ದೊಡ್ಡಬಳ್ಳಾಪುರ: ನಗರ ಮತ್ತು ತಾಲೂಕಿನ ನೂರಾರು ಹನುಮ ದೇವಾಲಯಗಳಲ್ಲಿ ಮಂಗಳವಾರ ಹನುಮ ಜಯಂತಿ ಸಂಭ್ರಮ ಮನೆ ಮಾಡಿತ್ತು. ಅಂಜನಾಪುತ್ರನಿಗೆ ಎಲ್ಲೆಲ್ಲೂ ವಿಶೇಷಾಲಂಕಾರ, ಪೂಜಾ ಕಾರ್ಯಕ್ರಮಗಳು ನಡೆದವು. ಹನುಮ ಮಂದಿರಗಳಲ್ಲಿ ಬೆಳಗ್ಗಿನಿಂದಲೇ ಜನಜಾತ್ರೆ ಕಂಡು ಬಂತು. ಸಾವಿರಾರು ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ಇಲ್ಲಿನ ಶ್ರೀನೆಲದಾಂಜನೇಯಸ್ವಾಮಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಜಯಚಾಮರಾಜೇಂದ್ರ ವೃತ್ತದ ಬಳಿ ಇರುವ ಇತಿಹಾಸ ಪ್ರಸಿದ್ದ ಶ್ರೀನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಕಾರ್ಯಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಸುಕಿನಿಂದಲೇ ಪೂಜಾ ಕಾರ್ಯಯಕ್ರಮಗಳು ಆರಂಭವಾದವು. ಆಂಜನೇಯಸ್ವಾಮಿಗೆ ಅಭಿಷೇಕ, ಪೂಜಾ ಕಾರ್‍ಯಕ್ರಮ ನಡೆದವು. ಶ್ರೀಸ್ವಾಮಿಗೆ ಬೆಳ್ಳಿ ಕವಚ, ಪುಷ್ಪಾಲಂಕಾರ ಹಮ್ಮಿಕೊಳ್ಳಲಾಗಿತ್ತು. ದೇಗುಲ ಹೊರ ಆವರಣ ಹಾಗೂ ಒಳಾಂಗಣದಲ್ಲಿ ಹೂಗಳಿಂದ ಶಂಕು, ಚಕ್ರ, ತಿರುನಾಮ, ಗದೆ ಸೇರಿದಂತೆ ವಿವಿಧ ಆಕೃತಿಗಳನ್ನು ಚಿತ್ತಾಕರ್ಷಕವಾಗಿ ಬಿಡಿಸಲಾಗಿತ್ತು. ಸಾವಿರಾರು ಜನರು ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ರೋಜಿಪುರದಲ್ಲಿ ವೀರಾಂಜನೇಯ ಬ್ರಹ್ಮರಥೋತ್ಸವ:ಇಲ್ಲಿನ ರೋಜಿಪುರ- ಗಂಗಾಧರಪುರ ಬಡಾವಣೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಬ್ರಹ್ಮರಥೋತ್ಸವ ನಡೆಯಿತು. ಅಲಂಕೃತ ತೇರಿನಲ್ಲಿ ಶ್ರೀಸ್ವಾಮಿಯನ್ನು ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವ ಸಂಪನ್ನಗೊಂಡಿತು. ದೇವಾಲಯದಲ್ಲಿರುವ ಮೂಲದೇವರಿಗೆ ಡ್ರೈಫ್ರೂಟ್ಸ್ ಅಲಂಕಾರ ಮಾಡಲಾಗಿತ್ತು. ಕಳೆದ ಹಲವು ದಿನಗಳಿಂದ ನಡೆದ ಅಖಂಡ ಭಜನಾ ಕಾರ್ಯಕ್ರಮ ಇದೇ ವೇಳೆ ಸಂಪನ್ನಗೊಂಡಿತು.
ತಾಲೂಕಿನ ಸುಪ್ರಸಿದ್ದ ಹನುಮ ಕ್ಷೇತ್ರ ಎನಿಸಿರುವ ರಾಜಘಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷಪೂಜಾ ಕಾರ್ಯಯಕ್ರಮಗಳು ನಡೆದವು. ದೇವಾಲಯದ ಮೂಲ ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಹಲವೆಡೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.
ಇಲ್ಲಿಗೆ ಸಮೀಪದ ಕುಂದಾಣ ಹೋಬಳಿ ಬನ್ನಿಮಂಗಲ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ನೇತೃತ್ವದಲ್ಲಿ ಹನುಮ ಜಯಂತಿ ಅಂಗವಾಗಿ ಹೋಮ, ಉತ್ಸವ ಹಾಗೂ ವಿನಾಯಕ ಸ್ವಾಮಿ ಹೋಮ ಹಮ್ಮಿಕೊಳ್ಳಲಾಗಿತ್ತು. ಹನುಮ ಜಯಂತಿ ಅಂಗವಾಗಿ ಶ್ರೀಸ್ವಾಮಿಗೆ ಬೆಳ್ಳಿ ವಜ್ರಾಂಗಿ ಅಲಂಕಾರ ಏರ್ಪಡಿಸಲಾಗಿತ್ತು. ಪ್ರಾಕಾರೋತ್ಸವ, ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಯಕ್ರಮಗಳು ನಡೆದವು.
ಇಲ್ಲಿನ ಅರಳುಮಲ್ಲಿಗೆ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ, ಉತ್ಸವ ನಡೆದವು. ಅದೇ ರೀತಿ ಕಚೇರಿ ಆವರಣದಲ್ಲಿರುವ ಹನುಮ ಮಂದಿರ, ಶಿವಪುರ ಬಾಗಿಲು ಆಂಜನೇಯಸ್ವಾಮಿ ದೇವಾಲಯ, ರಂಗಪ್ಪ ವೃತ್ತದಲ್ಲಿರುವ ಬಾಲಾಂಜನೇಯ ದೇವಾಲಯ, ರಾಮಣ್ಣನ ಬಾವಿ ಬಳಿಯ ರಾಮಾಂಜನೇಯಸ್ವಾಮಿ ದೇವಾಲಯ, ಖಾಸ್‌ಬಾಗ್‌ನ ಹನುಮ ದೇವಾಲಯ, ರೈಲು ನಿಲ್ದಾಣ ಬಳಿಯ ಆಂಜನೇಯಸ್ವಾಮಿ ದೇವಾಲಯ, ಶಾಂತಿನಗರದ ಹನುಮ ಮಂದಿರ, ಮಜರಾಹೊಸಹಳ್ಳಿ ಅಭಯ ಆಂಜನೇಯ, ಬಾಶೆಟ್ಟಿಹಳ್ಳಿ ಆಂಜನೇಯ ಸೇರಿದಂತೆ ಊರಿನ ಬೀದಿ ಬೀದಿಗಳಲ್ಲೂ ಹನುಮನ ನಾಮಸ್ಮರಣೆ ನಡೆದವು.