ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗಿನ ಹಿರಿಯ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಅವರು ರಚಿಸಿದ ಚುಟುಕುಗಳ ‘ಹನಿ’ ಸಂಕಲನವನ್ನು ಲೇಖಕರ ಗುಮ್ಮನಕೊಲ್ಲಿಯ ನಿವಾಸದಲ್ಲಿ ಅನಾವರಣಗೊಳಿಸಿ ಮಾತನಾಡಿದ ಅವರು, ಸಾಹಿತ್ಯವನ್ನು ಆಸ್ವಾದಿಸುವ, ಕವನಗಳನ್ನು ಆನಂದಿಸುವ ಪ್ರತಿಯೊಬ್ಬರಲ್ಲಿಯೂ ಕೂಡ ಓರ್ವ ಕವಿ ಹುದುಗಿರುತ್ತಾನೆ ಎಂದು ಹೇಳಿದರು.
ಚುಟುಕು ಅಥವಾ ಹನಿಗವನವೆಂಬುದು ಹುರಿ ಗಾಳು ಇದ್ದಂತೆ. ಆಗೊಮ್ಮೆ ಈಗೊಮ್ಮೆ ಮೆಲ್ಲಲ್ಲಷ್ಟೆ ಇರುವ ಹುರಿಗಾಳನ್ನು ಊಟದಂತೆ ಬಳಸಲು ಅಸಾಧ್ಯ ಎಂದರು.ಇದೇ ತೆರದಲ್ಲಿ ಹನಿಗವನಗಳನ್ನು ರಚಿಸುವವರು ‘ಇಡಿಗವಿತೆ’ಗಳ ರಚನೆಗೆ ಮನ ಮಾಡಬೇಕು. ಹನಿಗವಿತೆಗಳೊಂದಿಗೆ ಇಡಿಗವಿತೆಗಳ ರಚನೆಯ ಮೂಲಕ ತಮ್ಮ ಸಾಹಿತ್ಯದ ಪರಿಧಿಯನ್ನು ಪ್ರತಿಯೊಬ್ಬರು ವಿಸ್ತರಿಸಿಕೊಳ್ಳಬೇಕು ಎಂದು ನುಡಿದರು.
ಕನ್ನಡ ಸಾಹಿತ್ಯದಲ್ಲಿ, ರಾಷ್ಟ್ರಕವಿ ಕುವೆಂಪು ಅವರ ‘ಚಿಂತನಾತ್ಮಕ’ ಸಾಹಿತ್ಯ ಮತ್ತು ದಿನಕರ ದೇಸಾಯಿಯವರ ‘ವಿಡಂಬನಾತ್ಮಕ’ ಎನ್ನುವ ಸಾಹಿತ್ಯದ ಎರಡು ಧಾರೆಗಳಿವೆ.
ಕವಿ ಹಾ.ತಿ.ಜಯಪ್ರಕಾಶ್ ಅವರು ಪ್ರಕಟಣೆ, ಪ್ರಚಾರದ ಹಂಗಿಲ್ಲದೆ ಕೇವಲ ತಮ್ಮ ಸ್ವಯಂ ಖುಷಿಗಾಗಿ ಕಾವ್ಯ ಪ್ರೀತಿಯನ್ನು ಹೊಂದಿರುವ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ ಲಕ್ಷ್ಮಣರಾವ್ ಅವರು, ತಾವು ರಚಿಸಿದ ‘ನಿಂಬೆ ಗಿಡ ತುಂಬಾ ಚೆಂದ’ ಹಾಡನ್ನು ಹಾಡುವ ಮೂಲಕ ನೆರೆದ ಸಾಹಿತ್ಯ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಹಾ.ತಿ.ಜಯಪ್ರಕಾಶ್ ಅವರು ಚುಟುಕು ಸಾಹಿತ್ಯ ಪ್ರಕಾರದಲ್ಲಿ ತಮ್ಮನ್ನು ತೊಡಗಿಸಿಕೊಂಡವರೆಂದು ಮೆಚ್ಚುಗೆಯ ನುಡಿಗಳನ್ನಾಡಿ, ಪ್ರತಿಯೊಬ್ಬರು ದುಡ್ಡು ಕೊಟ್ಟು ಪುಸ್ತಕಗಳನ್ನು ಕೊಂಡು ಓದುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
‘ಹನಿ’ ಚುಟುಕು ಕೃತಿಗೆ ಮುನ್ನುಡಿ ಬರೆದ ತ್ರಿಭಾಷಾ ಸಾಹಿತಿ ನಾಗೇಶ್ ಕಾಲೂರು ಅವರು ಮಾತನಾಡಿ, ಚುಟುಕು ಕವನಗಳು ಎಂದರೆ ‘ಸ್ಟಿಲ್ ಫೋಟೋಗ್ರಾಫಿ’ಯಂತೆ. ಆಯಾ ಕ್ಷಣದ ಭಾವವನ್ನು ಕೆಲವೇ ಕೆಲವು ಸಾಲುಗಳಲ್ಲಿ ಚುಟುಕುಗಳು ಕಟ್ಟಿಕೊಡುತ್ತದೆಂದು ಅಭಿಪ್ರಾಯಿಸಿ, ಹನಿ ಸಂಕಲನದ ಚುಟುಕುಗಳ ಸ್ವಾರಸ್ಯಗಳನ್ನು ಸಭಿಕರ ಮುಂದೆ ತೆರೆದಿಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚುಟುಕು ಕವಿ ಹಾ.ತಿ. ಜಯಪ್ರಕಾಶ್, ಕಳೆದ ಮೂರುವರೆ ನಾಲ್ಕು ದಶಕಗಳಿಂದ ಚುಟುಕು ಕವನಗಳನ್ನು ರಚಿಸಿಕೊಂಡು ಬಂದಿರುವುದನ್ನು ತಿಳಿಸಿದರು. ತಾವು ಉದ್ಯೋಗಿಯಾಗಿ 35 ವರ್ಷ ಸೇವೆ ಸಲ್ಲಿಸಿದ ಹಂತದಲ್ಲಿ ರಚಿಸಿದ ಚುರುಕು ಮಟ್ಟಿಸುವ ಕವನಗಳ ಕಾರಣದಿಂದ ತಮಗೆ 15 ಬಾರಿ ವರ್ಗಾವಣೆಯಾದುದನ್ನು ಸ್ವಾರಸ್ಯಕರವಾಗಿ ತಿಳಿಸಿದರು. ವಾರ್ತಾ ಕಮ್ಯೂನಿಕೇಷನ್‌ನ ಅನಿಲ್ ಎಚ್.ಟಿ.ಅವರ ಪ್ರೀತಿ ವಿಶ್ವಾಸಗಳಿಂದ ಇದೀಗ ತಮ್ಮ ಚುಟುಕು ಸಂಕಲನ ಹೊರ ಬಂದಿದೆ ಎಂದು ಮನದಾಳದಿಂದ ನುಡಿದರು.
ಇವರೊಂದಿಗೆ ಟಿ.ಪಿ.ರಮೇಶ್, ಬಿ.ಜಿ. ಅನಂತಶಯನ, ಚುಟುಕು ಸಂಕಲನವನ್ನು ಹೊರ ತಂದ ವಾರ್ತಾ ಕಮ್ಯೂನಿಕೇಷನ್ ಮುಖ್ಯಸ್ಥರಾದ ಅನಿಲ್ ಎಚ್.ಟಿ., ನಾಗೇಶ್ ಕಾಲೂರು, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಗಾಯಕಿ ಫಣಿವೇಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಭಿಜ್ಞಾ ಪ್ರಾರ್ಥಿಸಿ, ಅನಿಲ್ ಹೆಚ್.ಟಿ. ಸ್ವಾಗತಿಸಿದರು. ಎಸ್.ಐ.ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿ, ಸುಮಾ ರಾಘವೇಂದ್ರ ವಂದಿಸಿದರು.