂತರಾಗಿದ್ದಾರೆ ಎಂದರು.ಪ್ರಕೃತಿ ವಿಕೋಪ, ಅತಿವೃಷ್ಟಿಯಿಂದ ಪ್ರವಾಹ ಮುಂತಾದವುಗಳನ್ನು ಎದುರಿಸಲು ಹಾಗೂ ಕೃತಕ ನೆರೆಯಂತಹ ಸಮಸ್ಯೆಗಳನ್ನು ಮೊದಲೇ ಗುರುತಿಸಿ ನಿವಾರಿಸಲು ಕೂಡಲೇ ಕಾರ್ಯಪ್ರವೃತ್ತರಾಗಿ. ರಸ್ತೆಯ ಮೇಲಿನ ಮರಗಳಿಂದ ನಿರಂತರ ತೊಟ್ಟಿಕುವ ಹನಿಗಳಿಂದ ಡಾಂಬರು ರಸ್ತೆಗಳು ಹಾಳಾಗುತ್ತಿದೆ ಎಂದರು.ತಹಸೀಲ್ದಾರ ಶ್ರೀಕೃಷ್ಣ ಕಾಮಕರ, ಆಯಾ ಪಂಚಾಯಿತಿ ಮಟ್ಟದ ನೋಡಲ್ ಅಧಿಕಾರಿಗಳು, ಆಡಳಿತಾಧಿಕಾರಿಗಳು ಸದಾ ಜಾಗೃತರಾಗಿದ್ದು ಯಾವುದೇ ಸಮಸ್ಯೆ ಸಂದರ್ಭದಲ್ಲಿ ಅನ್ಯ ಇಲಾಖೆಗಳೊಂದಿಗೆ ಪರಸ್ಪರ ಸಮನ್ವಯತೆಯಿಂದ ವಿಳಂಬವಿಲ್ಲದಂತೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಶಾಲೆ, ಮನೆ ಮುಂತಾದ ಕಟ್ಟಡಗಳ ಮೇಲೆ ಚಾಚಿಕೊಂಡಿರುವ ಮರಗಳ ಕೊಂಬೆಗಳನ್ನು ಕಟಾವು ಮಾಡಿಸಿ. ಸಾರ್ವಜನಿಕರಿಗೆ ಅಪಾಯಕಾರಿಯಾಗಿದ್ದರೆ ಮಾಲ್ಕಿ ಜಾಗದಲ್ಲಿದ್ದರೂ ತೆರವುಗೊಳಿಸಿ ಎಂದರು. ಅಗ್ನಿಶಾಮಕ ದಳ ಸದಾ ಸನ್ನದ್ಧವಾಗಿರುವಂತೆ ತಿಳಿಸಿದರು.ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಅತಿಹೆಚ್ಚು ಗಟಾರ ಸಮಸ್ಯೆಯಿಂದ ಮಳೆ ನೀರು ಅವಾಂತರವಾಗುತ್ತಿರುವ ಬಗ್ಗೆ ಚರ್ಚೆಯಾಯಿತು. ಬಂಡಿವಾಳದಲ್ಲಿ ಸಂಭವನೀಯ ಭೂ ಕುಸಿತದ ಅಪಾಯ ಗುರುತಿಸಲಾಗಿದ್ದು ಅಗತ್ಯ ಸಂದರ್ಭದಲ್ಲಿ ಅಲ್ಲಿರುವ ಕುಟುಂಬಗಳ ಸ್ಥಳಾಂತರಕ್ಕೆ ಪೊಲೀಸ್ ನೆರವು ಪಡೆಯಲು ಸೂಚಿಸಲಾಯಿತು.

ಸಮಾಜ ಕಲ್ಯಾಣಾಧಿಕಾರಿ ಭಾರತಿ ಆಚಾರ್ಯ, ಅರಣ್ಯಾಧಿಕಾರಿಗಳಾದ ಪ್ರವೀಣ ನಾಯಕ, ರಾಜು ನಾಯ್ಕ, ಬಿಇಒ ಉದಯ ನಾಯ್ಕ, ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಕೃಷಿ ಅಧಿಕಾರಿ ವೆಂಕಟೇಶಮೂರ್ತಿ, ಪಿಎಸ್‌ಐ ಸಾವಿತ್ರಿ ನಾಯಕ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳ ಕಡಿತ: ಪ್ರಕರಣ ದಾಖಲು
ಶನೈಶ್ಚರ ದೇವರ ಪ್ರತಿಮೆಗೆ ತೈಲಾಭಿಷೇಕ