ಲಕ್ಕುಂಡಿ ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ

KannadaprabhaNewsNetwork | Published : Apr 13, 2025 2:03 AM

ಸಾರಾಂಶ

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಅಗಸಿ ಮಾರುತಿ ದೇವಸ್ಥಾನದಲ್ಲಿ ಹನುಮಾ ಮಾಲಾ ಸೇವಾ ಸಮಿತಿಯ ಆಶ್ರಯದಲ್ಲಿ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಅಗಸಿ ಮಾರುತಿ ದೇವಸ್ಥಾನದಲ್ಲಿ ಹನುಮಾ ಮಾಲಾ ಸೇವಾ ಸಮಿತಿಯ ಆಶ್ರಯದಲ್ಲಿ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ಷಡಕ್ಷರಯ್ಯ ಬದ್ನಿಮಠ ಅವರ ನೇತೃತ್ವದಲ್ಲಿ ಮಾರುತಿ ದೇವರ ಮೂರ್ತಿಗೆ ಅಭಿಷೇಕ, ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದೊಂದಿಗೆ ತೊಟ್ಟಿಲ ಪೂಜೆ ನೆರವೇರಿಸಲಾಯಿತು. ವಿಧಿ ವಿಧಾನದೊಂದಿಗೆ ಹನುಮಂತ ದೇವರ ತೊಟ್ಟಿಲೋತ್ಸವ ಜೋಗುಳ ಪದದದೊಂದಿಗೆ ಸಂಪ್ರದಾಯವಾಗಿ ನಡೆಯಿತು. ನಂತರ ಅನ್ನಪ್ರಸಾದ ನಡೆಯಿತು. ಗ್ರಾಮದ ಪ್ರಮುಖ ಬೀದಿಯಲ್ಲಿ ಹನುಮನ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.ಮಾರುತಿ ನಗರ: ಇಲ್ಲಿಯ ಮಾರುತಿ ನಗರದ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅರ್ಚಕ ಕೃಷ್ಣಾ ಹಡಗಲಿ ಅವರ ನೇತೃತ್ವದಲ್ಲಿ ಮಾರುತಿ ದೇವರಿಗೆ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮುತ್ತೈದೆಯರಿಂದ ತೊಟ್ಟಿಲೋತ್ಸವ ಕಾರ್ಯಕ್ರಮ ಸಡಗರದಿಂದ ಜರುಗಿತು.ಕನ್ನರ ಭಾವಿ:ಇಲ್ಲಿಯ ಐತಿಹಾಸಿಕ ಕನ್ನರ ಭಾವಿಯ ಹನುಮಂತ ದೇವರಿಗೆ ಮಾಜಿ ಸೈನಿಕ ದತ್ತಾತ್ರೇಯ ಜೋಶಿ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ತೊಟ್ಟಿಲು ಪೂಜೆ ಮಾಡಿ ಹನುಮನ ಜಯಂತಿಯನ್ನು ಆಚರಿಸಲಾಯಿತು.

ಹನುಮ ಜಯಂತಿ, ತೊಟ್ಟಿಲೋತ್ಸವ: ಮುಳಗುಂದ ಪಟ್ಟಣದ ಚಿಂದಿಪೇಟಿ ಸೇರಿದಂತೆ ವಿವಿಧ ಓಣಿಗಳಲ್ಲಿರುವ ಶ್ರೀ ಹನುಮಾನ ದೇವಸ್ಥಾನದಲ್ಲಿ ಹನುಮ ಜನ್ಮದಿನೋತ್ಸವ ಅಂಗವಾಗಿ ಶನಿವಾರ ಶ್ರದ್ದಾ ಭಕ್ತಿ ಪೂರಕವಾಗಿ ತೊಟ್ಟಿಲೋತ್ಸವ ನಡೆಯಿತು.

ಚಿಂದಿಪೇಟಿ ಓಣಿಯಲ್ಲಿರವ ಹನುಮಂತನ ಮೂರ್ತಿಯು ಬಲ ಮುಖವಾಗಿದ್ದು, ಈ ಭಾಗದಲ್ಲಿಯೇ ವಿಶೇಷವೆನಿಸಿದೆ. ಹನುಮ ಮೂರ್ತಿಗೆ ನಾನಾ ತರಹದ ಫಲ ಪುಷ್ಪಗಳೊಂದಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನೆರವೇರಿತು. ಬಳಿಕ ಅರ್ಚಕರಿಂದ ವೇದ ಮಂತ್ರಗಳ ಪಠಣ, ಮಹಿಳೆಯರಿಂದ ಜೋಗುಳ, ತೊಟ್ಟಿಲೋತ್ಸವ ನಡೆಯಿತು. ನಂತರ ಕಡಲೆಕಾಳು ಉಸಳಿ, ಸಿಹಿ ಪ್ರಸಾದ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಮಂಜುನಾಥ ಅಣ್ಣಿಗೇರಿ, ಸಮಿತಿ ಸದಸ್ಯರಾದ ಎಂ.ಎಚ್.ಕಣವಿ, ಸಿ.ಕೆ. ಭಜಂತ್ರಿ, ಬಿ.ಎಲ್. ಜಾಧವ, ಗಂಗಾಧರ ಬಗಾಡೆ, ಚಿನ್ನಪ್ಪ ಕುಲಕರ್ಣಿ, ನಾಗಪ್ಪ ಸಿದ್ದನಗೌಡ, ಬೂದೇಶ ಸಿದ್ದನಗೌಡ್ರ, ಗೀತಾ ಜಾಧವ, ರೇಣುಕಾ ಜಾಧವ ಅರ್ಚಕ ನಾಗರಾಜ ಮುನವಳ್ಳಿ ಮೊದಲಾದವರು ಇದ್ದರು.

Share this article