ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

KannadaprabhaNewsNetwork |  
Published : Apr 04, 2025, 12:47 AM IST
44 | Kannada Prabha

ಸಾರಾಂಶ

ದಾಖಲೆ ಇಲ್ಲದಿದ್ದರೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಆಗೋದಿಲ್ಲ. ಮಾರಾಟಕ್ಕೆ ಅನಾನುಕೂಲವಾಗುತ್ತಿತ್ತು. ಅದನ್ನು ಮನಗಂಡು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇನೆ

ಕನ್ನಡಪ್ರಭ ವಾರ್ತೆ ಮೈಸೂರು

ಕಳೆದ 4- 5 ದಶಕಗಳಿಂದ ಸಾಗುವಳಿ ಭೂಮಿ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಹಕ್ಕುಪತ್ರ ಕೊಡಿಸುವ ತನಕ ನೆಮ್ಮದಿ ಇಲ್ಲ. ಹಕ್ಕುಪತ್ರ ಕೊಡುವ ಕುರಿತಾಗಿ ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಅಧಿವೇಶನದಲ್ಲಿ ಪ್ರಸ್ತಾಪಿಸಿರುವುದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ಮೈಸೂರು ತಾಲೂಕಿನ ಗುಮಚನಹಳ್ಳಿಯಲ್ಲಿ 94-ಸಿ ಅಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಪ್ರತಿಯೊಂದು ಹಳ್ಳಿ ನನ್ನ ಊರು ಇದ್ದಂತೆ. ಈ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ ಎಂದರು.ಜಯಪುರ, ಗುಮಚನಹಳ್ಳಿ, ಹಾರೋಹಳ್ಳಿ, ಚಿಕ್ಕನಹಳ್ಳಿ ಮೊದಲಾದ ಊರುಗಳು ನಮ್ಮ ಊರಿನಂತೆ ಇವೆ. ಎಲ್ಲರೂ ನಮ್ಮ ಅಣ್ಣ- ತಮ್ಮಿಂದರೇ ಆಗಿದ್ದಾರೆ. ನಮ್ಮ ಮನೆಗೆ ದಾಖಲೆ ಇಲ್ಲವೆಂದು ಅನೇಕರು ಬರುತ್ತಿದ್ದರು. ದಾಖಲೆ ಇಲ್ಲದಿದ್ದರೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಆಗೋದಿಲ್ಲ. ಮಾರಾಟಕ್ಕೆ ಅನಾನುಕೂಲವಾಗುತ್ತಿತ್ತು. ಅದನ್ನು ಮನಗಂಡು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇನೆ ಎಂದು ಅವರು ತಿಳಿಸಿದರು.ಸಾಗುವಳಿ ಭೂಮಿಯನ್ನು ಉಳುಮೆ ಮಾಡಿಕೊಂಡು ಬಂದಿದ್ದರೂ ಮತ್ತು ದಾಖಲೆಯಲ್ಲಿ ಹೆಸರು ಇದ್ದರೂ ಅರಣ್ಯ ಭೂಮಿ ಎನ್ನುವುದನ್ನು ತೋರಿಸಲಾಗಿದೆ. ಇದರಿಂದಾಗಿ ಹಕ್ಕು ಪತ್ರ ಕೊಡಲು ಕೆಲವು ಕಡೆಗಳಲ್ಲಿ ಸಮಸ್ಯೆಯಾಗಿದೆ. ಇದು ಬರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸಮಸ್ಯೆಯಾಗಿಲ್ಲ. ಅನೇಕ ಕ್ಷೇತ್ರಗಳಲ್ಲಿ ಉಂಟಾಗಿದೆ. ಹೀಗಾಗಿ, ಅರಣ್ಯ ಇಲಾಖೆ ಭೂಮಿ ಅಂತ ತೋರಿಸಿರುವ ಜಮೀನಿನಲ್ಲಿ ರೈತರು ಉಳುಮೆ ಮಾಡಿಕೊಂಡು ಬಂದಿದ್ದರೆ ಹಕ್ಕುಪತ್ರ ಕೊಡಿಸುವುದಕ್ಕೆ ತೀರ್ಮಾನ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.ಜಯಪುರ ಹೋಬಳಿಯ ಕೆಲವು ಗ್ರಾಮಗಳ ರೈತರು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಸಾಗುವಳಿ ಚೀಟಿ ಇದ್ದರೂ ಅರಣ್ಯ ಇಲಾಖೆ ಭೂಮಿಯಾಗಿ ಬಿಟ್ಟಿದೆ. ಇಂತಹದನ್ನು ಸರಿಪಡಿಸಿ ಹಕ್ಕುಪತ್ರ ನೀಡಬೇಕೆಂದು ತೀರ್ಮಾನಿಸಿ ಅನೇಕ ತಿಂಗಳಿಂದ ಶ್ರಮಪಡಲಾಗಿತ್ತು. ಒಂದು ಒಳ್ಳೆಯ ಕೆಲಸಕ್ಕೆ ನಾನಾ ವಿಘ್ಞಗಳು ಎದುರಾದರೂ ಕೊನೆಗೂ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಇಂದು ಹಕ್ಕುಪತ್ರ ವಿತರಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.ಉದ್ಬೂರು, ಗುಮಚನಹಳ್ಳಿ ಮೊದಲಾದ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್‌ ದೀಪದ ವ್ಯವಸ್ಥೆ ಮಾಡಲಾಗಿದೆ. ಆಶ್ರಯ ಬಡಾವಣೆಗಾಗಿ ಇದ್ದ ತೊಡಕುಗಳನ್ನು ನಿವಾರಿಸಲು ಗಮನಹರಿಸಿದ್ದೇನೆ. ಆಶ್ರಯ ಫಲಾನುಭವಿಗಳ ಆಯ್ಕೆಯನ್ನು ಗ್ರಾಮಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಸಲ್ಲಿಸಿದರೆ ತಕ್ಷಣವೇ ಮಂಜೂರಾತಿ ದೊರೆಯಲಿದೆ ಎಂದು ಅವರು ಭರವಸೆ ನೀಡಿದರು.ಇದೇ ವೇಳೆ ಮಂಡನಹಳ್ಳಿಯಲ್ಲಿ 38 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ, ಶಾಸಕರ ವಿಶೇಷ ಅನುದಾನದಲ್ಲಿ ಮಂಡನಹಳ್ಳಿ-ಕಾಡನಹಳ್ಳಿ ರಸ್ತೆ ಕಾಮಗಾರಿ, ಶಾಲಾ ಕೊಠಡಿಗಳನ್ನು ಶಾಸಕರು ಉದ್ಘಾಟಿಸಿದರು. ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ