ಧಾರವಾಡ:
ಡಯಟ್ ಬಳಿಯ ಎಂ.ಎಂ. ದಾಮೋದರ ಮನೆ ಆವರಣದಲ್ಲಿರುವ ಹನುಮ ದೇವಸ್ಥಾನ ಹಾಗೂ ಎದುರಿನ ರಸ್ತೆಯ ಎರಡೂ ಬದಿಗೆ ಜಯಂತಿ ಅಂಗವಾಗಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಲಿವೆ ಎಂದು ಕಿಶೋರ ದಾಮೋದರ ಮಾಹಿತಿ ನೀಡಿದರು.
ಹಳೇ ಧಾರವಾಡದ 11ನೇ ಶತಮಾನದ ಪುರಾತನ ಮುದಿ ಮಾರುತಿ ದೇವಸ್ಥಾನದಲ್ಲೂ ಹನುಮ ಜಯಂತಿಗೆ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಗುರುವಾರ ಸಂಜೆ 4ಕ್ಕೆ ರಥೋತ್ಸವ, ಏ. 3ರಂದು ಸತ್ಯ ನಾರಾಯಣ ಪೂಜೆ ಹಾಗೂ 10 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಲಿದೆ ಎಂದು ಟ್ರಸ್ಟ್ ಕಮಿಟಿಯ ವೀರಣ್ಣ ಪತ್ತಾರ ತಿಳಿಸಿದರು. ಗುಲಗಂಜಿಕೊಪ್ಪ ಮಾರುತಿ ದೇವಸ್ಥಾನದಲ್ಲಿ ಮೊದಲ ಬಾರಿಗೆ ಹನುಮಂತ ದೇವರ ಜಾತ್ರೆ ಹಾಗೂ ರಥೋತ್ಸವ ಗುರುವಾರ ಸಂಜೆ ನಡೆಯಲಿದೆ. ಈ ಜಾತ್ರಾ ಕಾರ್ಯಕ್ರಮಗಳು ಈಗಾಗಲೇ ಯುಗಾದಿ ದಿನವೇ ಶುರುವಾಗಿದ್ದು, ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.ಇಂದು ರಥೋತ್ಸವ:
ಇನ್ನು, ಹನುಮ ಜಯಂತಿ ಮುನ್ನಾ ದಿನವೇ ಬುಧವಾರ ದವನದ ಹುಣ್ಣಿವೆಯಂದು ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ 4ಕ್ಕೆ ಅಭಿಷೇಕ, ಅಲಂಕಾರಗಳಿಂದ ಆರಂಭವಾಗಿ, 6.25ಕ್ಕೆ ಹನುಮಂತ ದೇವರಿಗೆ ತೊಟ್ಟಿಲೋತ್ಸವವು ನಡೆಯಿತು. ಬೆಳಗ್ಗೆ 11ಕ್ಕೆ ರಥೋತ್ಸವ ನಂತರ ಪಲ್ಲಕ್ಕಿ ಉತ್ಸವವು ಶ್ರದ್ಧಾ-ಭಕ್ತಿಯಿಂದ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ನಡೆಯಿತು.