ಹನುಮದ್ ವ್ರತ: ಅಂಜನಾದ್ರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

KannadaprabhaNewsNetwork | Published : Dec 14, 2024 12:47 AM

ಸಾರಾಂಶ

ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮದ್ ವ್ರತಾಚರಣೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ಸ್ವಾಮಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ಆನಂತರ ದೇಗುಲದ ಮುಂಭಾಗದಲ್ಲಿ ಪವಮಾನ ಹೋಮ, ಹನುಮಾನ್ ಚಾಲೀಸ್ ಪಠಣ, ಭಜನೆ, ಸಂಗೀತ ಕಾರ್ಯಕ್ರಮಗಳು ಜರುಗಿದವು.

ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮದ್ ವ್ರತಾಚರಣೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬೆಳಗ್ಗೆ ಸ್ವಾಮಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ಆನಂತರ ದೇಗುಲದ ಮುಂಭಾಗದಲ್ಲಿ ಪವಮಾನ ಹೋಮ, ಹನುಮಾನ್ ಚಾಲೀಸ್ ಪಠಣ, ಭಜನೆ, ಸಂಗೀತ ಕಾರ್ಯಕ್ರಮಗಳು ಜರುಗಿದವು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾಗವಹಿಸಿದ್ದರು. ಶುಕ್ರವಾರ ಅಂಜನಾದ್ರಿ ಬೆಟ್ಟಕ್ಕೆ 60 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.

ಹನುಮ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಪುಷ್ಪ ಸಮರ್ಪಣೆ:

ಹನುಮ ಹುಟ್ಟಿದ ನಾಡು ಎಂದು ಹೆಸರಾದ ತಾಲೂಕಿನ ಅಂಜನಾದ್ರಿ ಬೆಟ್ಟದ ಕಿಷ್ಕಿಂದ ಆಂಜನೇಯ ದೇವಸ್ಥಾನಕ್ಕೆ ಭಕ್ತರ ಸಂಕೀರ್ತನೆ ಯಾತ್ರೆಯಲ್ಲಿ ಆಗಮಿಸಿದ ಹನುಮ ಮಾಲಾಧಾರಿಗಳಿಗೆ ಗಾಂಧಿ ವೃತ್ತದಲ್ಲಿ ಸರ್ವಧರ್ಮ ಸದ್ಭಾವನಾ ಸಮಿತಿಯ ನೇತೃತ್ವದಲ್ಲಿ ಮುಸ್ಲಿಮರು ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡಿ, ಸ್ವಾಗತಿಸಿದರು.ಶಾಸಕ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ವಿರೂಪಾಕ್ಷಪ್ಪ ಸಿಂಗನಾಳ, ವಿನಯ ಮಾಲಿ ಪಾಟೀಲ್ ಸಂಗಪ್ಪ ಹಾಗೂ ಮಾಲಾಧಾರಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಹಿರಿಯ ಮುಖಂಡ ಹಾಗೂ ನಗರಸಭೆಯ ಅಧ್ಯಕ್ಷ ಮೌಲಾಸಾಬ್ ಮಾತನಾಡಿ, ಭಾವೈಕ್ಯದ ಪ್ರತೀಕವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಹನುಮ ಮಾಲಾಧಾರಿಗಳಿಗೆ ಪುಷ್ಪಾರ್ಚನೆ ಮಾಡಿ ಶುಭ ಕೋರಿದ್ದೇವೆ. ಇಂತಹ ಮನೋಭಾವನೆ ಪ್ರತಿ ಧರ್ಮದವರಲ್ಲೂ ಬರಬೇಕು ಎಂದರು.ಅಜರ್ ಅನ್ಸಾರಿ, ಆಯೂಬ್‌ಖಾನ್‌, ಜಿಲಾನಿ, ಜಿನ್ನಾ ಮನಿಯರ್, ಅನ್ನು ಮನಿಯರ್, ಶಫಿ ಬಿಲ್ಡರ್ ಮೆಹಬೂಬ್, ಸೈಯದ್ ಅಲಿ. ಕೆ.ಟಿ. ಜುಬೇರಾ, ಮುಸ್ತಾಕಲಿ, ಅಜಯ್ ಬಿಚ್ಚಾಲಿ ಇತರರು ಭಾಗವಹಿಸಿದ್ದರು.

ಅಂಜನಾದ್ರಿಯಲ್ಲಿ ಅಪ್ಪು, ದರ್ಶನ ಅಭಿಮಾನಿಗಳಿಂದ ಘೋಷಣೆ:

ಅಂಜನಾದ್ರಿಯಲ್ಲಿ ದರ್ಶನ ಭಾವಚಿತ್ರ ಹಿಡಿದು ಬಂದಿದ್ದ ಕೆಲವು ಹನುಮಲಾಧಾರಿಗಳು ಡಿ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗುತ್ತಿದ್ದಂತೆ, ಪುನೀತ್ ರಾಜಕುಮಾರ ಅಭಿಮಾನಿಗಳು ಅಪ್ಪು ಅಪ್ಪು ಎಂದು ಘೋಷಣೆ ಕೂಗಿದರು.ಹೀಗೆ ಘೋಷಣೆ ಕೂಗುತ್ತಲೇ ತಿಕ್ಕಾಟಕ್ಕೆ ದಾರಿಯಾಗುತ್ತದೆ ಎನ್ನುವಾಗ ಅಲ್ಲಿದ್ದವರು ಅವರನ್ನು ಸಮಾಧಾನ ಪಡಿಸಿದರು. ದರ್ಶನ ಬಿಡುಗಡೆಗೆ ದರ್ಶನ್ ಅಭಿಮಾನಿಗಳು ದರ್ಶನ್ ದರ್ಶನ್ ಎಂದು ಕೂಗಿದರಲ್ಲದೆ ಡಿ ಬಾಸ್ ಡಿ ಬಾಸ್ ಎಂದಿದ್ದು, ಅಲ್ಲಿಯೇ ಇದ್ದ ಅಪ್ಪು ಅಭಿಮಾನಿಗಳನ್ನು ಕೆರಳುವಂತೆ ಮಾಡಿತು. ತಕ್ಷಣ ಅಪ್ಪು ಅಭಿಮಾನಿಗಳು ಕೆಲಕಾಲ ಘೋಷಣೆ ಕೂಗಿ, ತೆರಳಿದರು.

Share this article