ಡಿ.13ರಂದು ಕುಶಾಲನಗರದಲ್ಲಿ ಅದ್ಧೂರಿ ಆಚರಣೆ । ಮಂಟಪಗಳ ಬಗ್ಗೆ ಚರ್ಚೆ
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರದಲ್ಲಿ ಡಿ.13ರಂದು ಆಚರಿಸಲು ಉದ್ದೇಶಿಸಿರುವ ಹನುಮ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆ ವಾಸವಿ ಸಭಾಂಗಣದಲ್ಲಿ ನಡೆಯಿತು.ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹನುಮ ಜಯಂತಿ ಅದ್ದೂರಿ ಆಚರಣೆ ಹಾಗೂ ಯಶಸ್ಸಿಗೆ ಕೈಗೊಳ್ಳಬೇಕಾದ ಅಗತ್ಯ ಸಿದ್ಧತೆ, ತಯಾರಿ ಕುರಿತು ವಿವಿಧ ಗ್ರಾಮಗಳ ಮಂಟಪ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು.ಸಭೆಯಲ್ಲಿ ಎಚ್.ಆರ್.ಪಿ. ಕಾಲನಿ, ಮುಳ್ಳುಸೋಗೆ, ಕೂಡಿಗೆ, ಚಿಕ್ಕತ್ತೂರು-ಹಾರಂಗಿ, ಗುಡ್ಡೆಹೊಸೂರು, ಬೈಚನಹಳ್ಳಿ ಉತ್ಸವ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಹಿಂದೂ ಸಂಸ್ಕೃತಿಗೆ ಧಕ್ಕೆ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮ ನಡೆಯಬೇಕಿದೆ. ಮೆರವಣಿಗೆ ಸಂದರ್ಭ ಸಿನಿಮಾ ಹಾಡುಗಳನ್ನು ನಿರ್ಬಂಧಿಸಿ ದೇವರ ಹಾಡುಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಸಭೆಯಲ್ಲಿದ್ದ ಸಚಿನ್, ಅನುದೀಪ್ ಆಗ್ರಹಿಸಿದರು.ತೀರ್ಪುಗಾರಿಕೆಯಲ್ಲಿ ಲೋಪ ಉಂಟಾಗದಂತೆ, ಅಸಮಾಧಾನಕ್ಕೆ ಕಾರಣವಾಗದಂತೆ ಎಚ್ಚರವಹಿಸಲು ತೀರ್ಪುಗಾರಿಕೆ ಪಾರದರ್ಶಕವಾಗಿರಬೇಕು. ಈ ನಿಟ್ಟಿನಲ್ಲಿ ಸೂಕ್ತವಾದ ತೀರ್ಪುಗಾರರ ಆಯ್ಕೆ ಮಾಡಬೇಕಿದೆ. ಎಲ್ಲ ಮಂಟಪಗಳು ಒಂದೆಡೆ ಸೇರಿ ಕಥಾ ಪ್ರದರ್ಶನ ನೀಡಲು ಸಮಯ ಹೆಚ್ಚು ಬೇಕಾಗಲಿದೆ. ಆದರೆ 10 ಗಂಟೆ ಒಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಲು ನಿರ್ಬಂಧ ವಿಧಿಸಿರುವ ಕಾರಣ ಅನನುಕೂಲ ಉಂಟಾಗಲಿದೆ. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಬೇಕಿದೆ, ಎಲ್ಲ ಮಂಟಪಗಳಲ್ಲಿ ಡಿಜೆ ಬಾಕ್ಸ್ ಅಳವಡಿಕೆ ಸಂಖ್ಯೆ ಕೂಡ ಏಕರೂಪವಾಗಿರಬೇಕು, ಒಂದು ಸಮಿತಿಯವರು ಮತ್ತೊಂದು ಸಮಿತಿಯ ಮಂಟಪಗಳನ್ನು ಕೆಣಕುವ ರೀತಿಯ ವರ್ತನೆ ಸಲ್ಲದು, ಸಮಯಕ್ಕೆ ಸರಿಯಾಗಿ ಎಲ್ಲ ಮಂಟಪಗಳು ನಿಗದಿತ ಸ್ಥಳದಿಂದ ಹೊರಟು, ಪ್ರದರ್ಶನ ಸಂದರ್ಭ ಇತರೆ ಮಂಟಪಗಳಿಗೂ ತೊಂದರೆಯಾಗದಂತೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವ ವಿಚಾರಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಮಾತನಾಡಿ, ಈ ಹಿಂದೆ ಉಂಟಾದ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಹಾಗೂ ಅತ್ಯಂತ ಅದ್ದೂರಿ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಸಮಿತಿಯ ಸಹಕಾರ ಅತ್ಯಗತ್ಯ. ಕುಶಾಲನಗರದಲ್ಲಿ ನಡೆಯುವ ಕಾರ್ಯಕ್ರಮ ಎಲ್ಲೆಡೆ ಮನೆಮಾತಾಗಬೇಕಿದೆ. ಸಮಯಾವಕಾಶ ಮತ್ತಿತರ ನಿರ್ಬಂಧಿತ ವಿಚಾರಗಳಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಂತೆ ಶಾಸಕರ ಸಮ್ಮುಖದಲ್ಲಿ ಮತ್ತೊಮ್ಮೆ ಸಭೆ ಕರೆಯಬೇಕಿದೆ. ಶಾಸಕರು, ಸಂಸದರು, ಮಾಜಿ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕಿದೆ ಎಂದು ತಿಳಿಸಿದರು.ಸಭೆಯಲ್ಲಿ ಶ್ರೀ ಆಂಜನೇಯ ದೇವಾಲಯ ಸಮಿತಿಯ ಅಧ್ಯಕ್ಷ ಪುಂಡರೀಕಾಕ್ಷ, ಉತ್ಸವ ಸಮಿತಿ ಅಧ್ಯಕ್ಷ ರಾಜೀವ, ದಶಮಂಟಪ ಸಮಿತಿ ಉಪಾಧ್ಯಕ್ಷ ಎಚ್.ಟಿ.ವಸಂತ, ಪ್ರಧಾನ ಕಾರ್ಯದರ್ಶಿ ರಾಮನಾಥನ್, ಸಹ ಕಾರ್ಯದರ್ಶಿ ಸುನಿಲ್, ಸದಸ್ಯ ಅಮೃತ್ ರಾಜ್, ವಿವಿಧ ಮಂಟಪಗಳ ಸಮಿತಿ ಪ್ರಮುಖರಾದ ಮಂಜುನಾಥ್, ಅವಿನಾಶ್, ಶಿವಣ್ಣ, ಗುರುಪ್ರಸಾದ್, ಧರ್ಮ, ಅರುಣ ಸೇರಿದಂತೆ ಎಂ.ಬಿ.ಹರ್ಷ, ಕೆ.ಜಿ.ಮನು, ಶಿವಾಜಿ, ಸುಮನ್, ರಾಜೀವ ಮತ್ತಿತರರು ಇದ್ದರು.