ಹಾನಗಲ್ಲ: ಇಲ್ಲಿಯ ಬಸ್ ನಿಲ್ದಾಣಕ್ಕೆ ಹಾನಗಲ್ಲ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರೇಶ ಬೈಲವಾಳ ಭೇಟಿ ನೀಡಿ ಪರಿಶೀಲಿಸಿದರು. ಅವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಎಲ್ಲ ವ್ಯವಸ್ಥೆ ಸರಿಪಡಿಸುವಂತೆ ಹೇಳಿದರು.
ಖಾಸಗಿ ಜಾಗ ಕಸದ ತೊಟ್ಟಿ: ಬಸ್ ನಿಲ್ದಾಣದ ಒಂದು ಮೂಲೆಯಲ್ಲಿ ಖಾಸಗಿ ಜಾಗವಿದೆ. ಆದರೆ ಇಲ್ಲಿಂದ ಬರುವ ದುರ್ವಾಸನೆ ಇಡೀ ಬಸ್ ನಿಲ್ದಾಣ ಹಾಗೂ ಅದರ ಪಕ್ಕದಲ್ಲಿರುವ ಜ್ಯೂನಿಯರ್ ಕಾಲೇಜಿಗೆ ವ್ಯಾಪಿಸಿದೆ. ಬಸ್ ನಿಲ್ದಾಣ ಕಸದ ತೊಟ್ಟಿಯಾಗಿದೆ. ಈ ಕುರಿತು ಪ್ರಶ್ನಿಸಿದಾಗ ಅಧಿಕಾರಿಗಳು, ನಿತ್ಯ ಸ್ವಚ್ಛಗೊಳಿಸುತ್ತೇವೆ. ಆದರೆ ಪ್ರಯಾಣಿಕರು ಕಸದ ತೊಟ್ಟಿಗೆ ಕಸ ಹಾಕದೇ ಎಲ್ಲೆಂದರಲ್ಲಿ ಎಸೆಯುತ್ತಾರೆ ಎಂದು ಹೇಳಿದರು.
ಪೊಲೀಸ್ ಚೌಕಿ: ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ಇದೆ. ಆದರೆ ಪೊಲೀಸರು ಇರುವುದಿಲ್ಲ. ಆದರೆ ಈ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯ ಕೊರತೆ ಕಾರಣ ನೀಡುತ್ತಾರೆ ಎಂದು ಡಿಪೋ ಅಧಿಕಾರಿಗಳು ಹೇಳಿದರು.ಬಸ್‌ಗಳು ಸರಿಯಾದ ಸಮಯಕ್ಕೆ ಓಡುತ್ತಿಲ್ಲ. ಬಸ್‌ಗಳ ಸಂಖ್ಯೆಯ ಕೊರತೆಯೂ ಇದೆ. ನಿರ್ವಾಹಕ, ಚಾಲಕರ ಕೊರತೆ ಇದೆ. ಹಾನಗಲ್ಲ ಬಸ್ ಡಿಪೋದಲ್ಲಿ ಒಟ್ಟು ೧೦೩ ಬಸ್ಸುಗಳಿವೆ. ಆದರೆ ೧೫ ಲಕ್ಷ ಕಿಮೀ ಓಡಿದ ೩೨ ಬಸ್‌ಗಳಿವೆ. ಇವು ಮೇಲಿಂದ ಮೇಲೆ ಕೆಟ್ಟುನಿಲ್ಲುತ್ತಿವೆ. ಬಸ್ ನಿಲ್ದಾಣ ಸಣ್ಣದಾಗಿದೆ. ಇಲ್ಲಿ ಪ್ರಯಾಣದ ಒತ್ತಡವಿದೆ. ಹಾನಗಲ್ಲ ಡಿಪೋದಿಂದ ೯೩ ರೂಟ್‌ಗಳಿವೆ. ೨೬೪ ಸಿಬ್ಬಂದಿ ಇದ್ದಾರೆ. ಆದಾಗ್ಯೂ ಸಿಬ್ಬಂದಿಯ ಕೊರತೆ ಇದೆ. ಶಕ್ತಿ ಯೋಜನೆಯಲ್ಲಿ ೧೦ ಸಾವಿರಕ್ಕೂ ಅಧಿಕ ಮಹಿಳೆಯರು ಇಲ್ಲಿಂದ ಪ್ರಯಾಣಿಸುತ್ತಾರೆ. ೪೫೨೦ ವಿದ್ಯಾರ್ಥಿ ಪಾಸ್ ಹೊಂದಿದವರು ಇದ್ದಾರೆ. ತಿಂಗಳ ಪಾಸಿನ ೭೦ ಜನ ಇದ್ದಾರೆ.ಇದೆಲ್ಲದರ ನಡುವೆ ಬಸ್ ನಿಲ್ದಾಣದ ನವೀಕರಣ, ಅಭಿವೃದ್ಧಿಗೆ ಅನುದಾನ ಬೇಕಿದೆ.