ರಾಜ್ಯದ ಎಲ್ಲ ಹನುಮಂತ ದೇವಸ್ಥಾನಗಳಲ್ಲಿ ಹನುಮಾನ ಚಾಲೀಸಾ ಪಠಣ: ದತ್ತಾವಧೂತ ಗುರು

KannadaprabhaNewsNetwork |  
Published : Nov 10, 2025, 04:00 AM IST
ಗೋಕುಲ ರಸ್ತೆಯ ನಾನ್ಕೀ ಕನ್‌ವೆನ್ಷನ್‌ ಹಾಲ್‌ನಲ್ಲಿ ಪೂರ್ವ ಸಂಕಲ್ಪಿತ 11 ಕೋಟಿ ಶ್ರೀ ಹನುಮಾನ ಚಾಲೀಸಾ ಪಾಠದ ಸಮಾರೋಪ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಮುಂದಿನ ದಿನಗಳಲ್ಲಿ ಏಳು ದಿನಗಳ ಹನುಮಾನ್‌ ಚಾಲೀಸಾ ಪಠಣ ಮಾಡುವ ಯೋಜನೆ ಇದೆ. ಈ ಸಂಬಂಧ ಹು-ಧಾ ಮಹಾನಗರದ ಎಲ್ಲ ಹನುಮಾನ್‌ ದೇವಾಲಯಗಳಿಗೂ ತೆರಳಿ ಪ್ರಚಾರ ಮಾಡಲಾಗುತ್ತಿದೆ ಎಂದು ಹೆಬ್ಬಳ್ಳಿಯ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಗುರುಗಳು ಹೇಳಿದರು.

ಹುಬ್ಬಳ್ಳಿ: ಮುಂದಿನ ದಿನಗಳಲ್ಲಿ ಏಳು ದಿನಗಳ ಹನುಮಾನ್‌ ಚಾಲೀಸಾ ಪಠಣ ಮಾಡುವ ಯೋಜನೆ ಇದೆ. ಈ ಸಂಬಂಧ ಹು-ಧಾ ಮಹಾನಗರದ ಎಲ್ಲ ಹನುಮಾನ್‌ ದೇವಾಲಯಗಳಿಗೂ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ರಾಜ್ಯದ ಎಲ್ಲ ಹನುಮಂತ ದೇವಸ್ಥಾನಗಳಲ್ಲಿ ಹನುಮಾನ್‌ ಚಾಲೀಸಾ ಪಠಣ ಮಾಡಲಾಗುವುದು ಎಂದು ಹೆಬ್ಬಳ್ಳಿಯ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಗುರುಗಳು ಅಭಿಪ್ರಾಯ ಪಟ್ಟರು.

ನಗರದ ಗೋಕುಲ ರಸ್ತೆಯ ನಾನಕೀ ಕನ್‌ವೆನ್ಷನ್‌ ಹಾಲ್‌ನಲ್ಲಿ ಪೂರ್ವ ಸಂಕಲ್ಪಿತ 11 ಕೋಟಿ ಶ್ರೀ ಹನುಮಾನ ಚಾಲೀಸಾ ಪಾಠದ ಸಮಾರೋಪ ಸಮಾರಂಭ ನಿಮಿತ್ತ ಆಯೋಜಿಸಿರುವ 108 ಗಂಟೆಗಳ ಸಾಮೂಹಿಕ ಅಖಂಡ ಶ್ರೀ ಹನುಮಾನ್‌ ಚಾಲೀಸಾ ಪಠಣ ಸಂಪನ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಒಂದು ಸಾಧನ:

ಮನವನ್ನು ನಿರುಪಾದಿ ವ್ಯವಸ್ಥೆಗೆ ಒಳಪಡಿಸುವುದೇ ನಿಜವಾದ ನಾಮಸ್ಮರಣೆ. ಅನೇಕ ಸ್ತೋತ್ರಗಳ ನಡುವೆ ಶ್ರೀ ರಾಮ ದೇವರಿಗೆ ಪ್ರಿಯವಾದ ಸ್ತೋತ್ರ ಹನುಮಾನ್‌ ಚಾಲೀಸಾ. ಶ್ರೀರಾಮ ತನಗಿಂತ, ಹನುಮನಿಗಿಂತ ಹನುಮನ ಭಕ್ತರನ್ನು ಅತೀ ಹೆಚ್ಚು ಪ್ರೀತಿಸುತ್ತಾನೆ. ಹೀಗಾಗಿ, ಶ್ರೀರಾಮ, ಹನುಮ ದೇವರನ್ನು ಒಲಿಸಿಕೊಳ್ಳಲು ಶ್ರೀ ಹನುಮಾನ್‌ ಚಾಲೀಸಾ ಮಂತ್ರವು ಒಂದು ಸಾಧನ. ಭಕ್ತರ ಉದ್ಧಾರಕ್ಕೆ ಮಾರುತಿ ದೇವರು ಮತ್ತೆ ಮತ್ತೆ ಬರುತ್ತಾರೆ. ಹೀಗಾಗಿ ಮಾರುತಿ ದೇವರ ಉಪಾಸನೆಯಿಂದ ಜೀವನ ಪಾವನ ಆಗಲಿದೆ ಎಂದರು.

ಯಶಸ್ವಿ ಪಠಣ

ಮೊದಲು ಮಾಡಿದ ಸಂಕಲ್ಪದಂತೆ 100 ಗಂಟೆಗಳ ಹನುಮಾನ್‌ ಚಾಲೀಸಾ ಪಠಣ ಮಾಡಬೇಕಿತ್ತು. ಆದರೆ, ಹಿಂದು ಧರ್ಮದಲ್ಲಿ 108 ಸಂಖ್ಯೆಗೆ ಬಹಳ ಮಹತ್ವವಿದೆ. ಹೀಗಾಗಿ 100 ಗಂಟೆಗೆ ಸಂಕಲ್ಪ ಸಿದ್ಧ ಹನುಮಾನ್‌ ಚಾಲೀಸಾ ಪಠಣವನ್ನು 108 ಗಂಟೆಗಳ ಕಾಲ ಯಶಸ್ವಿಯಾಗಿ ಪಠಿಸಲಾಗಿದೆ. ಶ್ರೀರಾಮ, ಶ್ರೀ ಗೋಂದಾವಲೇಕರ ಮಹಾರಾಜರು ಹಾಗೂ ಶ್ರೀ ಮಾರುತಿ ಅನುಗ್ರಹದಿಂದ 108 ತಾಸುಗಳ ಶ್ರೀ ಹನುಮಾನ್‌ ಚಾಲೀಸಾ ಪಠಣ ಕಾರ್ಯಕ್ರಮ ಅದ್ಧೂರಿ ಯಶಸ್ಸು ಕಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಲಗೂರು ಶ್ರೀಕ್ಷೇತ್ರದ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿ ಶ್ರೀ ವಿಜಯಮಾರುತಿ ಶರ್ಮಾ ಗುರೂಜಿ ಸಾನ್ನಿಧ್ಯ ವಹಿಸಿ ಮಾತನಾಡಿ, 11 ಕೋಟಿ ಶ್ರೀ ಹನುಮಾನ್‌ ಚಾಲೀಸಾ ಪಠಣ ಸಂಕಲ್ಪ ಸಮಾರೋಪಗೊಂಡಿದೆ. ಸಮಾರೋಪ ಸಮಾರಂಭ ಎಂಬುದು ಕೇವಲ ಸಾಂಕೇತಿಕ. ಆದರೆ, ಈ ಕಾರ್ಯಕ್ರಮದಿಂದಲೇ ಇನ್ನೂ ಹೆಚ್ಚು ಹೆಚ್ಚು ಶ್ರೀ ಹನುಮಾನ್‌ ಚಾಲೀಸಾ ಪಠಣ ಆಗಬೇಕು. ಅನುಮಾನ ಬಿಡು, ಹನುಮನ ನಂಬು ಎಂಬ ಧ್ಯೇಯ ವಾಕ್ಯದೊಂದಿದೆ ಪ್ರತಿ ಮನೆ, ಮನಗಳಲ್ಲಿ ಹನುಮಾನ್‌ ಚಾಲೀಸಾ ಪಠಣ ಆಗಬೇಕಿದೆ ಎಂದರು.

ಹಾವೇರಿ ಜಿಲ್ಲೆ ಶ್ರೀಕ್ಷೇತ್ರ ಅಗಡಿ ಆನಂದವನದ ಸದ್ಗುರು ಶ್ರೀ ಶೇಷಾಚಲ ಮಹಾಸ್ವಾಮಿ ಸಂಸ್ಥಾನದ ಪೀಠಾಧಿಕಾರಿ ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಮಾತನಾಡಿ, ಇಷ್ಟೊಂದು ಜನರು ಸೇರಿ 108 ಗಂಟೆಗಳಿಂದ ಹನುಮಾನ್‌ ಚಾಲೀಸಾ ಪಠಿಸಿದ ಈ ಪುಣ್ಯ ಸ್ಥಳಕ್ಕೆ ಬಂದ ನಂತರ ಹನುಮಂತ ದೇವರ ಸಾಕ್ಷಾತ್‌ ದರ್ಶನವಾದ ಅನುಭವವಾಗಿದೆ ಎಂದರು.

ಡಾ. ವ್ಯಾಸ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಚೈತನ್ಯಾಶ್ರಮದ ಅಧ್ಯಕ್ಷ ಕೆ.ಜಿ. ಕುಲಕರ್ಣಿ, ಗಿರೀಶ ರಾಮದಾಸಿ, ಉಮೇಶ ದುಶಿ, ಶಶಿಧರ ಕುಲಕರ್ಣಿ, ರಾಮಚಂದ್ರ ಮುದ್ರೆಬೆಟ್ಟು, ಶ್ರೀಪಾದ ಪೂಜಾರ, ಡಾ. ವಿ.ಎಂ. ದೇಶಪಾಂಡೆ, ರಮೇಶ ಕುಲಕರ್ಣಿ, ವೆಂಕಟೇಶ ಸುಳ್ಳದ, ದಾಮೋದರ ಪಾಟೀಲ, ರಮೇಶ ಕುಲಕರ್ಣಿ, ಶಂಕರ ಪಾಟೀಲ, ನರೇಶ ಶಹಾ, ರಾಮಭಟ್ಟ ಗೊರ್ಲಹೊಸೂರ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗರಾಜ ದೇಸಾಯಿ ಕೊಡುಗೆ ವಿದ್ಯಾರ್ಥಿಗಳಿಗೆ ದಾರಿದೀಪ
ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ವಾಹನ: ಸಚಿವರಿಂದ ಚಾಲನೆ